ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ-ಗಝಲ್

ಕಾವ್ಯ ಸಂಗಾತಿ

ಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಗಝಲ್

ಈಗೀಗ ದಾರಿ ಸಲೀಸಾಗಿದೆ
ನೀರಾಳವಾಗಿದೆ……

ಅನಿಸುತ್ತಿತ್ತು ಮೊದಮೊದಲು
ಕಲ್ಲುಗಳೇ ತುಂಬಿರುವ ದಾರಿಯಲ್ಲಿ
ನಡೆಯುವುದು ಮುಂದೆ ಸಾಗುವುದು ಹೇಗೆಂದು?!
ದಿನಗಳೆದಂತೆ
ಕಲ್ಲುಗಳ ದಾಟಿ ಹೃದಯಮೀಟಿ
ಎಡವಿ ಬೀಳದಂತೆ
ನಡೆಯುವುದನ್ನು ಕಲಿತಿರುವೆ
ದಾರಿಯೆಲ್ಲ ಸಲೀಸಾಯಿತು
ಕಲ್ಲುಗಳೆಲ್ಲ ಹೂವಾಗಿ ಅರಳಿದವು

ಭಯವಾಗುತ್ತಿತ್ತು
ದಾರಿಮಧ್ಯೆ ಹರವಿಕೊಂಡು
ನಾಲಿಗೆ ಚಾಚಿಕೊಂಡು
ಹೆಜ್ಜೆ ಹೆಜ್ಜೆಗೂ ಚುಚ್ಚಿಕೊಳ್ಳುವ
ಮುಳ್ಳುಕಂಟಿ ಕಂಡಾಗ…..
ದಿಗಿಲಾಗುತ್ತಿತ್ತು
ಹೇಗೆ ನಡೆದು ಹೋಗುವುದೆಂದು?!

ಕಲಿತುಕೊಂಡೆ
ಚಪ್ಪಲಿ ಹಾಕಿಕೊಂಡು ನಡೆಯುವುದನ್ನು
ಅರಿತುಕೊಂಡೆ
ಮುಳ್ಳುಗಳನ್ನೆಲ್ಲ ಸವರಿ ಬದುವಿಗೆ ಸರಿಸುವುದನ್ನು
ಮುಳ್ಳುಗಳೆಲ್ಲ ನಕ್ಷತ್ರವಾಗಿ ನಕ್ಕವು

ದಾರಿಯುದ್ಧಕ್ಕೂ ನೂರಾರು
ಕಂದರಗಳು ದಿಬ್ಬಗಳು
ಏರಿಳಿಯುವುದರಲ್ಲೇ ಬದುಕೇ
ಮುಗಿಯುವುದೆಂದು ತಲ್ಲಣಿಸಿದಾಗ
ಇಡುವ ಸಹಜ ಹೆಜ್ಜೆ
ಗಟ್ಟಿಯಾಗುತ್ತಾ ಸಾಗಿತ್ತು
ಬಯಸಿದ ತಾಣ ಕಣ್ಣೆದುರಿಗೇ ಇತ್ತು
ಮನಸ್ಸು ದೃಢವಾಗಿತ್ತು ಮಾಗಿತ್ತು
ಗಿರಿ ಕಂದರಗಳು ಹೆಮ್ಮೆಯಿಂದ ಬಾಗಿದವು

———-

ಸುದಿನ ಜಯವ ಬಯಸಿ ಕರವ
ಮುಗಿದು ಹನುಮನ ಕರೆದೆಯಲ್ಲ/
ಆದಿನ ಮನದ ಕಾರುಣ್ಯ ಭಕ್ತಿಯ
ನೆನೆದು ರಾಮನಾಮ ಬರೆದೆಯಲ್ಲ//

ಮಾಯಾವಿಯ ಕುತಂತ್ರವ ತಿಳಿದರು ನಿರ್ಗವಿಯಾಗಿ
ಬೆನ್ನತ್ತಿ ಹೋದದ್ದು ಸರಿಯೇ/
ದುರುಳರ ರಕ್ಕಸದ ಬುದ್ದಿಯ ಕಂಡರು
ಶಾಂತಿ ಸಹನೆ ಮೆರೆದೆಯಲ್ಲ//

ನ್ಯಾಯನೀತಿ ಮರೆಯುತ ಸರ್ವಸ್ವ ನನ್ನವರೆಂದು
ದುಃಖಿಸದೆ ಸಾಗಿದ್ದು ಸರಿಯೇ/
ವಚನಕ್ಕೆ ಕಟ್ಟುಬಿದ್ದು ಸಿಕ್ಕಿದ್ದ ಅಧಿಕಾರ
ಅಂತಸ್ತಿನ ಮೋಹವ ತೊರೆದೆಯಲ್ಲ//

ಜಗಕ್ಕೆ ಆದರ್ಶ ಪುರುಷೋತ್ತಮ ನೀನಾಗಿ
ಸೀತಾಮಾತೆಯ ಪರೀಕ್ಷಿಸಿದ್ದು ಸರಿಯೇ/
ವಾನರ ಸಹಾಯದಿ ಸೇತುವೆಯ ನಿರ್ಮಿಸಿ
ರಾವಣನಿಂದ ಜಾನಕಿಯ ಪೊರೆದೆಯಲ್ಲ//

ಜೊತೆಯಲ್ಲೇ ಸ್ನೇಹದಿ ನಂಬಿಕೆಗೆ ಹೆಗಲಾಗಿದ್ದವರೇ
ದ್ರೋಹವ ಎಸಗುವರು ಕಟ್ಟೆ/
ದುರ್ಜನರ ಕ್ಷಮಿಸಿ ಮಮತೆಯ ಧಾರೆಯೆರದು
ಭಾಗ್ಯದ ಕದವ ತೆರೆದೆಯಲ್ಲ//


Leave a Reply

Back To Top