ಡಾ ದಾನಮ್ಮ ಝಳಕಿ ಕವಿತೆ-ಬಳಲುತ್ತಿದೆ ಮನಸು

ಕಾವ್ಯ ಸಂಗಾತಿ

ಡಾ ದಾನಮ್ಮ ಝಳಕಿ

ಬಳಲುತ್ತಿದೆ ಮನಸು

.

ಬಳಲುತಿದೆ ಮನಸು
ಜಗದ ದ್ವಂದ್ವತೆ ಕಂಡು
ಸತ್ಯ ಪ್ರಾಮಾಣಿಕತೆ
ಬಹಿರಂಗದ ಮಾತಿನಲಿ
ಅಂತರಂಗ ತುಂಬಿದೆ
ಅಹಂ ದ ಅಟ್ಟಹಾಸದಲಿ

ನಡೆಯಂತೆ ನುಡಿಯಿಲ್ಲ
ಶರಣ ತತ್ವ ಅರಿತಿಲ್ಲ
ಅರಿತಂತೆ ನಟಿಸುವರು
ಮುಖವಾಡ ಧರಿಸಿಹರು
ಅವರಲ್ಲ ಪ್ರಾಮಾಣಿಕರು

ಆದರೂ ಕುಣಿಯುತಿಹರು
ತಮ್ಮಿಂದ ಜಗವೆಂದು
ಹೊಗಳಿಕೆ ದಾಸರು
ಹೊಗಳಭಟ್ಟರನು ಇಟ್ಟಿಹರು
ಗಹಗಹಿಸಿ ನಗುತಿಹರು ಮೋಸದ
ಉಡುಗೆ ತೊಟ್ಟಿಹರು

ದರ್ಪ ತುಂಬಿದ ಮನುಜರು
ತಿದ್ದಿ ನಡೆಯಲಾರರು
ತಂದೆತಾಯಿ ಗುರುಗಳು
ಹಿರಿಯರಾರು ತಿದ್ದರು
ಸಸಿಯಾಗಿ ಬಗ್ಗದ್ದು, ಗಿಡವಾಗಿ ಬಗ್ಗಿತೇ?

ಅಂತರಂಗದಲಿ ದ್ವೇಷ
ಹೊತ್ತು ನಡೆವರಿವರು
ಅರಿಷಡ್ವರ್ಗಗಳ ಚೀಲದಲ್ಲಿ
ಕುಳಿತು ಕುಪ್ಪಳಿಸುತಿಹರು
ಜಗವೇ ನನ್ನ ಗುಲಾಮವೆಂದು
ಧರ್ಪದಿಂದ ಮೆರೆಯುತಿಹರು

ನನ್ನ ಶಾಲೆ ಮಗು ಕೇಳಿತು
ಜಗದ ಜನರ ದರ್ಪ ನೋಡಿ
ನನಗೆ ಏಕೆ ನೀತಿ ಪಾಠ
ಹೇಗೆ ಬದುಕಲಿ ಜಗದಲಿ
ತಿಳಿಸದಾದೆ,ತಿಳಿಯದಾದೆ
ಬಳಲುತಿಹ ಮನಸದು


3 thoughts on “ಡಾ ದಾನಮ್ಮ ಝಳಕಿ ಕವಿತೆ-ಬಳಲುತ್ತಿದೆ ಮನಸು

Leave a Reply

Back To Top