ಗಝಲ್
ಸುಧಾ ಎನ್. ತೇಲ್ಕರ್
ತನ್ನ ಕನಸುಗಳ ಮೂಟೆ ಕಟ್ಟಿ ತ್ಯಾಗಕೆ ಮಾರಿದಳು ಅವಳು
ನಿನ್ನೆಯ ಕಲ್ಪನೆಗಳ ಗಂಟು ಹಾಕಿ ನೋವು ಹೀರಿದಳು ಅವಳು
ಮಹಿಳೆ ಪದದ ಪದವಿಗೆ ಹೆಮ್ಮೆಯ ಪದಕ ನೀಡಿದ್ದು ಯಾರು
ಮಹತ್ವದ ಸೊಗಸ ಸೃಷ್ಟಿಯ ಅದ್ಭುತವ ಜಗಕೆ ತೋರಿದಳು ಅವಳು
ಮಡಿಲ ಶಶಿಯನು ಬೆಳಗಲು ಬಾನ ಚುಕ್ಕಿ ಕುಲಾವಿ ಹೆಣೆದಳು
ಒಡಲ ತೊಟ್ಟಿಲಲಿ ಹಸುಗೂಸ ತೂಗಿ ಕ್ಷೇಮ ಕೋರಿದಳು ಅವಳು
ಬಿಸಿಯಾಗಿ ಸುಟ್ಟ ರೊಟ್ಟಿಯಲಿ ಚಂದಿರನ ಧರೆಗೆ ಇಳಿಸಿ ಬಿಟ್ಟಳು
ನಿಸ್ವಾರ್ಥ ಜೀವಕೆ ಉದಾಹರಣೆ ಆಗಿ ದೇವನ ಮೀರಿದಳು ಅವಳು
ಬದುಕಲಿ ಕತ್ತಲಿದ್ದರೂ ಮನೆ ಮನಕೆ ಕಂದೀಲಿನ ಬೆಳಕನು ಇತ್ತಳು
ಎದೆಯ ಸುಧೆಯಿತ್ತು ಕಣ್ಣೀರ ಮರೆಮಾಚಿ ನಗುವ ಬೀರಿದಳು ಅವಳು
ಸುಧಾ ಎನ್. ತೇಲ್ಕರ್
ಅರ್ಥಪೂರ್ಣ ಗಜಲ್, ಸೊಗಸಾಗಿ ಮೂಡಿಬಂದಿದೆ.