ಕಾವ್ಯ ಸಂಗಾತಿ
ಡಾ.ಶಿವಕುಮಾರ್ ಮಾಲಿಪಾಟೀಲ
ಇವಳು ಹೀಗೆ……….
ಇವಳು ಹೀಗೆ ಎಲ್ಲಿಯೂ ಶಾಶ್ವತವಲ್ಲದಿದ್ದರೂ ಶಾಶ್ವತ ಜಾಗ ಪಡೆದವಳು
ಮದುವೆಯಾಗಿ ಹುಟ್ಟಿದ ಮನೆ ಬಿಡುವಳು
ತನ್ನ ಹೆಸರು ಬದಲಿಸಿ ,
ತಂದೆಯ ಹೆಸರು ತೆಗೆದು ಗಂಡನ ಹೆಸರು ಸೇರಿಸುವಳು
ತವರುಮನೆ ಅಡ್ಡ ಹೆಸರು ಅಳಿಸಿ ಗಂಡನ ಮನೆ ಅಡ್ಡ ಹೆಸರು ಬರೆಸುವಳು
ಇವಳು ಹೀಗೆ ಏನು ಮರೆಯದೆ ಮರೆತಂತೆ ಇರುವಳು
ಒಂಬತ್ತು ತಿಂಗಳು ಗರ್ಭದಲ್ಲಿ ಹೊತ್ತು ಮಗುವನ್ನು ಹೆತ್ತು ಮಗುವಿನ ಹೆಸರಿನ ಮುಂದೆ ಗಂಡನ ಹೆಸರು ಬರೆಸುವಳು..ಇವಳು ಓದಿಸಿದ
ಮಗ ,ಮಗಳು ಕೀರ್ತಿತಂದರೆ ಮತ್ತೆ ಗಂಡನ ಹೆಸರೇ ಹೇಳುವಳು
ಇವಳು ಹೀಗೆ ತನ್ನ ಹೆಸರು ಬರಲಿಲ್ಲ ಎಂದೂ ಯೋಚಿಸದ ತ್ಯಾಗಮಯಿ
ಹೌದು ಇವಳು ಹೀಗೆ ತನ್ನ ಕನಸುಗಳನ್ನು ಮುಚ್ಚಿಟ್ಟು, ಮಕ್ಕಳು ,ಗಂಡನ ಸಾಧನೆಯಲ್ಲಿ ಖುಷಿ ಪಡುವ ಕರುಣಾಮಯಿ
ಗಂಡ ಹೋದರೆ ವಿಧವೆಯಾಗಿ
ತಾಳಿ ಬಳೆ ,ಎಲ್ಲಾ ಸೌಭಾಗ್ಯ ಕಳೆದುಕೊಳ್ಳುವಳು
ಇನ್ನೊಂದು ಮದುವೆ ಆಗದೆ ಯೌವ್ವನವನ್ನು ಮಕ್ಕಳ ಬೆಳೆಸುತ ಕಳೆಯುವಳು
ಇವಳು ಹೀಗೆ ದೀಪದಂತೆ ತಾ ಸುಟ್ಟು ಬೆಳಕ ನೀಡುವಳು
ಮುಟ್ಟಾದರೆ ಅಪವಿತ್ರಳು ,ಗುಡಿ ಒಳಗೆ ಹೋಗಲಾರಳು
ಮೈ ಮುಖ ಬಟ್ಟೆಯಿಂದ ಮುಚ್ಚಿಕೊಂಡು ಅದೆ ಸ್ವತಂತ್ರ ಎನ್ನುವಳು
ಮಕ್ಕಳಾಗದಿದ್ದರೆ ಮುಂದೆ ನಿಂತು ಗಂಡನಿಗೆ ಇನ್ನೊಂದು ಮದುವೆ ಮಾಡುವಳು
ಹೌದು ,ಇವಳು ಮಾಯೇ ಪಡೆದುಕೊಳ್ಳುದಕ್ಕಿಂತ ಕೊಟ್ಟೆ ಮಾಯವಾಗುವಳು
ಮಕ್ಕಳಿಗೆ ಉಣಿಸಿ ತಾನು ಉಪವಾಸ ಮಲಗುವಳು
ಮಕ್ಕಳನ್ನು ಮತ್ತಗೆ ಮಲಗಿಸಿ ತಾನು ನಿದ್ದೆ ಗೆಟ್ಟವಳು
ಹೌದು ಇವಳು ಹೀಗೆ ಒಡಲಕಿಚ್ಚಲಿ ಮನೆ ಬೆಳಗಿದವಳು
ಹೌದು ಹೀಗೆ ಇವಳು ಬಿಟ್ಟ ಮನೆ ,ಕೊಟ್ಟ ಮನೆಯ ಆಸ್ತಿ ಕೇಳದವಳು
ಸಂಸಾರವನ್ನೇ ಆಸ್ತಿ ಮಾಡಿಕೊಂಡವಳು
ಚಿಕ್ಕವಳಿದ್ದಾಗ ಹೆತ್ತವರು ,
ಮದುವೆ ನಂತರ ಗಂಡ ,
ಮುಪ್ಪಿನಲ್ಲಿ ಮಕ್ಕಳ ಜೊತೆಗೆ ಸ್ವತಂತ್ರವಿಲ್ಲದೆ ಬದುಕಿದರೂ
ಎಂದೂ ಮಂಕಾಗದೆ ಸಂಸಾರವೇ ಪ್ರಪಂಚ ಎಂದುಕೊಂಡವಳು
ಹೌದು ಇವಳು ಹೀಗೆ ಎಲ್ಲಿಯೂ ಕಾಣದಿದ್ದರೂ ಎಲ್ಲರ ಹೃದಯದಲ್ಲಿ ನೆಲೆಸುವವಳು
…
ಎಲ್ಲಿಯೂ ಶಾಶ್ವತವಲ್ಲದವಳಾಗಿ
ಹೆತ್ತವರ ,ಗಂಡ ,ಮಕ್ಕಳ ಹೃದಯದಲ್ಲಿ ನೆಲೆಸುವಳು..
ಹಿಂದೆ ನಿಂತು ಮೌನದಿ ಸಮಾಜ ಪರಿವರ್ತಿಸುವ ಶಕ್ತಿ ಇವಳು
——————————
ಡಾ.ಶಿವಕುಮಾರ್ ಮಾಲಿಪಾಟೀಲ