ಕಾವ್ಯಸಂಗಾತಿ
ಮಾಲತಿ ಶಶಿಧರ್
ಎದೆಗೆ ಬಿದ್ದ ಮಾತು
ಎದೆಗೆ ಬಿದ್ದ ಒಂದು ಮಾತು ಅಲ್ಲೇ
ನಡುಮಧ್ಯೆ ಸಿಕ್ಕಿ ಸಾಯುತ್ತಿದೆ
ಬೆಂಟೋಟ ಕಡಲ ಕಿನಾರೆಯಲ್ಲಿ
ತಣ್ಣಗೆ ಕೂತು ನೀರಿಗೆಸೆದ ಗಾಳಕ್ಕೆ ಸಿಕ್ಕ ಮೀನೊಂದರಂತೆ
ವಿಲವಿಲ ಮಿಸುಕಾಡುತ್ತಿದೆ
ಗಾಳದಲ್ಲಿರುವುದು
ಯಾವುದೊ ಜುಜುಬಿಯಲ್ಲ
ಗೋಲ್ಡನ್ ಫಿಶ್
ಮುಗಿಲ ಸೀಳಿ ನುಗ್ಗುವ
ಮಿಂಚಂತೆ ಕೊರೈಸೋ ಮೈಬಣ್ಣ
ಪೊಂಬಿಸಿಲ ತುಂತುರುವಿಗೆ
ಮೈಯೊಡ್ಡಿ ನಕ್ಕ
ಮಳೆಬಿಲ್ಲ ಅಂದ
ಅದು ಅತ್ತಿಂದಿತ್ತ ಇತಿಂದತ್ತ
ಹೊರಳಿದಷ್ಟು
ಬೆರಗುಗೊಳ್ಳುತ್ತಿದ್ದ ಅಂತಃಕರಣ
ಬಿದುರು ಕೋಲಿನ ತುದಿಯಲ್ಲಿ
ಗಾಳ ಕಟ್ಟುವಾಗಲೋ
ಗಾಳದ ತುದಿಯಲ್ಲಿ ಅರೆ ಸತ್ತ
ಎರೆಹುಳ ಸಿಕ್ಕಿಸುವಾಗಲೋ
ಅನಾಧಿಕಾಲದ ನೋವೊಂದ
ಗಾಳಿಯಲಿ ತೋರಿಬಿಟ್ಟಂತೆ
ನೀರಿಗೆ ಗಾಳವ ಎಸೆವಾಗಲೋ
ಈ ಅಂತಃಕರಣ ಚುರುಕುಗೊಳ್ಳಲಿಲ್ಲ
ಕಿತ್ತು ಕೈಗಿತ್ತ ಮೀನಿನ ಕಣ್ಣಲ್ಲೊಂದು
ಘೋರ ಪಾಪದ ಛಾಯೆ
ಬಾಯಲ್ಲಿ ಅಹಿತವಾದ ಮಂದಹಾಸ
ಬೊಗಸೆ ಮೀನಿಗೊಂದು ಮುತ್ತು
ನೀಡಿ ಎದೆಯ ನಡುಮಧ್ಯೆಯೇ
ಬಿಟ್ಟುಬಿಟ್ಟೆ
–ಮಾಲತಿ ಶಶಿಧರ್
ಉತ್ತಮವಾದ ಕವಿತೆ. ಅಭಿನಂದನೆಗಳು.
Thank u
Good keep it up All the best
Simply aagide
Thank u
Nice
ಕವಿತೆ ಚೆನ್ನಾಗಿದೆ…..