ಕಾವ್ಯ ಸಂಗಾತಿ
ಬೇಗ
ಇಮಾಮ್ ಮದ್ಗಾರ
ಅಗೋಚರ
ತಂತಿಯೊಂದು
ಒಲವ ವೀಣೆ ಮೀಟಿದಾಗ
ಮೋಡ ಮಾತಾಡಿ
ದಂತಾಯಿತು
ನೀಲಿಜೇನು ನಿರ್ಭಯವಾಗಿ
ಮಧುವ ಹೆಕ್ಕುತ್ತಲೇ
ನೀಲಿ ಹಕ್ಕಿಯ ರೆಕ್ಕೆಯೊಡನೆ
ಕುಶಲೋಪಚಾರ ನಡೆಸಿತ್ತು
ದಟ್ಟ ಮುಗಿಲಿಲ್ಲ
ತೆರೆದ ಬಯಲಿಲ್ಲ
ನನ್ನೆದೆಯ ಆರಮೆಗೆ
ಪ್ರೀತಿ ಹೇಗೆ ಬಂತು
ಹಸಿದ ನೆಲ ಸುರಿವ
ಮಳೆಗಾಗಿಯೇ ಕಾಯುತ್ತದೆ
ಎದೆಬಡಿತದ ಗಡಿಯಾರ
ಲೆಕ್ಕ ತಪ್ಪುವದಿಲ್ಲ
ಒಲವಿನ ಒಪ್ಪಂದದ
ಅವಸರವೇಕೆ ?
ಸೂರ್ಯ ಸಾಯಲಿ ತಡಿ
ಕತ್ತಲಾದರೂ ಹುಟ್ಟಲಿ !!
ಅವಿಚಿಕೊಂಡಾವರಿಸುವ
ಆತುರ ವೇಕೆ ?
ನಿನ್ನ ಪ್ರೀತಿ ಮಳೆಯಾಗಿ
ಸುರಿಯಲಿ ಸಾಕು
ನನ್ನ ಮನ ನೆಲವಾಗುತ್ತದೆ
ನಿನ್ನ ಒರಟಾದ ಕೈಗಳಲಿ
ಭರವಸೆಯ ಸ್ಪರ್ಶವಿದೆ
ಸುರಿದು ಬಿಡಲಿ
ಮಳೆ ಬೇ…ಗ