ಹೊನ್ನಪ್ಪ. ನೀ.ಕರೆಕನ್ನಮ್ಮನವರ ಕವಿತೆ-ಅಪ್ಪ….

ಕಾವ್ಯ ಸಂಗಾತಿ

ಹೊನ್ನಪ್ಪ. ನೀ.ಕರೆಕನ್ನಮ್ಮನವರ

ಅಪ್ಪ….

ರಾಮನಲ್ಲ, ಶ್ಯಾಮನಲ್ಲ
ಕೋಟೆ ಕೊತ್ತಲ ಕಟ್ಟಿ
ರಾಜ್ಯವಾಳಿದ ಧೀಮಂತನೂ ಅಲ್ಲ
ಗರ್ಭಗುಡಿಯ ಗದ್ದುಗೆಯನ್ನು ಬಿಟ್ಟು
ಕೆಳಗಿಳಿಯದ ದೇವನಂತೂ ಮೊದಲೇ ಅಲ್ಲ
ಋತುಮಾನಗಳ ಹಂಗಿರದೇ ಎಲ್ಲೇ ಬಿತ್ತಿದರೂ
ಹುಸಿಹೋಗದ ಮಣ್ಣ ಮಡಿಲಿನ
ಜೀವಂತ ಮಮತೆಯೇ ನನ್ನಪ್ಪ..!

ಬೀಸುವ ಕವಣೆಯ ಕಲ್ಲಿಗೆ
ಹಣೆಬರವ ಜರಿಯದೇ
ಕಂಬಳಿಯಲ್ಲಿ ಕನಸ ನೇಯ್ದು
ಕಾಡು ಮೇಡಿನಲಿ ಕುರಿಗಳ ಹಿಂದೆ
ಒಪ್ಪಿತ್ತಿಗಾಗುವಷ್ಟು ಕಾಳು ಕೊಡುವ
ದಣಿಗಳ ಹಿಂದೆ
ಕಣ್ಣ ಮುಂದಿದ್ದರೂ ಕೈ ಸಿಗದ ಬೆಳಕಿನ ಹಿಂದೆ
ಒಂದೇ..ಎರಡೇ…?
ಇಡೀ ಭೂಗೋಳದ ನಕಾಶೆಯೇ
ಚಿತ್ರಿತವಾಗಿರಬೇಕು ನೆಲಕ್ಕಂಟದೇ
ಅಲೆದ ಅವನ ಬಿರುಕು ಬಿಟ್ಟ ಪಾದಗಳಲ್ಲಿ
ಬೇಕಿದ್ದರೆ ಅವನ ಮುದಿ ಚಪ್ಪಲಿಗಳನ್ನೊಮ್ಮೆ
ಕೇಳಿದರೆ ಸುದ್ದಿಯಾಗದ ಇತಿಹಾಸವನ್ನೇ
ಸದ್ದಿಲ್ಲದೆ ಬಿಚ್ಚಿಡುತ್ತವೆ..!

ಹಸಿವು ನಿರಡಿಕೆಯಿಂದ ಎಂದೂ
ಕಂಗೆಡದ ಅವನ ಚಪ್ಪಲಿಗಳು
ಅವ್ವನ ಸಂಕಟಕ್ಕೆ ಒಲೆಯಲ್ಲಿ ಕಟ್ಟಿಗೆಯಾಗಲು
ಮಕ್ಕಳ ಬೆಚ್ಚಗಿನ ಸೂರಿಗೆ ಇಟ್ಟಿಗೆಯಾಗಲು
ಕೊನೆಗೆ ಹೂಳಲು ಮಸಣದಿ ಅಂಗೈ
ಅಗಲ ಜಾಗ ಸಿಗದಿದ್ದರೇ
ಸ್ವಂತ ಭೂಮಿಯೂ ಆಗಲು..!
ವಕ್ರವಾಗಿಯೋ,ಸರಳವಾಗಿಯೋ
ರಸ್ತೆಯಂತೆಯೇ ಹರಿದವೇ ಹೊರತು
ತಲೆಹಿಡುಕರ ಮನೆಮುರುಕರ
ಮನೆಯನೆಂದೂ ಕಾಯ್ದು ಸವೆದ
ಉದಾಹರಣೆಗಳಿಲ್ಲ
ಅದರಿಂದಲೇ ಅವನ ಪಾದಗಳಿಗಾಗಲಿ
ತುಳಿದ ಹೆಜ್ಜೆ ಹಿಂದೆ ಬಿಟ್ಟು ಸಾಗಿ ಬಂದ
ದಾರಿಗಾಗಲಿ ವರ್ತಮಾನದ ತಕರಾರಿನ
ವಿಷಾದವೂ ಇಲ್ಲ.

ನುಡಿಸಿದಷ್ಟು ರಾಗ ಹೊಮ್ಮಲು
ಗಾಳಿಯೊಂದಿಗೆ ಗಾಳಿಯಾಗಿ
ಧೂಳಿನೊಂದಿಗೆ ಧೂಳಾಗಿ
ಅಲೆದಲೆದು ಕರಗಿದ್ದ ಅವನ
ಉರಿ ಪಾದದ ಸುದೀರ್ಘ
ಹೆಜ್ಜೆಗಳ ಅಳಲು ಯಾವ
ಗಡಿರೇಖೆಗೆ ಕೇಳಿಸಿತೋ..?
ಹುಡಿ ಮಣ್ಣಿನೊಳಗೆ ಎಂದಿಗೂ ನಿಗೂಢ..!
ಅಂತೂ..ಉಸಿರು ದಾಟಿಸುವ ಸಮಯಕ್ಕೆ
ನಾದ ಬಿಂದುವಿನಲಿ ಲೀನವಾಗಲು
ಎದೆ ಕೊಟ್ಟ ನಿಂತು ದೇಹಬಾರ
ಇಳಿಸಿಕೊಂಡು ಹಾಗುರಾಗಿಬಿಟ್ಟ.

ಸದಾ ಹೆಗಲ ಮೇಲೆ ಬೆಚ್ಚಗಿನ
ಕೈ ಇಟ್ಟು ಹೃದಯಕ್ಕೆ ಹತ್ತಿರದಲ್ಲಿ
ನಿಂತು ಮಾತನಾಡುತ್ತಿದ್ದ
ಅಪ್ಪನಿಲ್ಲದ ಎದೆ ಈಗ
ಜಾತ್ರೆ ಮುಗಿದ ಬಯಲು
ದೃಷ್ಟಿ ಹಾಯಿಸಿದತ್ತ
ನೂರೆಂಟು ಕವಲು
ಯಾವ ಗುರಿ ಏನು ಗೊತ್ತು?
ನಡೆಯಲೇಬೇಕಿದೆ ನಾ ಈ ಹೊತ್ತು
ಅಪ್ಪನಂತೆಯೇ ಅಪ್ಪನಾದ ಜರೂರಿಗೆ
ಹೊತ್ತು ಮೆರೆಸಿದ ಅವನ ಚಪ್ಪಲಿಯ ಘನತೆಗೆ
ಉರುಳುತ್ತಲೋ, ತೆವಳುತ್ತಲೋ
ನನ್ನನ್ನು ನಾ ಹುಡುಕುತ್ತ
ಕತ್ತಲು ಹುಟ್ಟುವ ಮುನ್ನ ಊರು
ತಲುಪಿಸುವ ಬಾರ ಅವನ ಹಾದಿಯ
ಹೆಗಲ ಮೇಲೆ ಹೊರಿಸಿ
ಗಾಳಿಯ ಕೊನೆಯ ಉಸಿರು
ಮುಗಿದರೂ ನನ್ನೊಳಗಿನ ಅವನುಸಿರು
ಮುಗಿಯುವ ವರೆಗೂ..


5 thoughts on “ಹೊನ್ನಪ್ಪ. ನೀ.ಕರೆಕನ್ನಮ್ಮನವರ ಕವಿತೆ-ಅಪ್ಪ….

  1. ಅಪ್ಪ ತುಂಬಾ ಚೆನ್ನಾಗಿ ಮೂಡಿದ್ದಾನೆ
    Congrats!

  2. ಅಪ್ಪ ಎಂದರೆ ಜವಾಬ್ದಾರಿಯ ಖಣಜ.ಸೊಗಸಾಗಿದೆ ಸಹೋದರ ಅಭಿನಂದನೆಗಳು.

Leave a Reply

Back To Top