ಶ್ರೀವಲ್ಲಿ ಮಂಜುನಾಥ ಕವಿತೆ ಬಣ್ಣ – ಬದುಕು

ಕಾವ್ಯ ಸಂಗಾತಿ

ಬಣ್ಣ – ಬದುಕು

ಶ್ರೀವಲ್ಲಿ ಮಂಜುನಾಥ

ಕೆಂಪು ಬಣ್ಣದಲಿಹುದು
ಆಸೆ, ಬಲ, ಪ್ರೀತಿಗಳು;
ಜೊತೆಯಲ್ಲಿ ಬೆರೆತಿಹುದು
ಅಪಾಯದಾ ಸೂಚನೆ :

ನೀಲಿ ಯಲಿ ತುಂಬಿಹುದು
ಅನಂತ ಆಗಸದಾ ಶಕ್ತಿ;
ಧೀರ, ಗಂಭೀರವದರಾ
ಜೊತೆಗೆ ಬೆರೆತಿಹುದು !

ಕೇಸರಿ ಯ ಬಣ್ಣದಲಿ
ಕ್ರಿಯಾತ್ಮಕತೆ ಮನೆಮಾಡಿ;
ನಿರೀಕ್ಷೆ, ಸಂತಸದೊಡನೆ
ಎಚ್ಚರಿಕೆಯೂ ಇಹುದು !

ಹಳದಿ ಬಣ್ಣವು ತಾನು
ಉಲ್ಲಾಸೋತ್ಸಾಹವ ನೀಡಿ;
ಜ್ಞಾನದೊಂದಿಗೆ ಬದುಕ
ಉನ್ನತಿಗೆ ಒಯ್ಯುವುದು !

ಲವಲವಿಕೆ, ಜೀವಂತಿಕೆ
ಹಸಿರಿ ನಾ ಉಸಿರಲಿದೆ;
ಪ್ರಕೃತಿ ಮಾತೆಯ ಗುರುತು,
ಸ್ನೇಹದಾ ಕುಹುರ ತೋರಿದೆ!

ಬಿಳಿ ಶಾಂತಿಯ ತವರು,
ಸಹನೆ, ಮಮತೆಯ ತೇರು;
ಸಮಾನತೆಯ ಬಿಂಬಿಸುವ
ಸ್ವಚ್ಛ ಮನದಾ ಸಂಕೇತ !

ಬಗೆಬಗೆಯ ಭಾವಗಳ
ಹೊರಹೊಮ್ಮಿಸುತ್ತಿರುವ;
ಬಣ್ಣಗಳ ಸಂತೆಯೇ
ಈ ನಮ್ಮ ಬದುಕು !


Leave a Reply

Back To Top