ಜಯಶ್ರೀ.ಜೆ.ಅಬ್ಬಿಗೇರಿ-ಹೂವಿಗೆ ನೀರಿದ್ದಂತೆ ಮಾನವ ಜೀವನಕ್ಕೆ ಗೆಳೆತನ

ವಿಶೇಷ ಲೇಖನ

ಜಯಶ್ರೀ.ಜೆ.ಅಬ್ಬಿಗೇರಿ

ಹೂವಿಗೆ ನೀರಿದ್ದಂತೆ

ಮಾನವ ಜೀವನಕ್ಕೆ ಗೆಳೆತನ

ಒಬ್ಬ ನಿರಾಶಾವಾದಿ ತತ್ವಜ್ಞಾನಿ ಹೇಳಿದ ‘ಜೀವನದಲ್ಲಿ ಸಾವು ನೋವು ಬಿಟ್ಟರೆ ಏನಿದೆ? ಆಶಾವಾದಿಯ ಮಾತು ಹೀಗಿಲ್ಲ. ಅದು ಜೀವನದ ಪ್ರತಿ ಪ್ರೀತಿ ತುಂಬುತ್ತದೆ.’ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಉಲ್ಲಾಸ ಅನುಭವಿಸುವುದಕ್ಕೆ ಗೆಳೆತನವು ಒಂದು ಸುಂದರ ಸಾಧನ.’ ಎನ್ನುತ್ತದೆ.

ಗೆಳೆತನವೆಂದರೆ, , , ,?

’ನಗುವಿಗೆ ನೋವಿಗೆ ಜೊತೆಯಾಗಿರುವ ಇನ್ನೊಂದು ಮನಸ್ಸಿನ ರೂಪವೇ ಗೆಳೆತನ. ಸ್ನೇಹ ಎಂಬ ಪದದಲ್ಲಿ ಏನೋ ಹೇಳಲಾಗದ ಸೆಳೆತವಿದೆ. ಉಳಿದ ಸಂಬಂಧಗಳಲ್ಲಿ ಕಾಳಜಿ ಪ್ರೀತಿ ಸಿಕ್ಕರೂ ಇದರ ಸಮವಲ್ಲ ಅನಿಸುವ ಅಪ್ಯಾಯತೆಯ ಭಾವವಿದೆ. ಅನೂಹ್ಯವಾದ ಆತ್ಮೀಯ ಬಂಧವಿದೆ. ಇದರಲ್ಲಿ ದ್ವೇಷ ಅಸೂಯೆ ಸ್ವಾರ್ಥಗಳು ಹತ್ತಿರವೂ ಸುಳಿಯುವುದಿಲ್ಲ. ಗೆಳೆತನದ ಆಹ್ಲಾದತೆಯ ತೆಕ್ಕೆಯಲ್ಲಿ ಬಿದ್ದವರಿಗೆ ಗೊತ್ತು ಆ ಖುಷಿ. ಮನಸ್ಸು ಮನಸ್ಸುಗಳ ಬಾಂಧವ್ಯದಲ್ಲಿ ಇರುವವರಿಗೆ ಎಲ್ಲೂ ಸಿಗದ ಒಡನಾಟ, ಆತ್ಮೀಯತೆ, ಕಾಳಜಿ ಇದರಲ್ಲಿದೆ ಅಂತ ಅನಿಸದೇ ಇರದು. ಮೂಗ ಬೆಲ್ಲ ತಿಂದು ವರ್ಣಿಸಲಾಗದ ಸ್ಥಿತಿಯಂತೆ ಗೆಳೆತನದ ಖುಷಿ. ಗೆಳೆತನದಲ್ಲಿ ಪಡೆದ ಆನಂದ ಪಡೆದವರಿಗೆ ಗೊತ್ತು. ಮನೆಯವರಿಗೂ ಹೇಳದ ನೋವುಗಳನ್ನು ಸ್ನೇಹಿತರ ಮುಂದೆ ಸರಾಗವಾಗಿ ಬಿಚ್ಚಿಡುತ್ತದೆ ಮನಸ್ಸು. ಬೇಸರ ಸಂಕಟಗಳ ಸರಮಾಲೆಯಲ್ಲಿ ಸಿಕ್ಕಾಗ ನಲಿವಿನ ಕ್ಷಣಗಳನ್ನು ಕಣ್ಮುಂದೆ ತಂದು ಮಂದಹಾಸ ಚೆಲ್ಲುವಂತೆ ಮಾಡುತ್ತದೆ ಈ ಸ್ನೇಹ.

ಪುನಃ ಪುನಃ ಸಂತೋಷ

ಗೆಳೆತನದ ವಿಚಾರದಲ್ಲಿ ಕೃಷ್ಣಸುಧಾಮರ ಶ್ರೇಷ್ಠ ಉದಾಹರಣೆ ಕೇಳಿಯೇ ಇರುತ್ತೇವೆ. ಹಾಗೆಯೇ ಕರ್ಣ ದುರ್ಯೋಧನರ ಹೆಸರನ್ನು ಕೇಳಿದ್ದೇವೆ. ಕರ್ಣ ದಾನಶೂರನೆಂದು ಖ್ಯಾತನಾಗಿದ್ದರೂ ದುರ್ಯೋಧನನ ಗೆಳೆತನ ಮಾಡಿ ಹಾಳಾದ. ‘ನಿನ್ನ ಗೆಳೆಯರನ್ನು ತೋರಿಸು ನೀನು ಎಂಥವನು ಎಂದು ಹೇಳುತ್ತೇನೆ.’ ಎಂಬ ಮಾತೊಂದಿದೆ. ನಮ್ಮ ಗೆಳೆಯರು ನಮ್ಮ ಕನ್ನಡಿಗಳಿದ್ದಂತೆ. ಇದ್ದದ್ದನ್ನು ಇದ್ದಂತೆ ಹೇಳಿ ಲೋಪದೋಷಗಳನ್ನು ತಿದ್ದಿ ತೀಡುವವರು ಆಪ್ತ ಸ್ನೇಹಿತರು. ನೆಚ್ಚಿನ ಗೆಳೆಯರನ್ನು ಪುನಃ ಪುನಃ ಭೇಟಿಯಾದರೂ ಅದು ಪುನಃ ಪುನಃ ಸಂತೋಷ ನೀಡುತ್ತದೆ. ಗಟ್ಟಿ ಬಾಂಧವ್ಯವನ್ನು ಹೆಚ್ಚಿಸುತ್ತದೆ. ನಿಜವಾದ ಗೆಳೆಯರು ನಮ್ಮ ಗೆಲುವಿಗೆ ಹೆಮ್ಮ ಪಡುತ್ತಾರೆ ಅಭಿಮಾನಿಸುತ್ತಾರೆ. ಸೋತಾಗ ಕೈ ಹಿಡಿದು ಎತ್ತುತ್ತಾರೆ. ಎಷ್ಟೇ ಸಿರಿವಂತಾಗಿದ್ದರೂ ಗೆಳೆಯರು ಇರದಿದ್ದರೆ ಅವನು ಬಡವನೇ ಸರಿ. ಬದುಕಿನ ಗುರಿ ಧನ-ಕನಕವಲ್ಲ. ಮನಸ್ಸಿಗೆ ಮುದ ನೀಡುವ, ಏಳ್ಗೆ ಬಯಸುವ ಗೆಳೆತನವೇ ನೈಜ ಸಿರಿ.

ಅದ್ಭುತ ಶಕ್ತಿ

ಗೆಳೆತನಕ್ಕೆ ನಮ್ಮ ಬದುಕನ್ನೇ ಮುನ್ನಡೆಸುವ ಅದ್ಭುತ ಶಕ್ತಿಯಿದೆ ಎಂಬುದು ಒಪ್ಪಲೇಬೇಕಾದ ಸತ್ಯ. ನಿಜವಾದ ಗೆಳೆಯರಿದ್ದರೆ ಬದುಕು ಎಂದೂ ಬತ್ತುವುದಿಲ್ಲ ಬರಡಾಗುವುದೂ ಇಲ್ಲ. ಗಡಿಗೆ ಒಡೆದರೂ ಮಣ್ಣು ಒಡೆಯುವುದಿಲ್ಲ. ಹಾಗೆಯೇ ಗೆಳೆಯರು ದೂರವಾದರೂ ಗೆಳೆತನ ಮರೆಯುವುದಿಲ್ಲ. ಜೀವನದ ಏರಿಳಿತಗಳಲ್ಲಿ ಎಷ್ಟೋ ದೂರದಲ್ಲಿದ್ದರೂ ಮಿಡಿಯುವ ನಮ್ಮೊಂದಿಗೆ ಬೆರೆಯುವ ಸಂಬಂಧವೇ ಸ್ನೇಹ. ಒಂದು ಉತ್ತಮ ಗೆಳೆತನ ಯಾವಾಗ ಎಲ್ಲಿ ಹೇಗೆ ಆರಂಭವಾಗುತ್ತದೆ ಅನ್ನೋದು ಹೇಳಲಾಗುವುದಿಲ್ಲ. ಅದಕ್ಕೆ ವಯಸ್ಸಿನ ಸಿರಿತನ ಬಡತನದ ನಿರ್ಬಂಧವಿಲ್ಲ. ಒಂದು ಸಣ್ಣ ನಗು, ಚಿಕ್ಕ ಸಹಾಯವೂ ಒಂದೊಳ್ಳೆ ಉತ್ತಮ ಸ್ನೇಹಕ್ಕೆ ಕಾರಣವಾಗಬಹುದು. ನೋಡ ನೋಡುತ್ತಲೇ ಸ್ನೇಹದ ಬಳ್ಳಿಯ ನೆತ್ತಿಯ ಮೇಲೆ ಹೂವು ಬಿಟ್ಟು ಪರಿಮಳ ಸೂಸಬಹುದು. ಗೆಳೆತನ ನಮ್ಮ ಬೆನ್ನ ಹಿಂದಿದ್ದರೆ ಸಾಕು ಬೆಟ್ಟದಂತಹ ಕಷ್ಟಗಳನ್ನು ದಾಟುವುದು ಹೂವನ್ನು ಎತ್ತಿದಷ್ಟು ಸಲೀಸಾಗುತ್ತದೆ. ಸ್ನೇಹ ಕೊಡುವ ಕಸುವನ್ನು ಇನ್ನಾವ ಸಂಬಂಧವೂ ಕೊಡಲಾರದು ಎಂಬ ಮಾತನ್ನು ಒಪ್ಪಲೇಬೇಕು.

ಉಪಯೋಗಿಸಿ ಎಸೆಯಬೇಡಿ

ಸಮಯವನ್ನು ಕೊಲ್ಲುವುದಕ್ಕಾಗಿ ಇಲ್ಲವೇ ತಮ್ಮ ಸ್ವಾರ್ಥಕ್ಕಾಗಿ ಗೆಳೆತನ ಮಾಡುವವರು ಇಲ್ಲದಿಲ್ಲ. ಹಿಮದಂತೆ ಹೆಪ್ಪುಗಟ್ಟಿದ ನೋವೆಲ್ಲ ಕರಗಿಸಿ ನೀರಾಗಿಸುವ ಸ್ನೇಹವನ್ನು ಉಪಯೋಗಿಸಿ ಎಸೆಯುವುದಕ್ಕೆ ಬಳಸಿಕೊಳ್ಳಬಾರದು. ಬೆಳೆದ ಸ್ನೇಹವನ್ನು ಜತನವಾಗಿ ಕಾಪಿಟ್ಟುಕೊಳ್ಳುವುದೂ ಒಂದು ಕಲೆ. ನಮ್ಮ ಸ್ನೇಹ ಬೇಡವೆಂದು ದೂರ ಸರಿದವರಿಂದ, ಕಾರಣಕ್ಕಾಗಿ ಸದಾ ಹಂಬಲಿಸುವುದು ಮನಸ್ಸು. ಆದ್ದರಿಂದ ತೊರೆಯುವ ಮುನ್ನ ನಿಜವಾದ ಕಾರಣ ತಿಳಿಸುವುದು ಒಳಿತು. ಕಾರಣ ಗೊತ್ತಾದರೆ ಮನಸ್ಸು ಗೊಂದಲದಿಂದ ಹೊರ ಬಂದು ನಿರಾಳವಾಗಿರುತ್ತದೆ.
ಬಾಳು ಬೆಳಗಿಸುವ ಸ್ನೇಹವಿರಲಿ
ಕೆಲವರು ಬಡತನ ನಿರುದ್ಯೋಗ ಕೀಳರಿಮೆಯ ಕಾರಣದಿಂದ ಗೆಳೆತನಕ್ಕೆ ಕೈ ಚಾಚುವುದಿಲ್ಲ. ಇನ್ನೂ ಕೆಲವರು ಹಣ ಐಶ್ವರ್ಯ ಅಹಂಕಾರ ಘನತೆಯನ್ನು ಮುಂದಿಟ್ಟುಕೊಂಡು ಗೆಳೆತನಕ್ಕೆ ಮುಂದಾಗುವುದಿಲ್ಲ. ಗೆಳೆತನವು ನಾವು ಬಯಸುವ ಸ್ವೀಕರಿಸುವ ಜೋಪಾನವಾಗಿಟ್ಟುಕೊಳ್ಳುವ ಆಧಾರದ ಮೇಲೆ ಬೆಳೆಯುತ್ತದೆ. ಹಳ್ಳಕ್ಕೆ ತಳ್ಳುವ, ಹಾಳು ಮಾಡುವ ಗೆಳೆತನಗಳೂ ಉಂಟು ಆದರೆ ಬದುಕಿಸುವ ಬಾಳು ಬೆಳಗಿಸುವ ಸ್ನೇಹ ನಮ್ಮದಾಗಿರುವಂತೆ ನೋಡಿಕೊಳ್ಳಬೇಕು. ಸ್ನೇಹ ಲೋಕದಲ್ಲಿ ಮಗ್ನರಾದರೆ ಜಗವು ಸುಂದರ ನಂದನವನದಂತೆ ಗೋಚರವಾಗುತ್ತದೆ. ನಿಷ್ಕಲ್ಮಷ ಹೃದಯದ ನಿಸ್ವಾರ್ಥ ಪ್ರೀತಿಯಿದ್ದರೆ ಮಾತ್ರ ಆಪ್ತ ಗೆಳೆತನ ಸಾಧ್ಯ. ನಿರಾಸೆಯಲ್ಲಿ ಬಿದ್ದು ಹತಾಶೆ ಖಿನ್ನತೆ ಅನುಭವಿಸುತ್ತಿರುವ ಜೀವಗಳಿಗೆ ಗೆಳೆತನದ ಆಸರೆ ಸಿಕ್ಕರೆ ಸಾಕು ಆಸೆ ಚಿಗುರೊಡೆದು ಜೀವನದ ಮೊಗ್ಗು ಹಿಗ್ಗುವುದು. ತೊಂದರೆಯನ್ನು ಉಂಟು ಮಾಡುವವರೊಡನೆ ಕರುಣೆಯಿಂದ ಇರಬೇಕು. ಇಲ್ಲದಿದ್ದರೆ ಕುಪಿತರಾಗಿ ದುಃಖಿತರಾಗುತ್ತೇವೆ. ಜ್ಞಾನದಲ್ಲಿ ಗುಣದಲ್ಲಿ ನಮಗಿಂತ ಮೇಲಿರುವವರ ಜತೆ ಸ್ನೇಹ ಬೆಳೆಸಿಕೊಂಡರೆ ಮಲ್ಲಿಗೆ ಕಂಪಿನಲ್ಲಿ ಮಿಂದೆದ್ದ ಹಾಗೆ ಭಾಸವಾಗುವುದು.

ಮೈತ್ರಿ ಇರಲಿ

‘ಅದ್ವೇಷ್ವಾ ಸರ್ವ ಭೂತಾನಾಂ’ ಯಾರ ಬಗ್ಗೆಯೂ ದ್ವೇಷವನ್ನು ಹೊಂದದಿರುವುದು ಎನ್ನುತ್ತಾನೆ ಭಗವಾನ್ ಶ್ರೀಕೃಷ್ಣ. ಪ್ರೀತಿಗಿಂತಲೂ ನಮ್ಮನ್ನು ಹೆಚ್ಚು ಹಿಡಿದಿಡುವುದು ದ್ವೇಷ. ಏಕೆಂದರೆ ಯಾರನ್ನು ದ್ವೇಷಿಸುತ್ತೇವೆಯೋ ಅವರೊಡನೆ ಜೀವಿಸುತ್ತೇವೆ. ಲಕ್ಷ್ಮೀ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆಂದರೂ ಮನುಷ್ಯ ಒಬ್ಬನೇ ತನ್ನಷ್ಟಕ್ಕೆ ತಾನೇ ಬದುಕಲು ಸಾಧ್ಯವಿಲ್ಲ. ದ್ವೇಷದಲ್ಲಿ ಮತ್ತೊಬ್ಬರನ್ನು ಮಾನಸಿಕವಾಗಿ ಹೊತ್ತುಕೊಂಡು ತಿರುಗುವುದಕ್ಕಿಂತ ಗೆಳೆತನದ ಬೆಸುಗೆಯನ್ನು ಸವಿಯುವುದು ಲೇಸು. ಅವರ ಸಲುವಾಗಿ ಅಲ್ಲದಿದ್ದರೂ ನಮ್ಮ ಸಲುವಾಗಿ ದ್ವೇಷವನ್ನು ಬಿಟ್ಟು ಮೈತ್ರಿ ಬೆಳೆಸಿಕೊಳ್ಳುವುದು ಉತ್ತಮ. ಇತರರ ಅಹಂಕಾರವನ್ನು ಗುರುತಿಸುತ್ತ ನಾವೇ ಸ್ವತಃ ಅಹಂಕಾರಿಗಳಾಗಿ ಬಿಡುತ್ತೇವೆ. ಅವರಿಗೆ ಸಮಸ್ಯೆ ಆಗುತ್ತದೆಯೋ ಇಲ್ಲವೋ ನಮಗಂತೂ ಸಮಸ್ಯೆ ಶುರುವಾಗುತ್ತದೆ. ಬೇರೆಯವರು ಸಣ್ಣಪುಟ್ಟ ಕ್ಷುಲ್ಲಕ ವಿಷಯಗಳಿಗೆ ನಮ್ಮನ್ನು ಅಪಮಾನಿಸಿದಾಗ ನಾವು ಅದನ್ನು ಸಹಕರಿಸದ ಹೊರತು ಅದು ನಮ್ಮ ಆತ್ಮಗೌರವವನ್ನು ಬಾಧಿಸದು ಎಂಬುದನ್ನು ಮರೆಯುವಂತಿಲ್ಲ. ಬೇರೆಯವರೊಂದಿಗೆ ಬೆರೆತು ಅರಿತು ಬಾಳಬೇಕಾದ ಅನಿವಾರ್ಯತೆಯಿದೆ.ಸುಂದರ ಮನಸ್ಸನ್ನು ನಿರ್ಮಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಕಪಟ ಮೋಸ ವಂಚನೆಯಿಲ್ಲದೇ ಬದುಕನ್ನು ಮರುಕಟ್ಟುವ ಸ್ನೇಹದಿಂದ ಜೀವನವನ್ನು ಹಸನಾಗಿಸಿಕೊಳ್ಳುವ ಕಲೆ ಕಲಿಯಬೇಕು. ಅನ್ನಕ್ಕೆ ದಂಡ ಭೂಮಿಗೆ ಭಾರ ಆಗದೇ ಸ್ನೇಹಜೀವಿಯಾಗಿ ಬದುಕಬೇಕು. ವ್ಯರ್ಥವಲ್ಲದ ಜೀವನ ನಡೆಸಬೇಕು.

ನೀರಿನಂತಿರಬೇಕು

ಗೆಳೆಯರಿಲ್ಲದ ಬಾಳು ಬರೀ ಜೊಳ್ಳು ಅನಿಸುತ್ತದೆ. ಸ್ನೇಹಿತರಾದವರು ಏನನ್ನಾದರೂ ತಿದ್ದಿ ತಿಳಿ ಹೇಳಬಹುದು. ಆದರೆ ಅದೇ ಮಾತುಗಳು ಯಾರಿಂದಲೋ ಬಂದರೆ ಅದನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಗೆಳೆತನದಲ್ಲಿ ಸ್ವಕೀಯ ಬಾವವಿದೆ. ಆಳವಾದ ಮಮತೆಯಿದೆ. ತಾವು ಬೆಳೆದು ತಮ್ಮೊಂದಿಗೆ ಗೆಳೆಯರನ್ನು ಬೆಳೆಸುವುದೇ ಪರಮಾಪ್ತ ಗೆಳೆಯರ ಲಕ್ಷಣ. ಆದರೆ ಇಂದಿನ ದಾವಂತದ ಜೀವನದ ಜಂಜಾಟದಲ್ಲಿ ಬೇಡವಾದ ಅಡ್ಡಗೊಡೆಗಳು ಮೇಲೇಳುತ್ತಿವೆ. ಬೇಕಾದ ಸ್ನೇಹ ಸೇತುವೆ ಕುಸಿಯುತ್ತಿದೆ. ‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ’ ಕವಿ ಜಿಎಸ್ ಎಸ್ ಎಸ್ ಅವರ ಕವಿತೆಯ ಸಾಲುಗಳು ಇದನ್ನೇ ಹೇಳುತ್ತವೆ.ಸ್ನೇಹ ಧಾರೆ ಎರೆಯುವ ಸ್ನೇಹ ಜೀವಿಗಳಿಲ್ಲದ ಜೀವನ ನೀರಿಲ್ಲದ ಹೂವಿನಂತಾಗುವುದು. ..ನಾವು ನೀರಿನಂತಿರಬೇಕು. ನೀರು ಸದಾ ಅತಿ ಕೆಳಮಟ್ಟಕ್ಕೆ ಹರಿಯುತ್ತದೆ. ಹೂವಿಗೆ ನೀರಿನಂತೆ ಮಾನವ ಬದುಕಿಗೆ ಗೆಳೆತನ ಬದುಕು ಐಶಾರಾಮಿ ವಸ್ತುಗಳಿಂದ ಕೂಡಿ ಕೃತಕವೆನಿಸಬಾರದು. ಮಣ್ಣಿನ ಸೊಗಡಿನಂತೆ ನಿತ್ಯವೂ ನಳನಳಿಸುತ್ತಿರಬೇಕು. ಚಲನಶೀಲವಾದ ಬದುಕು ನಿಜವಾದ ಗೆಳೆತನದಿಂದ ದೀರ್ಘವಾಗುತ್ತದೆ. ಜೀವಕಳೆಯಿಂದ ಹೊಳೆಯುತ್ತದೆ ಅಲ್ಲವೇ?


One thought on “ಜಯಶ್ರೀ.ಜೆ.ಅಬ್ಬಿಗೇರಿ-ಹೂವಿಗೆ ನೀರಿದ್ದಂತೆ ಮಾನವ ಜೀವನಕ್ಕೆ ಗೆಳೆತನ

Leave a Reply

Back To Top