ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ-ಬಳಲುತ್ತಿದೆ ಭೂಮಿ

ಕಾವ್ಯ ಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಬಳಲುತ್ತಿದೆ ಭೂಮಿ

ಬರಡಾದ ಭೂಮಿ ಮೇಲೆ
ಬೋರಲಾಗಿ ಬಿದ್ದು ಬಿಕ್ಕಿಬಿಕ್ಕಿ
ಅಳುತಿಹನು ಭೂಮಿಪುತ್ರ
ಶಪಿಸುತಿಹನು ಮಾರ್ತಂಡನ

ನರಳುತಿಹಳಿಂದು ಭೂತಾಯಿ
ಹನಿ ನೀರಿಗೆ ಬಾಯಿಬಿಡುತಿಹಳು
ಮಕ್ಕಳ ಹುಚ್ಚಾಟಕೆ ನಡುಗತಿಹಳು
ಆರ್ತತೆಯಿಂದ ಕರೆಯುತಿಹಳು

ಕಲುಷಿತ ವಾಯು ಅಣ್ವಸ್ತೃಗಳ
ಪ್ರಯೋಗದಿ ಉಸಿರು ಕಟ್ಟಿದೆ
ಎದೆಹಾಲುಬತ್ತಿದಬಾಣಂತಿಯಂತೆ
ಹತಾಶಳಾಗಿ ಕಣ್ಣೀರಿಡುತ್ತಿದ್ದಾಳೆ

ಕರುಳು ಕರಗುವಂತೆ ಕರೆಯುತ
ಜೀವಜಲಕಾಗಿ ಗಂಗೆ ತುಂಗೆಯರ
ಕೊರಕಲು ಮೈಯ ಮುಚ್ಚಿರೆಂದು
ಕೈಮುಗಿದು ಕೇಳುತಿಹಳಿಂದು

ಕ್ಷಮಯಾ ಧರಿತ್ರಿ ಕ್ಷಮಿಸಲಾರಳು
ನಮ್ಮನು ನಮ್ಮ ಸ್ವಾರ್ಥಗಳನು
ಮರ ಗಿಡಗಳ ಸೊಂಪಿನ ತಂಪು
ನೀಡಿರೆಂದು ಬೇಡುತಿಹಳು

ಬಳಲುತಿದೆ ಭೂಮಿಜ್ವಾಲಾಮುಖಿ
ಭೂಕಂಪ ಪ್ರವಾಹ ತ್ಸುನಾಮಿ
ವಿಷಮಯ ವಾಯು ಎಲ್ಲ ಸಹಿಸಿ
ರಕ್ತದ ಕಣ್ಣೀರು ಹರಿಸುತಿಹಳು


Leave a Reply

Back To Top