ಕಾವ್ಯ ಸಂಗಾತಿ
ಗಜಲ್
ಹಮೀದಾ ಬೇಗಂ ದೇಸಾಯಿ
ಫಲ್ಗುಣದ ರಂಗಿನೋಕುಳಿ ಬೃಂದಾವನದಿ ಉಲ್ಲಾಸದಿ ನಲಿದಿದೆ ನೋಡು ಕೃಷ್ಣಾ
ರಂಗಾದ ಮೊಗಗಳಲಿ ಹರುಷದ ನಗೆಯು ಬಿರಿದಿದೆನೋಡು ಕೃಷ್ಣಾ
ಬಿಡು ದಮ್ಮಯ್ಯ ನನ್ನ ಸೆರಗು ಎಳೆಯದಿರು ಬೇಡಿಕೊಳುವೆ ಕೈಮುಗಿದು
ಕಾಡದಿರು ಮಾಧವಾ ಗೋಪಿಕೆಯರ ಗುಂಪು ನೆರೆದಿದೆ ನೋಡು ಕೃಷ್ಣಾ
ತುಂಟ ಮಂದಹಾಸ ಬೀರಿ ಸೆಳೆಯುತ ಮನವು ಕದಿಯುವೆ ನೀನು
ಹೂಡದಿರು ಮೆಲ್ಲಗೆ ರಂಗಿನಾಟದ ಬೇಟ ಲಜ್ಜೆ ಸುರಿದಿದೆ ನೋಡು ಕೃಷ್ಣಾ
ಬಾನಿನ ಚಂದಿರ ಮೋಡದಲಿ ನಕ್ಕು ಮರೆಯಾಗಿ ಹೋದ ಸಖಾ
ಬೆಳದಿಂಗಳ ಈಂಟಿ ತಾರೆ ನಾಚಿ ಸರಿದಿದೆ ನೋಡು ಕೃಷ್ಣಾ
ನಿನ್ನ ಪ್ರೇಮದ ಅಮಲಿನಲಿ ರಂಗೇರಿ ಹೋಗಿಹಳು ರಾಧೆ ಇಂದು
ಬಣ್ಣ ಹಚ್ಚಿದ ಕೆನ್ನೆ ಹೊಳಪೇರಿ ಮೆರೆದಿದೆ ನೋಡು ಕೃಷ್ಣಾ