ಭಾರತಿ ಅಶೊಕ್ ಕವಿತೆ-ಮೌನ ಮುರಿಯುವ ಮುನ್ನ

ಕಾವ್ಯ ಸಂಗಾತಿ

ಮೌನ ಮುರಿಯುವ ಮುನ್ನ

ಭಾರತಿ ಅಶೊಕ್

ಮನವು ಹಂಬಲಿಸುತ್ತಿದೆ
ಮಾತಿನ ಪ್ರವಾಹ ಹರಿಸಲು
ಹಗುರಾಗಲು

ಮೌನದ್ದೇ ಪಾರುಪತ್ಯ
ಮಾತಿನ ಪ್ರವಾಹಕೆ ಕಟ್ಟೆ ಹಾಕಿ ತಡೆಯುತ್ತಿದೆ

ಮನಸ್ಸಿಗೆ
ಮಾತಿನ ಹರಹು
ಅದರ ಪ್ರವಾಹಕೆ ಇನ್ನೇನು
ಒಡೆದೇ ಹೋಗುವೆನೆನ್ನುವ
ಯಾತನೆ, ಭಯ

ಮೌನದ ಉದ್ದಟತನ
ಸಹಿಸಲಸಾಧ್ಯ, ಮೀರಿದರೆ
ಮಿತಿ ಶರಣಾಗತಿಯೇ ಶಾಸ್ತಿ

ಮಾತಿನ ತಾಳ್ಮೆಗೂ
ಮಿತಿಯುಂಟು, ಸಹಿಸಿದಷ್ಟು
ಮೌನದ ಮೆರವಣಿಗೆ ಹೆಚ್ಚು

ಮೌನವೇ ನೀ ಸಹಿಸಿದಂತೆಲ್ಲಾ
ಎದೆಯಲ್ಲಿ ನೋವಿನ ಕಾರ್ಮೋಡ
ಕವಿದು ಸಿಡಿಲು ಗುಡುಗು ಹೆಚ್ಚಿ
ಹುಚ್ಚೆದ್ದು ಬೋರ್ಗರೆವ
ಮಳೆ ಸುರಿದು ಪ್ರವಾಹದಲಿ
ನಿನ್ನ ಮೌನಕೆ ಬೆಲೆ ಎಲ್ಲಿ

ಪ್ರಳಯಕೆ ಸಾಕ್ಷಿಯಾಗುವಿ
ಆಹಾಕಾರವ ತಡೆಯಲು ನನ್ನಿಂದ
ಸಾಧ್ಯವಾಗದು,

ಮೊದಲು ನೀ ಕಟ್ಟಿದ
ಕಟ್ಟೆಯನು ಒಡೆದು
ಮಾತಿಗೆ ದಾರಿ ಮಾಡು
ಅನಾಹುತ ತಪ್ಪಿಸು

ಈಗ ಶುರುವಾಗಿದೆ.
ಮಾತು ಮೌನಕು ಕಲಹ

ಮಾತು, ತನ್ನ ಮಾತಿನ
ರಭಸದಲಿ ಮೌನವನ್ನು
ಮೀರಿ ಹರಿದೇಬಿಟ್ಟಿತು
ಕಟ್ಟೆ ಒಡೆಯುವ ಮುನ್ನ
ಪ್ರಳಯವಾಗುವ ಮುನ್ನ.


ಭಾರತಿ ಅಶೊಕ್

Leave a Reply

Back To Top