ಆದಪ್ಪ ಹೆಂಬಾ ಮಸ್ಕಿ ಲಲಿತ ಪ್ರಬಂಧ-ತಪ್ಪು ಮಾಡದವರು ಯಾರವ್ರೆ

ಪ್ರಬಂಧ ಸಂಗಾತಿ

ಆದಪ್ಪ ಹೆಂಬಾ ಮಸ್ಕಿ

ತಪ್ಪು ಮಾಡದವರು ಯಾರವ್ರೆ

ಧಾರವಾಡದ ಡೆಂಟಿಷ್ಟ್ ಸ್ನೇಹಿತರೊಬ್ಬರು ನನಗೆ ಇತ್ತೀಚಿಗೆ ತುಂಬಾ ಆತ್ಮೀಯರಾದವರು. ನಮ್ಮ ಮತ್ತು ಅವರ ನಡುವಿನ ಸ್ನೇಹ ಪುರಾತನವಾದದ್ದೇನಲ್ಲ. ಆದರೂ ನಮ್ಮ ನಡುವಿನ ಸ್ನೇಹದಲ್ಲಿ, ಪ್ರೀತಿ ವಿಶ್ವಾಸಕ್ಕೇನೂ ಕಮ್ಮಿ ಇರಲಿಲ್ಲ. ಇಂಥಹ ಡಾಕ್ಟರು ಒಂದು ದಿನ ಒಂದು ಸಣ್ಣ ಕಾರಣಕ್ಕೆ ನನ್ನ ಮೇಲೆ ಮುನಿಸಿಕೊಂಡ್ ಬಿಟ್ರು. ಆ ಕಾರಣವನ್ನು ಇಲ್ಲಿ ಉಲ್ಲೇಖಿಸುವುದೂ ಬೇಡ, ಸಿಲ್ಲಿ ಅನಿಸಿಬಿಡುತ್ತೆ. ನಾನೇ ಸಾರಿ ಸರ್ ಅಂದಿದ್ದೆ. ವಿಷಯ ಅದಲ್ಲ. ಆಮೇಲೆ ಆ ಡಾಕ್ಟರ್ ಸಾಹೇಬರಿಗೆ ತಮ್ಮ ತಪ್ಪಿನ ಅರಿವಾಯಿತೇನೋ ಹತ್ತು ಸಾರಿಯಾದರೂ ಸಾರಿ ಸಾರಿ ಅಂದಿರಬೇಕು. ನಾನೇ ಇರಲಿ ಬಿಡಿ ಸಾರ್ ಅಂದ್ರೂ ಕೇಳ್ಲಿಲ್ಲ. “ಸರ್ ನಿಮ್ಮ ಜೊತೆ ತುಂಬಾ ಮಾತಾಡೋಕಿದೆ. ಇವತ್ತು ಸಂಜೆ ಕೂಡೋಣ” ಅಂದ್ರು. ಸರಿ ಸರ್ ಅಂತ ನಾನೂ ಒಪ್ಕಂಡೆ. ಅಂದುಕೊಂಡಂತೆ ಇಬ್ಬರೂ ಧಾರವಾಡದ ಸ್ಟಾರ್ ಹೊಟೆಲ್ ಒಂದರಲ್ಲಿ ಕುಳಿತೆವು. ಅವತ್ತಿನ ಮಾತು, ಕಥೆ, ಆರ್ಡರು, ಬಿಲ್ಲು ಎಲ್ಲ ಡಾಕ್ಟರದ್ದೇ ಹಾಗಂತ ಅವರೇ ಕಂಡೀಶನ್ ಹಾಕಿದ್ದರು. ಅವರಾಟ ನೋಡುವ, ಅವರು ಹೇಳಿದ್ದನ್ನು ಕೇಳುವ ವೀಕ್ಷಕ ಮತ್ತು ಪ್ರೇಕ್ಷಕನ ಪಾತ್ರ ಮಾತ್ರ ನಂದು. ಸರಿ
ಇಬ್ಬರಿಗೂ ಒಂದೊಂದು ಮಿನಿ ಬಿಯರ್ ಆರ್ಡರ್ ಮಾಡಿದ ಡಾಕ್ಟ್ರು ” ಆ್ಯಜ್ ಅ ಡಾಕ್ಟರ್ ಈ ಬಿಯರ್ ನ ತಿಂಗಳಿಗೊಮ್ಮೆ ಮೆಡಿಸಿನ್ ರೀತಿ ತಗೋಳ್ಳೋದ್ರಲ್ಲಿ ಏನೂ ತಪಿಲ್ಲ ಅಂತೀನಿ. ಆದ್ರೆ ಡೋಜ್ ಇದಕ್ಕಿಂತ ಒಂಚೂರೂ ಕೂಡ ಜಾಸ್ತಿ ಆಗಬಾರದು” ಅಂದ್ರು. ನಾನು ಸುಮ್ಮನೇ ನಕ್ಕೆ. ಅವರೇ ಮುಂದುವರೆಸಿದರು. ನಾನು ಕೇಳುತ್ತಾ ಕೇಳುತ್ತಾ ನಿಧಾನ ಗುಟುಕಿಸುತ್ತಿದ್ದೆ. “ಮೇಷ್ಟ್ರೇ ಮೊನ್ನೆ ಒಂದು ಸಿಲ್ಲಿ ವಿಷಯಕ್ಕೆ ನಿಮ್ಮ ಮೇಲೆ ರೇಗಾಡಿ ಬಿಟ್ಟೆ ಸಾರಿ,” ಅಂದ್ರು. ನಾನು “ಇಟ್ಸ್ ಓಕೆ ಸರ್”. ಅಂದೆ.
” ಅಲ್ವಾ , ಕೆಲವೊಂದು ಸಾರಿ ಎಂತೆಂಥವರಿಂದಲೂ ತಪ್ಪಾಗುತ್ತೆಅಲ್ವಾ ಸರ್, ಯಾರು ತಪ್ಪು ಮಾಡಲ್ಲ ಹೇಳಿ, ಮಹಾತ್ಮಾ ಅನಿಸಿಕೊಂಡಿರೋ ಗಾಂಧೀಜಿಯವರೇ ತಪ್ಪು ಮಾಡಿಲ್ಲವಾ ? ” ಅನ್ನಬೇಕೆ ? ನನಗೋ ಪರಮಾತ್ಮಾ (ಹೊಟ್ಟೆಯೊಳಗಿನ) ಆ ಮಹಾತ್ಮನನ್ನು ಎಲ್ಲೆಲ್ಲಿಗೆ ತರತೀಯಪ್ಪಾ ಅನಿಸಿದ್ದು ಸುಳ್ಳಲ್ಲ. ಅವರೇ ಮಾತು ಮುಂದುವರೆಸಿದರು. ” ನೀವೇ ಹೇಳಿ ಈ ಜಗತ್ತಿನಲ್ಲಿ ತಪ್ಪು ಮಾಡದವರು ಯಾರಿದ್ದಾರೆ ? ಪ್ರತಿಯೊಬ್ರೂ ತಪ್ಪು ಮಾಡೇ ಮಾಡತಾರೆ. ಅಥವಾ ತಾವು ಮಾಡಿದ್ದು ಸರಿ ಅನ್ಕೋತಾರೆ, ಆದ್ರೆ ಅದು ಬೇರೆಯವರಿಗೆ ತಪ್ಪು ಅನಿಸುತ್ತೆ. ಹೀಗಾಗಿ ನಾನು ಹಂಡ್ರೆಡ್ ಪರ್ಸೆಂಟ್ ಸರಿ ಅನ್ನೋ ಗಂಡಸು ಜಗತ್ತಿನಲ್ಲೇ ಇಲ್ಲ. ಒಬ್ಬ ಡಾಕ್ಟರ್ ಆಗಿ ನಾನು ತಪ್ಪು ಮಾಡಲ್ವ ? ಒಬ್ಬ ಟೀಚರ್ ಆಗಿ ನೀವು ತಪ್ಪು ಮಾಡಲ್ವ ? ರಾಜಕಾರಣಿಗಳು ತಪ್ಪು ಮಾಡಲ್ವ ? ಅಥವ ಅವನಿಗೆ ವೋಟ್ ಹಾಕಿದವನು ತಪ್ಪು ಮಾಡಲ್ವ ? ” ಓತೋಪ್ರೇತವಾಗಿ ಸಾಗಿತ್ತು ಡಾಕ್ಟರರ ಮಾತು. ಮತ್ತು ಹೊಸ ಬಿಯರ್ ಗೆ ಆರ್ಡರು !
“ಡಾಕ್ಟರೇ ಸ್ವಲ್ಪ ಮಾತ್ರ ಮೆಡಿಸಿನ್ ರೀತಿ ತಗೋಬೇಕು ಅಂತ ನೀವೇ ಹೇಳಿದ್ರಲ್ಲ” ಅಂದೆ. “ಅದನ್ನೇ ನಾ ಹೇಳೋದು ನಾ ತಪ್ಪು ಮಾಡಾಕತ್ತೀನಿ…ಹಿಹಿಹಿ……..ನೀವು ತಪ್ಪು ತಿಳಕೊಬ್ಯಾಡ್ರೀ” ನಾನು ಮಾತಾಡಲಿಲ್ಲ. ” ಇವಾಗಲ್ರೀ ನಾ ಸ್ಟೂಡೆಂಟ್ ಲೈಫ್ ನ್ಯಾಗಿಂದಲೂ ತಪ್ಪು ಮಾಡೀನಿ. ನಾನು ಒಂದು ಹುಡುಗೀನ ಲವ್ ಮಾಡಿ ತಪ್ಪು ಮಾಡಿಬಿಟ್ಟೆ.” ಅಳಾಕ ಸುರು ಮಾಡಿದ್ರು ಡಾಕ್ಟ್ರು ! ” ಅಲ್ರೀ ಸರ ಲವ್ ಮಾಡೋದ್ರಾಗ ಏನ್ ತಪೈತ್ರೀ ಸರ ” ನಾನಂದೆ. ” ಲವ್ ಮಾಡಿದ್ದು ತಪ್ಪಲ್ರಿಪಾ…. ಆದ್ರ ಅಕೀನ್ನಾ ಮದಿವಿ ಆಗಿದ್ದು ನನ್ನ ತಪ್ಪಾತು ನೋಡ್ರಿ.
ಆಗ ನಾನು, ” ಹಂಗ್ಯಾಕಂತಿರೀ ಸರ, ಮೇಡಂ ಎಷ್ಟು ಛಲೋ ಅದಾರ. ನೀವಾ ಪೇಷೆಂಟ್ ಮ್ಯಾಲೆ , ನಮ್ಮಂತೋರ ಮ್ಯಾಲೆ ರೇಗಾಡೋದು, ಪಾಪ ಮೇಡಂ” ಅಂದೆ. ಡಾಕ್ಟರ್ ಕೋಪ ನೆತ್ತಿಗೇರಾಕತ್ತಿತ್ತು, “ಇನ್ನೊಂದ್ ಮಾತಾಡಬ್ಯಾಡ್ರಿ ಮೇಷ್ಟ್ರೇ, ಈ ಕೊರೋನಾ ಸಲುವಾಗಿ ಎಲ್ಲ ಕೆಲಸದವರನ್ನ ಬಿಡಿಸ್ಯಾಳ, ಕಸ ಹೊಡದು, ಭಾಂಡೇ ತೊಳದು, ಅಡಿಗಿ ಮಾಡಿ ದವಾಖಾನಿಗೆ ಬಂದು ಪೇಶೆಂಟ್ ನೋಡಿ ತಲಿ ಕೆಟ್ಟೋಗ್ಯದ.ನೀವು ಅಕಿನ್ನ ಛಲೋ ಅಂತ ಹೊಗಳಿ ಇನ್ನಷ್ಟು ನನ್ನ ತಲಿ ಕೆಡಸಬ್ಯಾಡ್ರಿ. ದಯವಿಟ್ಟು ಹೇಳತೀನೀ ಸುಮ್ ಕುಂಡರ್ರಿ ” ಅಂದಾಗ ನಾನು ಸುಮ್ನಿರಕಾಗುತ್ತೆಯೇ ? ” ಅಲ್ರೀ ಸರ ಇಲ್ಲಿ ಇಷ್ಟು ಜೋರು ಬಾಯಿ ಮಾಡೋ ನೀವು ಮೇಡಂಗೂ ಒಂಚೂರು ಜೋರು ಮಾಡಿ ಮನಿ ಕೆಲಸನ ಅವರಿಗೂ ಮಾಡಾಕ ಹೇಳಬೇಕು” ಅಂದಿದ್ದೇ ತಡ, ಡಾಕ್ಟರು ಮುಖ ಕಿವಚಿಗೊಂಡುಬಿಟ್ರು. ಕೈ ಕೈ ಹಿಚುಗಿಕೊಳ್ಳಾಕ ಹತ್ತಿದ್ರು. ಗ್ಲಾಸ್ ಮ್ಯಾಲ ಗ್ಲಾಸ್ ಖಾಲಿ ಮಾಡಾಕತ್ತಿದ್ರು. ಹತ್ತು ನಿಮಿಷ ಒಂದು ಮಾತೂ ಇಲ್ಲ. ಮುಖದ ಮೇಲೆ ಕೋಪಾಗ್ನಿ ! ನನಗೇ ಹೊಡೆದು ಬಿಡತಾರನಪಾ ಅಂತ ನಾ ಅಂದುಕೊಳ್ಳಾಕ ಹತ್ತಿದ್ದೆ. ಅಷ್ಟರೊಳಗ ಅವರ,
“ಆಗವಲ್ದು ಮೇಷ್ಟ್ರೇ ಆಗವಲ್ದು ಅಂತ ಅಳಾಕ ಶುರು ಮಾಡಿದ್ರು.” ನಾನಾಗ, “ಇರಲಿ ಡಾಕ್ಟರೇ ಸಮಾಧಾನ ಎಲ್ಲಾರ ಮನಿ ದ್ವಾಸೀನೂ ತೂತ” ಅಂದೆ.
“ಹೌದಲ್ಲ ನೀವೂ ಇಂಥ ತಪ್ಪು ಮಾಡೀರಲ ? ನಿಮ್ಮನ್ಯಾಗುನೂ ಹಿಂಗ ಇರತದಲ್ಲ ? ” ಡಾಕ್ಟರ್ ರಲ್ಲಿ ಸಮಾಧಾನ ಪಟ್ಟುಕೊಳ್ಳುವ ಧಾವಂತ. ” ನೋಡ್ರಿ ಡಾಕ್ಟರ್ ಸಾಹೇಬ್ರೇ ಒಬ್ಬೊಬ್ರು ಮನ್ಯಾಗ ಒಂದೊಂದು ಸಮಸ್ಯೆ ಇರತದ. ಸಮಸ್ಯೆ ಇಲ್ಲದ ಸಂಸಾರನಾ ಇರಾಂಗಿಲ್ಲ. ನಿಮ್ಮ ಮನ್ಯಾಗ ಈ ಸಮಸ್ಯೆ ಇದ್ರ ನಮ್ಮನ್ಯಾಗ ಬ್ಯಾರೆ ಸಮಸ್ಯೆ, ಅವರ ಮನ್ಯಾಗ ಇನ್ನೊಂದ ನಮೂನಿ ಸಮಸ್ಯೆ ಇರತದ” ತತ್ವಜ್ಞಾನಿ ಯಾಗಿದ್ದೆ ನಾನು.
“ಹೌದಲ್ಲ, ಎಲ್ಲರ ಮನ್ಯಾಗೂ ಹಿಂಗಾ ಅಲ್ಲ ? ಹಿಹಿಹಿ….ನಾನೊಬ್ಬನ ತಪ್ಪು ಮಾಡೇನಿ ಅನಕೊಂಡುಬಿಟ್ಟಿದ್ದೆ……ಹಿಹಿಹಿ ನೀವೇನ ಹೇಳ್ರಿ ಮೇಷ್ಟ್ರೇ ಆ ದೇವರು ಒಬ್ಬನಾ ತಪ್ಪು ಮಾಡಲಾರದವ…. ” ಅಂದ್ರು. ನಾನದಕ್ಕ, “ಒಂದ ಸಲ ಅವ ಮನಸ್ಯಾರನ್ನ ಸೃಷ್ಟಿ ಮಾಡ್ಯಾನ ಸಾಕು ಮತ್ಯಾಕ ಅವ ಮ್ಯಾಲಿಂದ ಮ್ಯಾಲೆ ತಪ್ಪು ಮಾಡಾಕ ಹೊಕ್ಕಾನ್ರಿ ಸರ ” ಅಂದಾಗ ಡಾಕ್ಟ್ರು ಗಹಗಹಿಸುತ್ತಾ ಗುಡ್ ಜೋಕ್ ಗುಡ್ ಜೋಕ್…..ಅಂದ್ರು
ಬಿಲ್ ಬಂತು. ನಾನಾ ಕೊಡತೀನಿ ಅಂತ ಡಾಕ್ಟ್ರು ಜೇಬಿಗೆ ಕೈ ಹಾಕಿದ್ರು. ಏನಾಯ್ತೋ ಗೊತ್ತಿಲ್ಲ,
“ಹಿಹಿಹಿ… ಮೇಷ್ಟ್ರೇ ನಾ ಮತ್ತೊಂದ್ ತಪ್ಪು ಮಾಡೀನಿ …..ಹಿ..ಹಿ..ಹಿ….
ಪರ್ಸನ್ನ ಮನ್ಯಾಗ ಬುಟ್ ಬಂದೀನಿ. ಹಾಳಾದ್ದು ಕಿರಿ ಕಿರಿ ಕೊಡತದ ಅಂತ ಮೊಬೈಲ್ ಅನ್ನೂ ಮನ್ಯಾಗ ಒಗದ ಬಂದೀನಿ ಬಿಲ್ಲು ನೀವ ಕೊಡಬೇಕು ತಪ್ಪು ತಿಳಕೋಬ್ಯಾಡ್ರಾ….‌ ” ಅಂದ್ರು. ನಾನೂ ಹಿ…ಹಿ…ಹೀ…. ಅಂತ ಹಲ್ಲುಗಿಂಜುತ್ತಾ “ಇರಲಿ ಬಿಡ್ರಿ ತಪ್ಪೇನದ ?* ಅನಕೋತ ಬಿಲ್ ಕೊಟ್ಟು ಮನಿಗೆ ಬಂದೆ.


One thought on “ಆದಪ್ಪ ಹೆಂಬಾ ಮಸ್ಕಿ ಲಲಿತ ಪ್ರಬಂಧ-ತಪ್ಪು ಮಾಡದವರು ಯಾರವ್ರೆ

Leave a Reply

Back To Top