ಸಾಕ್ಷಿ ಶ್ರೀಕಾಂತ ಕವಿತೆ-ಇಡ್ಲಿ

ಕಾವ್ಯ ಸಂಗಾತಿ

ಸಾಕ್ಷಿ ಶ್ರೀಕಾಂತ.

ಇಡ್ಲಿ

ಉದ್ದು ನೀರಲ್ಲಿ ಮೆಟ್ಟಿ ನೆನೆಯಲಿ
ಬಿದ್ದು ಉಬ್ಬಿ ಹೊಟ್ಟೆ ಬಿರಿಯಲಿ
ಮುದ್ದು ಎನದಿರೆ ಇಳಿಸಿ ಒರಳಲಿ
ಸದ್ದು ಮಾಡುತ ನುಣ್ಣಗೆ ಅರೆಯಲಿ

ಹಬ್ಬಿದ ಬಳ್ಳಿಯ ಸಾಂಬಾರ ಕಾಯಿ
ತಬ್ಬಿದ ಹಸಿರು ಮೆಣಸಿನಕಾಯಿ
ಎಬ್ಬಿದ ಘಮಲು ಹುರಿದ ಮಸಾಲೆ
ಒಬ್ಬಿದ ಒಡೆದ ಬಿಳಿ ತೆಂಗಿನಕಾಯಿ

ತುರಿದ ಕೊಬ್ಬರಿಯನು ತಿರುವಾಗ
ಮುರಿದು ಮೆಣಸು ಸೇರಿಸುವಾಗ
ಹರಿದು ಕೊತಂಬರಿ ಹಾಕುವಾಗ
ಮರಗು ಸೇರಿಸಿ ನೀವು ರುಬ್ಬುವಾಗ

ಗಂಧದಂದದಿ ಚಟ್ನಿಯನು ಅರೆದು
ಚಂದದಿ ಎಣ್ಣೆಯನು ಸೌಟಿಗೆ ಸುರಿದು
ಅಂದದಿ ಸಾಸಿವೆ ಸಿಡಿಸಿ ಇಂಗು ಮೆರೆದು
ಭಂಧಬಿಡಿಸಿ ಕರಿಬೇವು ಎಲೆ ಹರಿದು

ಬಟ್ಟಲಿನಂದದಿ ಅಚ್ಚಿನಲಿ ತುಂಬಿ ಹಿಟ್ಟು
ತಟ್ಟೆಯಲಿ ತೈಲ ಸವರಿ ಅಲ್ಲಿಯೂ ಬಿಟ್ಟು
ಕೊಟ್ಟೆಕಟ್ಟಿ ಉಬ್ಬಿದ ಕಡಬು ಕಡ್ಡಿ ನೆಟ್ಟು
ಪಟ್ಟಪಾಡಲಿ ಹಬೆಗೆ ಬೆಂದ ಬಿಳಿಪುಟ್ಟು

ಹಸಿಯ ಬಾಳೆ ಎಲೆ ನೀರಲಿ ಒರೆಸಿ
ಬಿಸಿಯ ಇಡ್ಲಿಯನು ಮುದದಿ ಬಡಸಿ
ದೇಸಿ ಹಸುವಿನ ತುಪ್ಪವನು ಸುರಿಸಿ
ಮೀಸುತ ಸಟ್ಟುಗದಿ ಸಾಂಬಾರ ಹರಸಿ

ಬೇಕೆನುತ ಬಿಳಿಯ ಚಟ್ನಿಯ ಒಡಲಲಿ
ಸಾಕೆನದೆ ತಿನ್ನುವ ಸಾಂಬರಮಡುವಿನಲಿ
ತೇಕುತ ಬಂದ ಹೋಳುಗಳ ಚೀಪುತಲಿ
ಸಾಕಿ ಇಡ್ಲಿಯನು ಸೋಸಿದಳೆ ಕವನದಲಿ


2 thoughts on “ಸಾಕ್ಷಿ ಶ್ರೀಕಾಂತ ಕವಿತೆ-ಇಡ್ಲಿ

Leave a Reply

Back To Top