ಇಂದಿರಾ ಮೋಟೆಬೆನ್ನೂರ ಕವಿತೆ-ಭಾವ ತರಂಗ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಭಾವ ತರಂಗ

ನಿನ್ನೆದೆಯ ಆಳಕಿಳಿವ
ಹಕ್ಕು ನನಗಿಲ್ಲ….ನಿಜ
ನಾನದನು ಕೇಳಿಯೂ ಇಲ್ಲ..
ಆದರೂ ಹೆಕ್ಕಿ ತಂದಿರುವೆ
ಕೆಲ ಪ್ರೀತಿ ಮುತ್ತುಗಳ
ಒಪ್ಪಿಸಿಕೊ…
ಭಾವ ತರಂಗದಿ .. ಗೆಳತಿ

ಬರುವುದು ಬಂದೆ
ತಡ ಮಾಡಿ ಬಂದೆ
ಪ್ರೀತಿ ಹಾದಿಗೆ ಹಚ್ಚಿದೆ
ಹಣತೆಯ ಬೆಳಕು..
ಬುದ್ಧಿಗೆ ಮೀರಿದ ಒಲವಿನ
ಒಡಲಲಿ ಇಣುಕು…
ಭಾವ ತರಂಗದಿ … ಗೆಳತಿ.

ಎಣ್ಣೆ ಬತ್ತಿ ಉರಿದು
ಬೂದಿಯಾಗಿ ಹೋಗುತಿದೆ…..
ಹದಿನಾರರ ಹದಿಹರೆಯದ
ಹಸಿ ಬಿಸಿಯ ಕಸಿವಿಸಿಯ
ಕನಸುಗಳಲ್ಲ ನನ್ನವು..
ಜೊತೆಯಾಗು …
ಭಾವ ತರಂಗದಿ.. ಗೆಳತಿ

ಒಲವ ತಣ್ಣೆಳಲ ತಂಪಿನಲಿ
ಕುಡಿಯೊಡೆದ ಸವಿ ಮನದ
ಬೊಗಸೆ ತುಂಬಿದ ಭಾವತರಂಗ..
ಬರಿದಾಗಿ ಬರಡಾಗಿ
ಬಯಲಾಗಿದೆ ಅಂತರಂಗ….
ಒಪ್ಪಿಸಿಕೋ…
ಭಾವ ತರಂಗದಿ… ಗೆಳತಿ.

ಮಾತು ಮೌನ ಕಣಿವೆಯ
ಇಳಿ ಜಾರಿನಲಿ ಸಾಗುತಿವೆ..
ಬರಸೆಳೆದು ಬಾಚಿ
ತಬ್ಬಿ ಬಳಿಕರೆದು ಕೈಚಾಚಿ
ನನ್ನುಡಿಗೆ ಸುರಿದು
ಹೃದಯ ಭಾಷೆಯನಾಲಿಸು….
ಭಾವ ತರಂಗದಿ… ಗೆಳತಿ..

ಅಂತರಂಗದ ಕಲಕಲ
ನಾದ ಭಾವ ತರಂಗ
ನಿನಾದದಲಿ ಜೀವ…
ನೊಂದ ಹೃದಯಕೆ
ತಂಪೆರೆಯುತ ಭಾವ
ಮಲ್ಲಿಗೆ ಮೊಗ್ಗರಳಿಸು…
ಭಾವ ತರಂಗದಿ… ಗೆಳತಿ..

ಸಾವಿರ ವಿಧ ವಿಧ ರಂಗಿನ
ಹೂಗಳ ಪರಿಮಳ ಗುಂಗಿನ
ಭೃಂಗ ಸಂಗೀತದಿ ತನ್ಮಯ…
ಬೇಲಿ ನೀಲಿ ಹೂವ ಮರೆತು
ಬಾಂದಳಕೆ ಹಾರದಿರು….
ಕಡೆಗಣಿಸಿ ದೂರದಿರು…
ಭಾವ ತರಂಗದಿ…. ಗೆಳತಿ…


_ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Leave a Reply

Back To Top