ಕಾವ್ಯ ಸಂಗಾತಿ
ಮಾಲತಿ ಶಶಿಧರ್
ಅರೇಬರೇ ಕನಸು
ಮುಂಜಾವಿನ ಅರೇಬರೇ ಕನಸಿದು
ಯಾವುದೊ ಆಮಿಷದಲ್ಲಿ
ದಟ್ಟ ಕಾಡಿನ ಮಧ್ಯೆ
ಕಿಕ್ಕಿರಿದ ಹೆಮ್ಮರಗಳ ನಡುವೆ
ಕೈ ಹಿಡಿದು ಕಣ್ಮುಚ್ಚಿ
ನಿನ್ನ ಹಿಂದೆ ಬಂದಂತೆ
ನೀಲಿ ಕೊಡೆಯ ಆಗಸ
ಉದ್ದ ಕತ್ತಿನ ಹಸಿರು ಫ್ಯಾನುಗಳು,
ನಡುವಿಂದ ನುಸುಳಿ ಬರುತ್ತಿದ್ದ
ಹೊಂಬೆಳಕು ಬಿಟ್ಟರೆ ಅಲ್ಲಿದ್ದದ್ದು
ನಾನು ನೀನು
ಗುರಿಯಿರದ ಪಯಣ
ಅಂಧವಿಶ್ವಾಸದಲಿ
ಕೈಗಳು ಮತ್ತಷ್ಟು ಬಿಗಿಯುತ್ತಿತ್ತು
ಕಾಲ್ಗಳು ಮುಗಿಯದ ದಾರಿಯೊಂದರಲ್ಲಿ
ಸಾಗುತ್ತಲೇ ಇತ್ತು
ಹಸಿರು ಹಾಳೆಯ ಮೇಲೆ
ವಕ್ರರೇಖೆಯ ಬಿಡಿಸಿದಂತೆ
ಹರಿವ ನೀರು
ನಮಗಾಗೇ ಹಾಕಿದ
ಕಲ್ಲು ಕುರ್ಚಿಯ ಸಾಲು
ನನ್ನ ತಲೆಗೂ ನಿನ್ನ ಎದೆಗೂ
ಬಿಡಿಸದ ಬಂಧ
ಹೊಸತೇನಲ್ಲ
ನಿನ್ನ ಕನಸುಗಳು
ವಾರಕ್ಕೊಮ್ಮೆ ನಡೆವ
ಊರ ಸಂತೆ ಅದು
ಬಂದು ಬಂದು
ಬೆಲ್ಲದೊಲವ ಮಾರಿ
ಮುಂದೆ ಸಾಗಿಬಿಡು
ಮಾಲತಿ ಶಶಿಧರ್
Super