ಯುಗಾದಿಯ ಆ ದಿನ
ನೀ.ಶ್ರೀಶೈಲ ಹುಲ್ಲೂರು
ಹೆದ್ದಾರಿಗಂಟೇ ಇರುವ ನನ್ನ
ಮನೆ ಮಹಲಿನ ಮಹಡಿಯ
ಬಾಲ್ಕನಿಯಲಿ ಬಂದು ನಿಂತೆ
ಬಿಕೋ ಎನ್ನುವ ಸತ್ತುಬಿದ್ದ ರಸ್ತೆ!
ಅಲ್ಲೊಂದು ಇಲ್ಲೊಂದು
ಆಗೊಂದು ಈಗೊಂದು ಕಂಡು
ಕಣ್ಮರೆಯಾಗುವ ಬೀದಿ ನಾಯಿ
ಗಳು ತಮ್ಮ ವಿಸರ್ಜನಾ ವ್ಯೂಹ
ದ ಕೊನೆಯ ಅಂಗದ ಅಂತಿಮ
ಚಪಲವ ಲೈಟಿನ ಕಂಬಕೆ ಕಾಲೆತ್ತಿ
ನೆಲಕೆ ತಳವೊತ್ತಿ ತೀರಿಸಿ
ಕೊಂಡು ಕಂಬಿ ಕಿತ್ತವು!
ಪ್ರಾಸಕ್ಕಂಟಿದ ‘ಕವಿತೆ ಸಾಲು’
ಇಂದು ನನ್ನನ್ನು ಪರದೇಶಿಯಾಗಿಸಿ
ಕ್ರಾಸ್ ಕಂಟ್ರಿ ಓಟಕ್ಕಿಳಿದವು.
ಸರಿ,ಬಂದಂತೆ ಬರೆದಿಡುವೆ
ಬೈದವರಿಗೊಂದು ಸಲಾಂ ಹೇಳಿ!
ಇಲ್ಲಿ ಹರಿದೋಡುತಿರುವ
ಸಾಲುಗಳಂತೆಯೇ ಹರಕು-ಪರಕು
ಚೆಲ್ಲಾಪಿಲ್ಲಿ ಮನದ ಕವಲು!
ತುಂಬಿಕೊಂಡಿರುವುದೇನು ಒಳಗೆ?
ಎಲ್ಲ ಖಾಲಿ ಖಾಲಿ ಮೋಡ
ವಿಲ್ಲದ ಬಾನು !
ಸ್ವಾತಂತ್ರ್ಯ ದ ಹೋರಾಟದಲ್ಲಿ
ನಾವಿರಲಿಲ್ಲ ,ಅವರೇಕೆ ಆ ಪರಿ
ಹೋರಾಡಿದರು?ಎಂಬುದನು ಓದಿ
ತಿಳಿದುದಕಿಂತ ಇಂದಿನ ದಿಗ್ಬಂಧನವೇ
ಎಮ್ಮೆ ಬಡಿವ ಬಾಲ್ಯ ನೆನಪಿಸಿತು!
ಖಾರ ತಿಂದವನ ಒದ್ದಾಟ!
ಒಳಗೊಳಗೇ ಗುದ್ದಾಟ!
ನಂಮೀ ಸಂಕಟ ತೊಳಲಾಟಕೆ
ಪ್ರಧಾನಿಯೇ ಕಾರಣ
ಎಂದು ಫೂತ್ಕರಿಸಿದೆ!
ಅಲ್ಲಿ ನಮ್ಮ ಓಣಿಯಾಚೆಯ
ಆಸ್ಪತ್ರೆ ಪಕ್ಕ ಜನರ ಗೌಜು
ಗದ್ದಲದ ನಡುವೆ ಬಾಯಿ ಬಿರಿವಂತೆ
ಗಹಗಹಿಸಿ ನಗುತ್ತಿತ್ತು ಕರೋನಾ!
*******