ಅಕ್ಷತಾ ಜಗದೀಶ್ ಕವಿತೆ ನಾನೊಂದು‌ ಹೆಣ್ಣು..

ಕಾವ್ಯ ಸಂಗಾತಿ

ನಾನೊಂದು‌ ಹೆಣ್ಣು..

ಅಕ್ಷತಾ ಜಗದೀಶ

ನಾರಿ ನೀನು ಶಕ್ತಿ ಎಂದಿರಿ
ಶಕ್ತಿ ಪ್ರದರ್ಶಿಸ ಹೋರಟಾಗ
ಗಂಡುಬೀರಿಯ ಅಂಕಿತ ನೀಡಿದಿರಿ…
ಮರು ಪ್ರಶ್ನೆಯ ನಡುವೆ
ಮೌನದ ಪರದೆಯ ಮೇಲೆ
ಗೀಚಿದ ಅಕ್ಷರಮಾಲೆ
ನಿನೊಂದು ಹೆಣ್ಣು ಅಷ್ಷೇ….!!

ನಾರಿ ನೀನು ಬೆಳಕಿನ ಕಿರಣ ಎಂದಿರಿ
ಬೆಳಕು ಪ್ರಜ್ವಲಿಸ ಹೊರಟಾಗ
ಕಿಡಕಿ ಬಾಗಿಲನ್ನೇಕೆ ಮುಚ್ಚಿದಿರಿ?
ಕತ್ತಲ ಜಗತ್ತಿನೊಳಗೆ
ಮೇಣದ ಉರಿ ಕೈ ಸುಟ್ಟಾಗ
ಸಿಕ್ಕ ಉತ್ತರವಿಷ್ಟೇ..
ನೀನೊಂದು ಹೆಣ್ಣು ಮಾತ್ರವಷ್ಟೇ….!

ಗದ್ಯದೋಳಗೆ ಮುಚ್ಚಿದಿರಿ
ಪದ್ಯದೊಳಗೆ ವರ್ಣಿಸಿದಿರಿ
ಆಂತರಿಕ ಸೌಂದರ್ಯ ಮರೆಮಾಚಿದಾಗ
ಪ್ರಸವದ ವೇದನೆಯಲ್ಲಿ
ಸಿಕ್ಕ ಉತ್ತರವಿಷ್ಟೇ
ನೀನೊಂದು ಹೆಣ್ಣು ಮಾತ್ರವಷ್ಟೇ……!

ಚಂದ್ರತಾರೆಯ ತೋರಿಸಿ
ಕೈ ತುತ್ತು ನೀಡಿದಾಕೆ…
ಕನಸುಗಳಿಗೆ ರೆಕ್ಕೆ ಕಟ್ಟಿ
ಮನಬಿಚ್ಚಿ ಹಾರಬಯಸಿದಾಗ
ಸಿಕ್ಕ ಉತ್ತರವಿಷ್ಟೇ..
ನೀನೊಂದು ಹೆಣ್ಣು ‌ಮಾತ್ರವಷ್ಟೇ……!

ಬಂಧನಗಳ ಬೇಲಿ ಇಲ್ಲ
ಭೂತಾಯಿ‌ ಮಡಿಲಿಗೆ…
ಸಹಾನುಭೂತಿಗೆ‌ ಕೊರತೆಯಿಲ್ಲ
ಹೆಣ್ಣಿನ ಒಡಲಿಗೆ….
ಸ್ವತಃ ಕ್ಷೋಭೆಯೊಳು ಮೇಲೆರಲು ಭಯವಿಲ್ಲ
ಮಾತೃತ್ವದ ಕಡಲಿಗೆ…
ನಿನ್ನೆಲ್ಲ ಕನಸುಗಳಿಗೆ ರೆಕ್ಕೆಯಾಗಿ ನಾನಿರುವೆ
ಭಯಪಡದಿರು ಮನುಕುಲವೇ…
ನಾನೊಂದು ಹೆಣ್ಣು ….ಹೆಣ್ಞು ಮಾತ್ರವಷ್ಟೇ……..!!!!


ಅಕ್ಷತಾ ಜಗದೀಶ.

2 thoughts on “ಅಕ್ಷತಾ ಜಗದೀಶ್ ಕವಿತೆ ನಾನೊಂದು‌ ಹೆಣ್ಣು..

Leave a Reply

Back To Top