ಕಾವ್ಯ ಸಂಗಾತಿ
ಗಝಲ್
ಶಂಕರಾನಂದ ಹೆಬ್ಬಾಳ
ನೀ ಕೈಬಿಟ್ಟರೆ ಕೊನೆಯಲ್ಲಿ ನನಗೆ ಮಸಣದ
ಹಾದಿಯೆ ಗತಿ
ಇಹದಲ್ಲೂ ಪರದಲ್ಲೂ ನೆನಪಿಟ್ಟುಕೋ ಸಖಿ
ನಾನೆ ನಿನ್ನ ಪತಿ
ಹಚ್ಚಿಕೊಂಡ ಪ್ರೀತಿಯ ನಲ್ಲನೊಂದಿಗೆ
ಚೆಲ್ಲಾಟವಾಡಿದೇಕೆ
ಬಾಳಿಗೆ ಮಾರ್ಗ ತೋರಿಸಿ ತೊರೆದು ಹೊರಟ
ಪ್ರೇಮ ಸತಿ
ಹುಚ್ಚನಂತೆ ತಿರುಗಿದಕ್ಕೆ ದುಃಖ ಕೊಡಲು
ಮನಸು ಬಂತೇ
ಹೃದಯ ಸುಟ್ಟುಬಂದ ಮರುದಿನವೆ ಮಾಡು
ನನ್ನಯ ತಿಥಿ
ಬಿಡುಗಡೆ ಬಯಸದೆ ಆಸ್ಥೆಯಿಲ್ಲದ
ಜೊತೆಗಾತಿಯ ನಂಬಿದೆ
ಪ್ರಣಯ ಸುಖಕೆ ತಲ್ಪದಲಿ ಕಾದಿರುವ
ಕಲ್ಪನೆಯ ರತಿ
ಸಂಕೋಲೆ ತೊಡಿಸಿ ಬಂಧಿಸಿದೆಯಲ್ಲ
ಮೌನ ಗೌರಿಯಂತೆ
ಜೀವಕ್ಕೆ ಮರುಜೀವ ಕೊಟ್ಟು ಕಾಣಿಸುವ
ರಾಗರತಿಯ ಶೃತಿ
ಕಣ್ಣಿನಲ್ಲಿ ಕೊಲ್ಲುತ ಕಣ್ಣಂಚಲಿ ಕರೆಯುತಿಹ
ನೀಲವೇಣಿ
ಭವದ ಕಡಲಿನ ನೌಕೆಯಲ್ಲಿ ತೇಲಿಸುವ
ಮೋಹದ ಮತಿ
ಗೋರಿ ಮೇಲೆ ಹೂವನಿಟ್ಟು ಅಳಲು
ತೋಡಿಕೊ ಅಭಿನವ
ಮುಗಿಯದ ಅಧ್ಯಾಯವೇ ಎದೆಯಲ್ಲಿ
ನೀನೊಂದು ಕೃತಿ