“ಅವಳ ಹೆಜ್ಜೆ”
ವಾಣಿ ಭಂಡಾರಿ
ಗೋಡೆ ಕಿಟಕಿ ಬಾಗಿಲು
ಜಗಲಿ ಚಾವಡಿಗಳೇ ಮಾತಾಡುವಾಗ
ಅವಳದು ಸ್ಮಶಾನ ಮೌನ!.
ಕೆದರಿದ ಕೂದಲು
ಹರಿದ ಸೀರೆ
ತೂತು ಬಿದ್ದ ರವಿಕೆ
ಎದೆ ಭಾರ ತಾಳದೆ
ಹೊರಬಿದ್ದ ಮೊಲೆ.
ನೀರವ ಗಾಡತೆಯಲಿ
ಜೀವ ಸೆಲೆ ಕಾಣದೆ
ಬಳಲಿ ಬೆಂಡಾದ ಬಿರುಕು ನೆಲದಂತೆ.
ಆಯಾಸ ಆಸೆಗಿಲ್ಲ ಬೆಲೆ
ಅವಳ ಹೆಜ್ಜೆ ಸಂದಿಯೊಳಗೆ
ಕಂದೀಲು ಹಿಡಿದು.
ಕರಿ ಹಿಡಿದ ತೊಲೆ
ಮನೆಯ ಬೆಂಗ್ಟಿ ಜೀವವೆ ಲಡ್ಡು.
ವ್ಯಸನ ತುಂಬಿ ಕೊರೆದ ಗೆದ್ದಲ ಉಪಟಳ
ಕೆಳಗುರುಳಿದ ಹಣ್ಣಾದ ದರಗಲು
ಮಾಗಿದ ಜೀವಗಳು
ಗೊಬ್ಬರವಾಗಲು ಕಾತುರ!.
ಕೇಳಿಗೆ ಕರೆವ ಅಮಲು
ಕಣ್ಣುಗಳು
ಮನದ ತುಂಬಾ ಹೊದ್ದ ಹಸಿರ
ಬಿಸ್ತಾರಕ್ಕು ತಪ್ಪುತ್ತಿಲ್ಲ ಕಾಟ.
ದಾಖಲೆ ಕಾಣದ ಸಾಲ
ಅವಡುಗಚ್ಚಿ ದುಡಿದರೂ
ಎದೆಯ ಶೂಲ ಇಳಿಸಲಾಗುತ್ತಿಲ್ಲ.
ಹೆಗಲು ನೀಡದ ಜೀವ ಸತ್ತ ಭಾವದ ಹಿಡಿಕೆ
ಎಲ್ಲವನು ಮನ ತುಂಬಿ
ಜ್ವಾಲಾಮುಖಿಯನು ಒಳಗಿರಿಸಿ
ಸಾಗುತ್ತಿದ್ದಾಳೆ ದಿಟ್ಟತನದಲಿ
ಹೆಣಭಾರ ಹೊತ್ತ ಮನಸಿನಿಂದ!.
ಎದೆಯ ದನಿಗಿರದ ಕಿಮ್ಮತ್ತು
ಈಗೀಗ ಬಾರ್ ಪಬ್ಬುಗಳಲಿ ತುಟ್ಟಿಗೆ ಬಿಕರಿಯಾಗುತಿವೆ.
ಅಲ್ಲಲ್ಲಿ ಕತ್ತರಿಸಿಕೊಂಡ ಮಿಡಿ
ಪ್ರಾಕು ಜಿನ್ಸ್ ಗಳು,,,,,
ಗಲ್ಲಿಯಲಿ ಮಾತ್ರ ಜೊಲ್ಲು
ಸುರಿಸಿ ಸೊಲ್ಲು ಅಡಗಿಸಲು
ಹೊಂಚಾಕುವ ರಣಹದ್ದುಗಳು.
ಸೊರಗಿದ ಮಿಕಗಳಿಗೆ ಸದಾ ಬಲೆ ಹೆಣೆತ.
ಆದರೆ ಮಾಲ್ ಪೈವ್ ಸ್ಟಾರ್ ಗಳಲಿ
ಮಾತ್ರ ಎಗ್ಗಿರದ ಕುಣಿತ
ಎಷ್ಟಾದರೂ ಅದು ನಸೆಯ ನಶೆ
ಹಣದ ಹೊಳೆಯ ಜಾಗರಣೆ
ಮುಚ್ಚಿದೆ ಎಲ್ಲ ದುಡ್ಡಿನ ರಣಕಹಳೆಯಲಿ!.
ಆದರೆ,,,ಇಲ್ಲಿ ಅವಳು
ಪ್ರತಿ ಗಲ್ಲಿ ಓಣಿ ಜೋಪಡಿ
ಗುಡಿಸಲಿನಲಿ ಅವಳ ಕನಸು
ಕಮರುತ್ತಲೇ ಇದೆ,,,
ಬಾಳಿನಲ್ಲಿ ನಿತ್ಯ ನಿಶೆಯೆ ಹೊದಿಕೆ.
ಜಗದ ತುಂಬಾ ಪುಕ್ಕಟೆ
ಗಾಳಿ ಮಾತು ಅವಳ ಕುರಿತು.