ಮಹಿಳಾ ದಿನದ ವಿಶೇಷ

ನೀನು ನೀನಾಗು ಮಗಳೇ..

ಮಂಜುಳಾ ಪ್ರಸಾದ್ ದಾವಣಗೆರೆ

ಒಳಮನೆಯ ಕೋಣೆಯಲಿ ನೋವೆಲ್ಲಾ ಮೈಹೊದ್ದು ನಲುಗಿ ಮರುಗುವ ಹೆಣ್ಣು ನೀನಾಗಬೇಡ ಮಗಳೇ..
ನೀನಾಗಬೇಡ ಕತ್ತಲೆ ಕೋಣೆಯ ಬಂಧಿ..
ಕೆಚ್ಚೆದೆಯ ಗಂಡುಗಲಿ ಬಿಚ್ಚು ಮಾತಿನ ಜಾಣೆ,
ಜಗವ ಕಾಯುವ ಹೆಣ್ಣು ನೀನಾಗು ಮಗಳೇ..
ಜಗದಗಲ ಬೆಳಕು ಬೀರುವ ಕಿರಣ ನೀನಾಗು..

ಅವರಂತೆ ಇವರಂತೆ ಅವರಿವರಿಗೆ ಹೊರೆಯಾಗುವಂತೆ
ಕಾಲ ಕಸವಾಗಿ ಕಣ್ಣೀರಿಡುವಂತೆ ನೀನಾಗಬೇಡ ಮಗಳೇ, ನೀನಾಗಬೇಡ ಮರದ ಜೊತೆಗಿನ ಬಳ್ಳಿಯಂತೆ…
ಮರವೇ ನೀನಾಗು ಸರ್ವರಿಗೂ ನೆರಳಾಗು,
ಫಲ ನೀಡಿ ಸಲಹುವ ಮಾತೆಯಾಗು ಮಗಳೇ..
ಸರ್ವರುಸಿರಲಿ ನಿನ್ನ ಹೆಸರು ಹಸುರಾಗುವಂತಾಗು..

ದೌರ್ಜನ್ಯಕೆ ನಲುಗುವ ಅಪಹಾಸ್ಯಕೆ ಬೆದರುವ,
ಸೋತು ಬದುಕು ಮುಗಿಸುವ ಹೆಣ್ಣು ನೀನಾಗಬೇಡ ಮಗಳೇ,
ನೀನಾಗಬೇಡ ಭಯದಿ ಬದುಕ ಸವೆಸುವ ಹೇಡಿ.,
ದುಷ್ಟಶಕ್ತಿಯ ದಮನಿಸುವ, ನೂರು ಕಷ್ಟಗಳ ಮೆಟ್ಟಿ ನಿಲ್ಲುವ ಶಿಷ್ಟ ಶಕ್ತಿ ನೀನಾಗು ಮಗಳೇ,ಜಗದ ಶಕ್ತಿ ನೀನಾಗು..

ಹತ್ತೂರ ಧ್ವನಿಯಾಗು, ಸುತ್ತಲಿಗೆ ಕಿವಿಯಾಗು
ನಿನ್ನ ಕಾವಲು ನೀನಾಗು,ಮನೆಗೆ ಮಲ್ಲಿಗೆಯ ಸುವಾಸನೆಯಾಗು,
ಮನದ ತಂಪಿಗೆ ಹೊಳೆವ ಇಬ್ಬನಿಯಾಗು,
ಮಾತಾಗು ಮುತ್ತಾಗು, ಬೆಳೆವ ಜ್ಞಾನಿಯಾಗು,
ಹೊಳೆವ ಕಿರಣವಾಗು, ಎಲ್ಲರ ಮನದ ಚೇತೋಹಾರಿಯಾಗು.

ಕಣ್ಣೀರ ಕಡಲಾಗದೇ ಪನ್ನೀರ ಸಿರಿಯಾಗು,
ಕತ್ತಲ ನೆರಳಾಗದೇ ಹೆತ್ತೊಡಲ ಹಾಡಾಗು,
ಒಡೆದ ಕಲ್ಲಾಗದೇ ಕಡೆದ ಶಿಲ್ಪವಾಗು,
ಸತ್ಯವಿಲ್ಲದ ಮಿಥ್ಯವಾಗದೇ ಸತ್ಯವೇ ನೀನಾಗು
ನೀನು ನಿನ್ನಂತಾಗು,ಜಗವ ಬೆಳಗು ಓ ಮಗಳೇ ನೀ ಜಗವ ಬೆಳಗು…


ಮಂಜುಳಾ ಪ್ರಸಾದ್ ದಾವಣಗೆರೆ

34 thoughts on “ಮಹಿಳಾ ದಿನದ ವಿಶೇಷ

  1. ಮಹಿಳಾ ದಿನಾಚರಣೆಯ ವಿಶೇಷ ಉತ್ತಮವಾಗಿದೆ.

Leave a Reply

Back To Top