ಈರಪ್ಪ ಬಿಜಲಿ ಕವಿತೆ-ಯಾರೀ… ವೇಷಗಾರರು..?

ಕಾವ್ಯ ಸಂಗಾತಿ

ಈರಪ್ಪ ಬಿಜಲಿ.

ವೇಷಗಾರರು?

ಹಸಿರು ಶಾಲನು ಕತ್ತುಹಿಸುಕಿ, ಉಸಿರುಗಟ್ಟಿಸುವವರು
ನಾವುಗಳು ನಂಬಿರುವ ಈ ವೇಷಗಾರರು ||೧||

ಹೊರೆ ಹೊತ್ತವರ ಹೊಟ್ಟೆ ಬಗೆದು,
ಹೊಟ್ಟೆ ಮೇಲೆ ಬರೆ ಹಾಕುವವರು
ನಾವುಗಳು ನಂಬಿರುವ ಈ ವೇಷಗಾರರು ||೨||

ಬಿತ್ತಲು ನಿಶ್ಯಕ್ತ ಬೀಜಗಳ ನೀಡಿ
ಹತ್ತಲು ಬಾರದ ಕೂಪಕ್ಕೆ ತಳ್ಳುವವರು
ನಾವುಗಳು ನಂಬಿರುವ ಈ ವೇಷಗಾರರು ||೩||

ನಿರ್ಮಲವಾದ ಮನಗಳಲಿ
ಕೋಮುಗಲಬೆಯ ಕಿಚ್ಚ್ಹಚ್ಚುವವರು
ನಾವುಗಳು ನಂಬಿರುವ ಈ ವೇಷಗಾರರು ||೪||

ನೀತಿ ನಿಯಮ ಕಾನೂನು ಗಾಳಿಲಿ ತೂರಿ
ಜಾತಿವೃಕ್ಷಗಳ ಹೇರಳವಾಗಿ ಬೆಳೆಸುವವರು
ನಾವುಗಳು ನಂಬಿರುವ ಈ ವೇಷಗಾರರು ||೫||

ಐದು ವರ್ಷಕ್ಕೊಮ್ಮೆ ಆಮೀಷಗಳ ತೋರಿಸಿ,
ಪ್ರಜೆಗಳ ಕೈಯಿಂದ ಪ್ರಭುತ್ವ ಕಿತ್ತುಕೊಳ್ಳುವವರು
ನಾವುಗಳು ನಂಬಿರುವ ಈ ವೇಷಗಾರರು ||೬||

ಪ್ರಜಾಪ್ರಭುತ್ವದ ಸಮವಸ್ತ್ರವ ತೊಟ್ಟು
ರಾಜಪ್ರಭುತ್ವವ ನಡೆಸುವವರು
ನಾವುಗಳು ನಂಬಿರುವ ಈ ವೇಷಗಾರರು ||೭||

ನಾಡ ಪ್ರಭುಗಳ ಮುಖವಾಡ ಧರಿಸಿ
ನಾಡನ್ನೆಲ್ಲ ಲೂಟಿ ಮಾಡುತಿಹರು
ಬಲ್ಲವರು ಹೇಳಿ ಯಾರೀ.. ವೇಷಗಾರರು ||೮||


One thought on “ಈರಪ್ಪ ಬಿಜಲಿ ಕವಿತೆ-ಯಾರೀ… ವೇಷಗಾರರು..?

  1. ಕವನ ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಸರ್

Leave a Reply

Back To Top