ಡಾ. ಪುಷ್ಪಾ ಶಲವಡಿಮಠ-ಬಣ್ಣಗಳ ಸಂಘರ್ಷ

ಕಾವ್ಯ ಸಂಗಾತಿ

ಬಣ್ಣಗಳ ಸಂಘರ್ಷ

ಡಾ. ಪುಷ್ಪಾ ಶಲವಡಿಮಠ

ಈ ಬಣ್ಣಗಳಿಗೇಕೆ ಇಷ್ಟೊಂದು ಬಿಗುಮಾನ?!
ಒಂದಕ್ಕೊಂದು ಕೂಡದಾಗಿವೆ
ಮುನಿಸಿಕೊಂಡಿವೆ
ಮುಖ ಸಿಂಡರಿಸಿಕೊಂಡಿವೆ.

ಕೇಸರಿ, ಹಸಿರು, ಹಳದಿ, ನೀಲಿ
ಬಿಳಿ, ಕೆಂಪು, ಗುಲಾಬಿ ಬಣ್ಣಗಳು
ಮಳೆಬಿಲ್ಲಿನಲ್ಲಿ ಕಾಣುತ್ತಿಲ್ಲ
ಕಳೆದುಹೋಗಿವೆ
ಎಲ್ಲೋ ಪ್ರತಿಷ್ಠೆಯ ರಾಜ್ಯ ಕಟ್ಟಿಕೊಂಡಿವೆ.

ಕೇಸರಿಯು ಗುಡಿ ತೋರಣಗಳಲಿ ಮೆರೆಯುತಿದೆ
ಹಸಿರು ನಾನೇನು ಕಮ್ಮಿ ಎಂದು ಹಾರಾಡುತಿದೆ
ವೀರ, ವೈರಾಗ್ಯಗಳು ಇತಿಹಾಸದ ಪುಟದಲ್ಲಡಗಿವೆ
ಹಸಿರ ಸಮೃದ್ಧಿಯಂತೂ ಮತೀಯ ಕೀಟ
ಭಾದೆಯಿಂದ ಸೊರಗಿದೆ.

ಇತ್ತೀಚೆಗೆ ಈ ಮಳೆಬಿಲ್ಲು
ಬಣ್ಣ ಕಳೆದುಕೊಂಡು ಬಿಮ್ಮನೆ ಕುಳಿತಿದೆ
ಆಗೊಮ್ಮೆ ಇಗೊಮ್ಮೆ ಮುಗಿಲಿನಲ್ಲಿ
ಇಣುಕುತ್ತಿದ್ದ ಇದಕೂ ಈಗ ಗ್ರಹಣ ಹಿಡಿದಿದೆ.

ದೇಶ ದೇಶಗಳ ಸಂಘರ್ಷ ನೋಡಿ ಆಯಿತು
ಗಡಿಗಡಿಗಳ ಸಂಘರ್ಷ ನೋಡಿ ಆಯಿತು
ಇದೀಗ ಈ ಬಣ್ಣಗಳ ಸಂಘರ್ಷ

ಶಾಂತಿ ಸಹನೆ ಸೌಹಾರ್ದತೆಯ
ಬೀಜ ಬಿತ್ತಿದ ಬಿಳಿಯ ಬಣ್ಣಕ್ಕೂ
ಮಿತಿಮೀರಿದ ಗರ್ವ
ಕರಿಯ ಬಣ್ಣವ ಕಡೆಗಣ್ಣಿನಿಂದ ನೋಡುತಿದೆ
ಮುಗಿಯಬೇಕೆಂದರೂ ಮುಗಿಯುತ್ತಿಲ್ಲ
ಈ ಸಂಘರ್ಷ.

ಹೇಳುವರಾರು ಇವುಗಳಿಗೆ?
ಕಲಿತ ವಿದ್ಯೆ ಸಾಲದಾಗಿದೆ,
ಸ್ವಾರ್ಥವೇ ಮುಂದಾಗಿದೆ
ಶ್ರೇಷ್ಠತೆಯ ಮುಸುಕಿನಲ್ಲಿ
ಗುದುಮುರುಗಿ ಹಾಕುತ್ತಿರುವ
ಬಣ್ಣಗಳಿಗೆ ಗೊತ್ತಿಲ್ಲ
ಮಳೆಬಿಲ್ಲು ಮುರಿದರೆ ಅವುಗಳಿಗಿಲ್ಲ ಅಸ್ತಿತ್ವ.

ಈಗಂತೂ ಈ ಬಣ್ಣಗಳ ಕಂಡರೆ ಭಯವಾಗುತಿದೆ
ಅವಿತುಕೊಳ್ಳಬೇಕೇನಿಸುತ್ತಿದೆ
ಎದೆ ನಡುಗುತಿದೆ
ಹೇಗೆ, ಯಾವಾಗ, ಎತ್ತ ಘರ್ಷಣೆ ಆಗುತ್ತದೆಯೆಂದು
ಎದೆಯ ತುಂಬ ಅದೇ ಆತಂಕ ಮನೆ ಮಾಡಿದೆ.

ಬಣ್ಣಗಳಿರದೆ ಬದುಕಿಲ್ಲ
ಬಣ್ಣಗಳೇ ಕೆಂಡಗಳಾದರೇ?!
ಬದುಕಿದು ಯಜ್ಞಕುಂಡ
ಇಲ್ಲಿ ಜೀವ ಆತ್ಮಗಳ ಬಲಿದಾನ.

ಬನ್ನಿ ಬಣ್ಣಗಳೇ ಮತ್ತೇ ಒಂದಾಗಿ
ಮಳೆಬಿಲ್ಲಿನೊಳಗೆ ಮನೆ ಮಾಡಿ
ಇರುವಷ್ಟು ಹೊತ್ತು
ಮುಗಿಲ ಮಾರಿಗೆ ಆರತಿ ಎತ್ತಿ.

———————

Leave a Reply

Back To Top