ಡಾ. ಪುಷ್ಪಾ ಶಲವಡಿಮಠ ಕವಿತೆ-ಮೋಕ್ಷವನ್ನರಸುತ್ತ

ಕಾವ್ಯಸಂಗಾತಿ

ಡಾ. ಪುಷ್ಪಾ ಶಲವಡಿಮಠ

ಮೋಕ್ಷವನ್ನರಸುತ್ತ

ಕೊನೆಗೂ
ಮಹಾಮೌನವನು ಮುರಿದನು
ಧೀರ್ಘವಾದ ಉಸಿರನೆಳೆದುಕೊಂಡನು

ಮೌನ ಮಾತಾಗಬೇಕಿದೆ
ಸಾಕಾಯ್ತು ಬೋಧಿವೃಕ್ಷದ ಸಹವಾಸ
ಎದ್ದು ಹೊರಟನು ಹೊರಟನು
ಮೋಕ್ಷವನರಸುತ್ತ……

ಸುತ್ತ ಕತ್ತಲು ದಟ್ಟ ಕಾಡು
ಮೃಗಗಳ ಭಯವಿಲ್ಲ ಅವನಿಗೆ
ಮೌನದ ಮಾತು ಬಲ್ಲವನಿಗೆ
ಸಚರಾಚರದ ಮೌನದ ಮಾತು ತಿಳಿಯಿತು
ಎದ್ದು ಹೊರಟನು ಹೊರಟನು
ಮೋಕ್ಷವನರಸುತ್ತ……

ಕೊರಳ ತುಂಬ ಬೆರಳ ಮಾಲೆ
ಕಣಕಣದಲೂ ರಕ್ತದಾಹ
ನಕ್ಕನಿವನು ಮುಗುಳ್ನಕ್ಕನು
ಅಂಗುಲ ಅಂಗುಲದಲ್ಲೂ ಈಗ
ಮಮತೆಯ ಮಂದಹಾಸ
ಕಟುಕನ್ನೆದೆಯಲ್ಲಿಗ ಕರುಣೆಯ ದೀಪ

ಕಡು ವಿಷಾದದ ಬಟ್ಟಲಲ್ಲಿ
ಪ್ರೀತಿ ಮಧುವ ಸುರಿಯುತ್ತ
ನಂಜಿನ ಮುಳ್ಳು ಸವರುತ್ತ
ಜಗದೆದೆಯಲಿ ನಗುವ ಬಳ್ಳಿ ಹಚ್ಚಿದನು
ಅಮೃತತ್ವ ಹಂಚುತ
ಹೊರಟನು ಹೊರಟನು
ಮೋಕ್ಷವನರಸುತ್ತ……

ಅರಮನೆಯ ಭದ್ರ ಗೋಡೆಯಲಿ
ಅವನುಸಿರು ಕಟ್ಟಿತ್ತು
ಬಯಲಮನೆಯಲ್ಲಿಗ ಸುಳಿ ಸುಳಿದು
ಸೂಸುವ ತಂಗಾಳಿ
ಸತ್ಯವನರುಸುತ ಬೆಳಕಿನೂರಿಗೆ
ನಡೆದು ಬಂದನು
ದೇಹ ದಂಡನೆಯ ತೊರೆದು ಹೊರಟನು
ಮೋಕ್ಷವನರುಸುತ……

ಗೌತಮಿಯ ಮೊಗದಲ್ಲಿಗ ಕಿರುನಗೆ
ಈಗ ಸಾಸಿವೆಯ ಹಂಗಿಲ್ಲ ಅವಳಿಗೆ
ಸಾವಿನ ಗುಟ್ಟು ಬಯಲಾಗಿದೆ
ಮೌನ ಮುರಿದವನ ಮಾತು ತಿಳಿದಿದೆ

ಆಸೆಯ ಕುದುರೆಗೆ ಲಗಾಮು ಹಾಕಿ
ದುಃಖಸೇತುವೆಯ ಮುರಿದು
ಸುಖದೂರಿನಲಿ ನೆಲೆಸುವ ಪರಿಯ ಕಲಿಸುತ
ಹೊರಟನು ಹೊರಟನು
ಮೋಕ್ಷವನರಸುತ್ತ……

ಸಂಘದೊಳಗೆ ನಿಸ್ಸಂಗಿಯಾಗಿ
ಎಲ್ಲಾರೊಳಗೊಂದಾಗಿ
ಜೀವಜಲವ ಹಣಿಸುತ
ಭರವಸೆಯ ಬೆಳಕ ಬಿತ್ತುತ್ತ
ಮೋಕ್ಷವನರಸಿ ಹೊರಟವನು
ಪ್ರೀತಿಯಲಿ ಬಂಧಿಯಾದ

ಕೊನೆಗೂ ಮಹಾಮೌನವ ಮುರಿದನವನು
ಬೋಧಿವೃಕ್ಷವ ತೊರೆದನು
ಎಲ್ಲರೆದೆಯಲಿ ಕರಗಿದನು
ಮೋಕ್ಷವನರಸುತ….
ಪ್ರೀತಿಯಲಿ ಬಂಧಿಯಾದನು.


4 thoughts on “ಡಾ. ಪುಷ್ಪಾ ಶಲವಡಿಮಠ ಕವಿತೆ-ಮೋಕ್ಷವನ್ನರಸುತ್ತ

  1. ನಿಜಕ್ಕೂ ಬುದ್ಧನ ನಡೆಯನ್ನು ಹೊಸತಾಗಿ ಚಿಂತಿಸುವ ಕವಿತೆ ಲಂಕೇಶರ ಲೇಖನ ನೆನಪಿಸಿತು.ಅಭಿನಂದನೆ‌ಮೆಡಮ್

Leave a Reply

Back To Top