ಕಾವ್ಯಸಂಗಾತಿ
ಡಾ ಸುರೇಶ ನೆಗಳಗುಳಿ
ಗಜ಼ಲ್
ಸುರಿದು ಮಣ್ಣು ಸೇರಿದ ಬೆವರಿನ ಲೆಕ್ಕ ನನಗೆ ಗೊತ್ತಿಲ್ಲ
ಉರಿದ ಕಣ್ಣಿನ ಕೆಂಪು ಮೊಹರಿನ ಲೆಕ್ಕ ನನಗೆ ಗೊತ್ತಿಲ್ಲ
ಮೆರೆದ ಜನರು ಮೆರೆಯುತ್ತಲೇ ಮರೆಯುತ್ತಾರೆ ಏಕೆ
ಸುರಿದು ಜನತೆಗುಣಿಸಿದ ಅಗುಳಿನ ಲೆಕ್ಕ ನನಗೆ ಗೊತ್ತಿಲ್ಲ
ಗರಿಗರಿಯಾದ ಉಡುಪೇಕೆ ತೊಗಲಂಗಿ ಸಾಕಲ್ಲವೇ
ಹೊರ ಪ್ರಾಂಗಣದಲುಂಡ ಉಣಿಸಿನ ಲೆಕ್ಕ ನನಗೆ ಗೊತ್ತಿಲ್ಲ
ಬರಿಯ ಬೊಗಳೆಗಳೇಕೆ ದೇಶದ ಬೆನ್ನೆಲುಬು ಕಾರ್ಮಿಕನೆಂದು
ಮರೆತೆಲ್ಲ ದುಡಿದ ಹಗಲಿರುಳ ದಣಿವಿನ ಲೆಕ್ಕ ನನಗೆ ಗೊತ್ತಿಲ್ಲ
ಹರಿದಂಗಿ ಬರಿಗಾಲು ಸಾಕೆಂಬ ಧಣಿಯ ನಿರ್ಣಯವೇಕೆ
ಒರಗಿ ಆರಾಮದಲಿ ಹಳಿದ ಮಾತಿನ ಲೆಕ್ಕ ನನಗೆ ಗೊತ್ತಿಲ್ಲ
ಕುರಿಗಿರದು ಮತಿಯೆಂಬರು ಲೋಗರು ದಂಡಿಸುತ್ತಾ ನಿತ್ಯ
ಜರಿದರೂ ಬಾಗಿ ಮಾಡಿದ ನಮನ ಲೆಕ್ಕ ನನಗೆ ಗೊತ್ತಿಲ್ಲ
ಇರುವುದೇ ಕಾಲಕ್ಕೆ ನಿಲುಗಡೆಯೆನುವ ಸತ್ಯ ತಿಳಿ ಸುರೇಶ
ಕೊರಗಿ ಸೊರಗಿ ಉಪವಾಸವಿದ್ದ ದಿನ ಲೆಕ್ಕ ನನಗೆ ಗೊತ್ತಿಲ್ಲ.
ಡಾ ಸುರೇಶ ನೆಗಳಗುಳಿ
ವಾಸ್ತವ ಪರಿಸ್ಥಿತಿ ಬಿಂಬಿಸುವ ಗಜ಼ಲ್…ತುಂಬಾ ಮಾರ್ಮಿಕ ಸಾಲುಗಳು ಸರ್..
ಹಮೀದಾ ಬೇಗಂ .ಸಂಕೇಶ್ವರ.
ಧನ್ಯವಾದ
ಕಹಿಸತ್ಯ