ವಿಶಾಲ್ ಮ್ಯಾಸರ್
“ಕಾಣೆಯಾಗುತ್ತಾರೆ”

ರಾತ್ರಿಗೆ ಅದೆಷ್ಟು ಕಗ್ಗಂಟುಗಳು
ಆಕಾಶದಲ್ಲಿ ,ಭೂಮಿಯಲ್ಲಿ
ಬೆಡ್ರುಮಿನ ಹಾಸಿಗೆಯಲ್ಲಿ
ನಡುಬೀದಿಯಲ್ಲಿ ಸಂಸಾರ ಹೂಡಿದ ನಾಯಿಗಳಂತೆ ಮಲಗಿರುತ್ತವೆ
ಹೌದು ಜಗವೆಲ್ಲ ಮಲಗಿರುತ್ತದೆ
ಸೂರ್ಯನ ಮಕ್ಕಳೆಲ್ಲ ಮಲಗಿರುತ್ತಾರೆ
ಆದರೆ ಆದರೇ ಚಂದಿರ ರಾತ್ರಿಗೆ ಪಹರೆ ಕುಂತಿರುತ್ತಾನೆ ನಕ್ಷತ್ರಗಳ ಜೊತೆಗೆ,
ಅಮಾಸಿಯ ರಾತ್ರಿಗೆ ನಕ್ಷತ್ರಗಳೆಲ್ಲ ಹೊಂಚು ಹಾಕುತ್ತಲೇ ಇರುತ್ತವೆ
ನದಿ ತಣ್ಣನೆ ಹರಿಯುತ್ತಿರುತ್ತದೆ
ಗಾಳಿ ತಂಪಾಗಿ ಬೀಸುತ್ತಿರುತ್ತದೆ
ರೈಲು ನಿಶಬ್ಧದ ಹೊಟ್ಟೆ ತೂರಿ ತಾಳ ಹಾಕುತ್ತಾ ಚಲಿಸುತ್ತದೆ
ಇವಷ್ಟೇ ಅಲ್ಲ ಅದೆಷ್ಟೋ ಕನಸುಗಳು ರಾತ್ರಿಗೆ ನನಸಾಗುತ್ತವೆ ಮತ್ತು ಸತ್ತುಹೋಗುತ್ತವೆ
ದಂದೆಗಳ ಲಿಸ್ಟಿಗೆ ಹೊಸದೊಂದು ಸೇರ್ಪಡೆ
ದುಡಿದು ದಣಿದು ಗೇಣುದ್ದ ಜಾಗದಲ್ಲಿ ಬೆಚ್ಚಗೆ ಮಲಗಿದ್ದ ಬೆವರ ಮಕ್ಕಳು ಕಾಣೆಯಾಗಿ ಬಿಡುತ್ತಾರೆ
ಹೌದು ಕಾಣೆಯಾಗುತ್ತಾರೆ
ಮುಂಜಾನೆಗೆ ಬೆವರೆಲ್ಲ ರಕ್ತವಾಗಿ ಹರಿಯುತ್ತದೆ
ಸ್ವಲ್ಪ ಹೊತ್ತಿಗೆ ಹೆಪ್ಪುಗಟ್ಟಿ ದನ ತಿನ್ನುವವರ, ಅಜಾ ಕೂಗುವವರ ಚಹರೆ ಪಡುತ್ತದೆ
ಸಂಜೆಗೆ ನೆತ್ತರು, ಮಾಂಸ ಕೊಳೆತು ಉರೋಟು ನಾತ
ನಾತ ನಾತ ನಾತ
ಕೊಲೆಯಾದವರಿಗೆ ದೇಶದ್ರೋಹಿಗಳು ಪಟ್ಟ
ಕೊಂದವರೆಲ್ಲರೂ ದೇಶಪ್ರೇಮಿಗಳು
ಎಚ್ಚರ ಎಚ್ಚರ ಅಣ್ಣಗಳಿರಾ ಎಚ್ಚರ
ಒಂದು ದಿನ ದೇಶದ್ರೋಹಿಗಳ ಪಾಳಿ ಮುಗಿದುಹೋಗುತ್ತದೆ
ಮರುದಿನದ ದಾಹಕ್ಕೆ ದೇಶಭಕ್ತರದ್ದೆ ನೆತ್ತರು,
ಹಸಿವಿಗೆ ಮತ ಹೊತ್ತ ಮೈಗಳೆ ಬೇಕು….
