ಯುಗಾದಿ ವಿಶೇಷ
ಭಾರತಿ ಅಶೋಕ್
ದುಡುಕಿಬಿಟ್ಟೆ ನೀನು.
ನೀನೆಂತ ದುಡುಕು ಸ್ಭಾಭಾವದವನು ಎಂದು ನಿನಗೆ ತಿಳಿದಿಲ್ಲ,ಪ್ರತಿ ಬಾರಿ ನಿನ್ನ ದುಡುಕಿನದೇ ಪಾರುಪತ್ಯ.ಒಮ್ಮೆ ಕುಳಿತು ಯೋಚಿಸಿದರೆ, ಇಲ್ಲ ಯಾರದ್ದಾದರೂ ಸಲಹೆ ಕೇಳಿದರೆ ನಿನ್ನ ನಿರ್ಧಾರ ಬದಲಿಸುತ್ತಿದ್ದೆ ಆದರೆ, ಅದು ನಿನ್ನಿಂದ ಆಗುತ್ತಿಲ್ಲ. ಬಹುಶಃ ಇದು ನಿನ್ನ ಆಹಂ. ಹೋಗಲಿ ನೀನೆ ಕುಳಿತು ನೀನು ತೆಗೆದುಕೊಂಡ ನಿರ್ಧಾರದ ಬಗ್ಗೆ, ಅದರಿಂದಾಗುವ ಒಳಿತು ಕೆಡುಕಿನ ಬಗ್ಗೆ ಯೋಚಿಸಿದ್ದರೂ ಸಾಕಿತ್ತು.
ಏನಾಯ್ತು.
ಎನಾಯ್ತು ಎಂದು ನಿನಗೆ ತಿಳಿಯುತ್ತಿಲ್ಲವೇನು? ನೋಡೀಗ ಎಷ್ಟೊಂದು ಯಾತನೆ ನೀನು ತೆಗೆದುಕೊಳ್ಳುವ ಎಲ್ಲಾ ತೀರ್ಮಾನಕ್ಕೂ ನಾನು ಹೇಗಬೇಕಿದೆ. ಬದುಕು ಮೂರಾಬಟ್ಟೆಯಾಗುತ್ತಿದೆ. ನಿನ್ನ ಬದುಕು ಮಾತ್ರವಲ್ಲ ನಿನ್ನ ನಂಬಿದವರದ್ದೂ.ಇದೆಲ್ಲಾ ನಿನ್ನಂದ ಮಾತ್ರವೆಂದು ಹೇಳಲು ನನಗೂ ಆಗುತ್ತಿಲ್ಲ.
ಯಾಕೆ.
ಯಾಕೆಂದರೆ ಇಲ್ಲಿ ನಿನ್ನ ನಿರ್ಧಾರಕ್ಕೆ ನಾನು ಗೊತ್ತೋ ಗೊತ್ತಿಲ್ಲದೆಯೋ ಕಾರಣಳಾಗಿದ್ದೇನೆ.ತಕ್ಕಮಟ್ಟಿನ ಪರಿಸ್ಥಿತಿಯೂ, ವ್ಯವಸ್ಥೆಯದ್ದು ಮಾತ್ರ ಸಿಂಹ ಪಾಲು.ನಿನ್ನ ಮನಸ್ಸನ್ನು ಅರಿತು ನಾನೇ ಎಲ್ಲವನ್ನು ನಿರ್ಧಸರಿಬೇಕಿತ್ತು. ಆದರೆ….ನೀನೆಷ್ಟು ಅರ್ಥವಾಗಿರುವೆ ನನಗೆ ???ಅಥವಾ ನಾನೆಷ್ಟು ಅರಿತಿರುವೆ ನಿನ್ನನ್ನು, ಗೊತ್ತಿಲ್ಲ! ಈಗಲೂ ಆ ಅದು ಸಾಧ್ಯವಾಗುತ್ತಿಲ್ಲ.ಕಾರಣ ನಾವು ನಮ್ಮಗಳ ನಡುವೆ ಕಾಣದ ಗೋಡೆಗಳನ್ನು ಕಟ್ಟಕೊಂಡುಬಿಟ್ಟಿದ್ದೇವೆ, ಅದು ಭದ್ರವಾಗುತ್ತಿದೆ. ಕೆಡವಿ ಹಾಕುವ ಪ್ರಯತ್ನದ ಬದಲು ಅಲ್ಲಲ್ಲೇ ಇದ್ದುಬಿಡುವ, ಎಲ್ಲಾ ಸಾಧ್ಯತೆಗಳು ಎಲ್ಲಾ ಕಡೆಯಿಂದಲೂ ನಡೆಯುತ್ತಿವೆ..ಮತ್ತೆ ಮತ್ತೆ ಗೋಡೆ ಕಟ್ಟುವ ಯತ್ನವೇ ನಡೆಯುತ್ತಿದೆ ಇದು ಹೀಗೆ ಮುಂದುವರಿದರೆ…
ಹೀಗೆ ಮುಂದುವರಿದರೆ…
ಇದು ಹೀಗೆ ಮುಂದುವರಿದರೆ ನಾವಿರುವಲ್ಲಿಯೇ ಉಸಿರು ಕಟ್ಟಿ ಇಲ್ಲವಾಗುವ ಅಪಾಯಗಳೇ ಹೆಚ್ಚು .
ಹೌದು ನಾವೇಕೆ ನಮ್ಮ ನಮ್ಮ ಕೀಳು ಮನಗಳನ್ನು ಕಿತ್ತು ಒತ್ತಟ್ಟಿಗಿಟ್ಟು ಒಂದೆಡೆ ಕುಳಿತು ನಿಧಾನವಾಗಿ ಮಾತನಾಡಿ ಎಲ್ಲಾ ಗೋಡೆಗಳನ್ನು ಹೊಡೆದು ಹಾಕುವ ಯೋಜನೆ ರೂಪಿಸಬಾರದು? ನಾನ್ ರೆಡಿ. ನೀನು….???
ನೋಡು ಈಗಲೇ ಯೋಚಿಸಿ ನಿರ್ಧಾರಕ್ಕೆ ಬಂದುಬಿಡು ನಾನು ಯೋಚಿಸಿಯೇ ಇದು ಸರಿ ಎಂದುಕೊಂಡಿರುವೆ.ನಿನಗೂ ಹಾಗೆ ಅನ್ನಿಸಿದರೆ ನಾವಿಬ್ಬರೂ ಯೋಚಿಸೋಣ.ಇದು ಸರಿ ಎಂದು ಇಬ್ಬರಿಗೂ ಗೊತ್ತು. ಗೊತ್ತಿದ್ದು ಉಡಾಫೆತನ ಬೇಡ ಅಲ್ವಾ…???
ನಿನಗೆ ಒಂದು ವಿಷ್ಯ ಹೇಳ್ಲಾ… ನೀನು ಹೀಗೆ ದುಡುಕಿ ಆರಿಸಿಕೊಂಡ ಬದುಕು ಹೇಗಿದೆ, ಏನಾಗುತ್ತಿದೆ,ಇದರಿಂದ ನಿನಗೆ ಆಗುತ್ತಿರುವ ದೈಹಿಕ ಮಾನಸಿಕ ದಣಿವಿನ ಅರಿವು ನನಗಿದೆ, ಅರಿವಿನ ಜೊತೆ ಜೊತೆಗೆ ವೇದನೆಯನ್ನು ಅನುಭವಿಸುತ್ತಿರುವೆ, ನಿನಗೆ ನೀನು ಮಾಡುತ್ತಿರುವ ಕೆಲಸದ ಅನುಭವವಿಲ್ಲ, ಆದರೂ ಮುಂದೆ ಅಲ್ಲಿ ಆನುಭವ ಆಗಬಹುದು ಆದರೆ ಒಂದು ನೆನಪಿಡು ನೀನು ಅರಿಸಿಕೊಂಡಿರುವೆಯಲ್ಲ ಆ ಬದುಕನ್ನು ಎಲ್ಲಿಯೂ ನಡೆಸಬಹುದು! ಆದರೆ ಆ ಬದುಕು ನಿನಗೆ ಅನಿವಾರ್ಯವಲ್ಲ ಎನ್ನುವುದು ನಿನಗೂ ಗೊತ್ತಿದೆ. ಯಾರದ್ದೋ ಮೇಲಿನ ಜಿದ್ದಿಗಾಗಿ ನಿನ್ನ ಬದುಕನ್ನು ಸವಾಲಿಗೊಡ್ಡುವೆಯಾ?ಬದುಕು ಬಾಳುವುದಕ್ಕಾಗಿ ಮಾತ್ರ ಯಾರದೋ ಬದುಕಿನ ಅಥವಾ ವ್ಯವಸ್ಥೆಯ ಜೊತೆಗೆ ನಮ್ಮ ಬದುಕನ್ನು ಪಣಕ್ಕಿಡಲು ಬದುಕಿಗೆ ಬೆಲೆ ಇಲ್ಲವೆ? ಬದುಕನ್ನು ಪಣಕ್ಕಿಟ್ಟು ಬದುಕುವುದು ಬದುಕಲ್ಲ… ಬದುಕನ್ನು ಸವಾಲಿನಂತೆ ಸ್ವೀಕರಿಸಿ ಏನೇ ಬಂದರೂ ಅದನ್ನು ಪರಿಹರಿಸಿಕೊಂಡು ಬದುಕುವುದೇ ಬದುಕಿನ ಸುಂದರತೆ.
ಸವಾಲು.
ಬದುಕೊಂದು ಸವಾಲೇ ಸರಿ. ಜೀವನದಲ್ಲಿ ಸಮಸ್ಯೆ ಯಾರಿಗಿಲ್ಲ???ಇಲ್ಲಿ ಬದುಕಿನ ತಿರುವುಗಳನ್ನು ಸಮಸ್ಯೆ ಎಂದುಕೊಂಡರೆ ಖಂಡಿತಾ ಅವು ಸಮಸ್ಯೆಗಳೇ . ಅದರೆ ಸಮಸ್ಯೆಗಳು ಬದುಕನ್ನು ಇನ್ಮಷ್ಟು ಮತ್ತಷ್ಟು ಅರ್ಥೈಸಲು ಇರುವ ಸಾಧನಗಳು. ಅಂಥ ಸಾಧನಗಳು ಜೀವನದ ಎಲ್ಲಾ ಮಗ್ಗಲುಗಳನ್ನು ಒಂದೊಂದಾಗಿ ಪರಿಚಯಿಸುತ್ತಾ, ಜೊತೆಗೆ ಅದರ ನಿರ್ವಹಣೆಯನ್ನು ಕಲಿಸುತ್ತಾ ಸಾಗುವಲ್ಲಿ ಕೌಶಲ್ಯಗಳನ್ನು ವೃದ್ಧಿಸುತ್ತವೆ. ಸಮಸ್ಯೆಗಳು ಬದುಕನ್ನು ತುಂಬು ಮನದಿಂದ ಸ್ವೀಕರಿಸಲು ಮತ್ತು ತುಂಬು ಜೀವನವನ್ನು ಆಸ್ವಾದಿಸಲು ಕಲಿಸುತ್ತವೆ. ಸಮಸ್ಯೆಗಳನ್ನು ತಂದೊಡ್ಡುವುದರ ಜೊತೆಗೆ ಬದುಕನ್ನು ಸುಂದರವಾಗಿಸುವ ಸಮಸ್ಯೆಯ ಎಲ್ಲಾ ಮೂಲಗಳಿಗೂ ನಾನು ಋಣಿ. ಬದುಕನ್ನು ಅತ್ಯಂತ ವ್ಯವಸ್ಥಿತವಾಗಿ,, ಸಂಪೂರ್ಣವಾಗಿ ಅರಿತು ಅನುಭವಿಸಲು ಇರುವ ಮಾರ್ಗಗಳು ಈ ಸಮಸ್ಯೆಗಳು.ಮನುಷ್ಯನ ಕ್ರಿಯಾಶೀಲತೆಯನ್ನು, ಬದುಕಿರುವವರೆಗೂ ಬದುಕುವಂತೆ, ಬದುಕನ್ನು ಬದುಕಿರುವವರೆಗೂ ಪ್ರೀತಿಸುವಂತೆ ಕಲಿಸುವ ನಿಮಗೆ ಶರಣು.
ಕೆಡವಿಬಿಡೋಣ.
ಮನದ ಗೋಡೆಗಳಿಗೆ ಇಂದೇ ಮೋಕ್ಷ ತೋರಿಸಿಬಿಡೋಣ ಬಂದುಬಿಡು. ಒಟ್ಟಿಗೆ ಸಹನೆಯೆಂಬ ಗುದ್ದಲಿಯಿಂದ ಗೋಡೆ ಅಗೆದು ಸಮಾನತೆಯಿಂದ ನೆಲಸಮ ಮಾಡಿ ಪರಸ್ಪರ ಸಹಬಾಳ್ವೆ ಎಂಬ ಮಂತ್ರ ಕಲಿತು ಬದುಕಿನ ಪೂಜೆಗೆ ಪ್ರೀತಿ,ವಿಶ್ವಾಸ,ಕಾಳಜಿ,ಮಮಕಾರಗಳನ್ನು ಅರ್ಪಿಸುತ್ತಾ ಸಾಗೊಣ. ಏನಂತೀಯಾ ಗೆಳೆಯ…???
ನಾನಂತೂ ಇದೆಲ್ಲಕೂ ಮನಸ್ಸನ್ನು ನಗ್ನಗೊಳಿಸಿ ಕಾದಿರುವೆನು. ಬರುವ ನಿರೀಕ್ಷೆಯಿಂದ….
ಬರುವೆ, ಬಂದೇ ಬರುವೆ…..
ಭಾರತಿ ಅಶೋಕ್.
Superb