ಸುಧಾ ಪಾಟೀಲ್ ಕವಿತೆ-ಮನದ ಅಳಲು

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಮನದ ಅಳಲು

ಮನೆಯ ಮಗಳಾಗಿ
ಮಹಾಲಕ್ಷ್ಮಿಯಾಗಿ
ಪಟ್ಟದರಸಿಯಾಗಿ
ಬಲಗಾಲಿಟ್ಟು
ಒಳಗೆ ಬಂದ
ಹೆಣ್ಣು ಹೃದಯ
ಪ್ರೀತಿ ಬೇಡಿತ್ತು

ಮಳೆ ನಿಂತು
ಚಳಿ ಮಾಗಿ
ವಸಂತ ಋತು
ಬಂದಾಗಲೂ
ಏನೂ ಬದಲಾವಣೆಯಾಗದ
ಈ ಜೀವಕೆ
ಹೊತ್ತಾರೆ ಎದ್ದು
ದುಡಿದು ಹೈರಾಣಾಗುವ
ಈ ದೇಹಕೆ
ಅಭಿಮಾನದ
ಅಭಿನಂದನೆ
ಬೇಡವೆ

ತನ್ನೊಡಲ ಉರಿ
ಬೆಂದು ಬೆಂಡಾದಾಗ
ಹಸಿವು ಇಂಗಿ
ನೀರಡಿಸಿದಾಗ
ಮನ ಕಾದು
ಭುಗಿಲೆದ್ದಾಗ
ನೆನಪಾಯ್ತು ನನಗೆ
ನನ್ನ ಅಸ್ತಿತ್ವ

ವಿಚಾರವಾದಿಯಾಗಿ
ಆಂದೋಲನ ಮಾಡ
ಹೊರಟಾಗ, ಕಾದಿತ್ತು
ಒಳಮಗ್ಗುಲಿನ ಸಂಚುಗಳು
ಬೇಡಿತ್ತು ಒಳಮನಸು
ಚೀರಿತ್ತು ಹೃದಯ
ನ್ಯಾಯ ಬೇಕೆಂದು


Leave a Reply

Back To Top