ಡಾ. ಅರಕಲಗೂಡು ನೀಲಕಂಠ ಮೂರ್ತಿಕವಿತೆ-ಎಕಾನಮಿ ಕ್ಲಾಸ್

ಕಾವ್ಯ ಸಂಗಾತಿ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಎಕಾನಮಿ ಕ್ಲಾಸ್

ಎಕಾನಮಿ ಕ್ಲಾಸ್ ಜನ ಕೂಡ
ಒಮ್ಮೊಮ್ಮೆ
ಫಸ್ಟ್ ಕ್ಲಾಸ್ ಬಿಸ್ನೆಸ್ ಕ್ಲಾಸ್
ಮೂಲಕ
ತೆರೆದ ಕಣ್ಣ ಎವೆ ಇಕ್ಕದೆ
ನೋಡುತ್ತ ಮುನ್ನಡೆ ಇಡಬೇಕಾಗುತ್ತದೆ

ಕೆಲ ಸಂದರ್ಭಗಳೆ ಹಾಗೆ
ಇಷ್ಟ ಇರಲಿ ಇಲ್ಲದಿರಲಿ
ತಳ್ಳಿಬಿಡುತ್ತವೆ
ಒಲ್ಲದ ಅಥವ ಸಲ್ಲದ ತಾಣದತ್ತ!

ಅಂಥ ಒಂದು ಕ್ಷಣ
ಅಲ್ಲಿ ಆಸೀನರಾದ
‘ಆ ಸೀಟುಗಳ ಒಡೆಯರು’
ಕಣ್ಣ ಅಂಚಿಂದ
ಎಕಾನಮಿಯತ್ತ
ನಡೆವ ‘ಗ್ರಾಮೀಣರತ್ತ’
ಯಕಃಶ್ಚಿತ್ ತಿರಸ್ಕಾರದಿಂದ
ಒಂದು ಎಕಾನಮಿ
ನೋಟ ಬೀರಿ ತಮ್ಮ ತಮ್ಮೊಳಗೆ
ಗಹನವಾಗಿಬಿಡುತ್ತಾರೆ
ಕಾರು ಒಡೆಯರು ಬಸ್ಸಿನೊಳಗೆ
ತುರುಕಿದ ಜಾನುವಾರು ಕಂಡಂತೆ!

ಎಕಾನಮಿ ಕ್ಲಾಸ್ ಜನ
ಗಗನಸಖಿಯರಿಗೆ ಸಹ
ಮುಫತ್ ಪ್ರಯಾಣಿಕರ ಥರ.
ಬೇಕಾಬಿಟ್ಟಿ
ಸರ್ವ ನಿರ್ಲಕ್ಷ್ಯ!

ವಾಸ್ತವದಲ್ಲಿ
ಜಗದೆಲ್ಲ ವಿಮಾನ ಸಂಸ್ಥೆ ಖಜಾನೆ
ತುಂಬಿಸಿ ಹರಿಸುವುದೆ
ಎಕಾನಮಿ ಕ್ಲಾಸ್ ಮಂದೆ!

ಅಪಘಾತದಲ್ಲಿ
ಆ ಕ್ಲಾಸ್ ಈ ಕ್ಲಾಸ್
ಎಲ್ಲ ಅನಂತ ಅನಾದರ!

ಸದ್ಯ ಮಣ್ಣೊಳಗೆ
ಆಳದ ಅಗಲದ ಲೆಕ್ಕ ಇದೆ
ಎಕಾನಮಿ ಫಸ್ಟ್ ಬಿಸ್ನೆಸ್ ಎಂಬೆಲ್ಲ
ಶ್ರೇಣಿಗಳಿಲ್ಲ!

ಬೆತ್ತಲೆ ಹೂತರು
ಡಬ್ಬದೊಳಿಟ್ಟು ಇಳಿಸಿದರು
ಸುಟ್ಟು ಬೂದಿಯೆ ಆದರು
ಎಲ್ಲ ಒಂದೆ ಥರ
ಮಣ್ಣು ನೀರು!


Leave a Reply

Back To Top