ಮಹಿಳಾ ದಿನದ ವಿಶೇಷ

ನನ್ನೊಲವೇ,,,

ವಾಣಿ ಭಂಡಾರಿ

ತೊರೆದು ಹೋಗದಿರು ಎನ್ನೊಲವೆ!,,
ನನ್ನ ನೆನಪಿನ ಜೋಳಿಗೆ ತುಂಬ‌
ನಿನ್ನದೆ ಬಣ್ಣ ತುಂಬಿರುವೆ
ರಂಗು ರಂಗು ಚೆಲ್ಲಿ ಸುಖಿಸಿದ್ದೆ ಮನದಲಿ
ಓಕುಳಿ ಆಡಬೇಕೆಂದೆ ಕಾದಿದ್ದೆ ಅಂಗಳದಲಿ
ಚೆಲ್ಲಿ ಬಿಟ್ಟೆಯಲ್ಲ ಬೇಲಿಗೆ
ಚುಚ್ಚಿದ ಮುಳ್ಳು
ಸೋರಿದ ರಕ್ತ ಬಣ್ಣದೊಳಗೆ ಬೆರೆತ ನೋವಿಗಿಲ್ಲ ಮುಲಾಮು
ರಂಗಿನ ಮನಕೆ ಮಸಿ ಬಳಿದೆ
ಬಣ್ಣಕ್ಕೂ ಬಂಗು ಬಡಿಯಿತೀಗ.

ತೊರೆಯದಿರು ನನ್ನೊಲವೆ!
ಒಡ್ಡು ಕಟ್ಟಲಾಗದ ಭಾವ
ಜಡ್ಡು ಹಿಡಿಯಿತು ಹೇಗೆ?
ಮನವನಷ್ಟೆ ಸೋಕಿರಲಿಲ್ಲ ಗಾಳಿ
ಕದ ಜಗುಲಿ ನಿಂತ ನೆಲ,
ಚಾಪೆ ದಿಂಬು ಬಿಸ್ತಾರ
ರಾತ್ರಿ ಚಿಮುಣಿಯ ನಿಶ್ಯಬ್ಧದಲಿ
ಉಂಡ ತಟ್ಟೆಯಲುಳಿದ ಅಗುಳಲೂ
ನನ್ನ ನೆನಪಿನ ಕೋಡಿ ಹರಿದಿತ್ತು ನಿನ್ನೊಳಗೆ.
ಬೆರಗಿನ ಬಯಲಿಗೆ ಕಣ್ಣಾಸರೆ ಆಯಿತೆ ಒಲವೇ,,,

ನಿವಾಳಿಸಿ ಬಿಡುವೆ ದೃಷ್ಟಿಯ
ಉಪ್ಪು ಮೆಣಸು ಲಿಂಬು ಸುಟ್ಟು
ಬೊಟ್ಟನಿಟ್ಟು ಬಿಡುವೆ ಹಣೆಗೆ ಕರಿಯ ಕಳೆದು ದುಗುಡ ಎಸೆದು
ಬಂದು ಬಿಡು ಈಗಲೇ
ಬಾಚಿ ಬಿಡುವೆ ಭಾವಧಾರೆಯನು
ಕಿರು ಬೆರಳ ತುದಿಯಲ್ಲಿ ಚಂದ್ರನ
ಬೆಳದಿಂಗಳ ಇರಿಸಿ
ಲಲ್ಲೆಗರೆದು ಇರುಳ ದೀಪದ ಮಾತಿಗೆ ಜೊತೆಯಾಗಬಹುದಿತ್ತು.
ಪ್ರೇಮದ ಹೋಳಿಗೆ
ಕಾಮ ಉಣಿಸಿ
ಸುಡಬಹುದಿತ್ತು ಜಾತಿಯೆಂಬ ಪ್ರೇತದ ಕಪ್ಪನು.
ತೊರೆಯದಿರು ಎನ್ನೊಲವೆ!.


                ವಾಣಿ ಭಂಡಾರಿ

Leave a Reply

Back To Top