ರೋಹಿಣಿ ಯಾದವಾಡ-ತರಹೀ ಗಜಲ್

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

ತರಹೀ ಗಜಲ್

ತರಹೀ ಗಜಲ್ ಶಮಾ ಅವರ ಮತ್ಲಾ ಬಳಸಿ

ಮನಸು ಕೊಂದರೂ ಕನಸು ಗೆಲ್ಲಲಾಗಲಿಲ್ಲ ನಿನಗೆ
ಕಂಗಳಲ್ಲಿ ನಿಂದರೂ ಎದೆಯಲ್ಲಿ ನಿಲ್ಲಲಾಗಲಿಲ್ಲ ನಿನಗೆ

ಸದಾಕಾಲ ನೆನಪಾಗಿ ಕಾಡುತಿರುವೆ ಬಿಟ್ಟುಬಿಡದೆ ನನ್ನನು
ಮನದಲ್ಲಿ ಉಳಿದರೂ ಹೃದಯದಲ್ಲಿ ನೆಲಸಲಾಗಲಿಲ್ಲ ನಿನಗೆ

ಪ್ರೀತಿಯ ಚಿತ್ತಾರ ಬಿಡಿಸಿ ಜಾಹೀರು ಪಡೆಸಿದೆಯಲ್ಲ
ಭಾವದಲ್ಲಿ ಬೆರೆತರೂ ಚಿತ್ತದಲ್ಲಿ ನೆಲೆನಿಲ್ಲಲಾಗಲಿಲ್ಲ ನಿನಗೆ

ಪ್ರೀತಿಸಿ ಕನಸಿದ ಪ್ರೇಮಸೌಧ ಕಟ್ಟಿದ್ದು ಸುಳ್ಳೇನು ಹೇಳು
ಜಗಕ್ಕಿಲ್ಲೆಂದರೂ ಅಂತರಂಗದಿ ಅಳಿಯಲಾಗಲಿಲ್ಲ ನಿನಗೆ

ಭಾವ ಬಂಧಗಳು ಬೆರೆತು ಒಂದಾಗಿರಲು ಚೆಂದವೆನುವರು
ಪ್ರೀತಿ ಇತ್ತಾದರೂ ಸ್ನೇಹ ಬಳಗದಲ್ಲಿ ತೋರಲಾಗಲಿಲ್ಲ ನಿನಗೆ

ತಿಳಿ ನೀರಿನ ಪ್ರತಿಬಿಂಬದಷ್ಟೇ ನಿಜ ಪ್ರೀತಿ ನನ್ನದು
ರೋಹಿಯ ನಿಜ ಪ್ರೀತಿಯನ್ನು ಗೆಲ್ಲಲಾಗಲಿಲ್ಲ ನಿನಗೆ.


Leave a Reply

Back To Top