ಅರ್ಚನಾ ಯಳಬೇರು ಕವಿತೆ

ಕಾವ್ಯ ಸಂಗಾತಿ

ಭಾವನೆಗಳ ಚುಕ್ಕಿ

ಅರ್ಚನಾ ಯಳಬೇರು

ಒಲವ ಕಡಲಲಿ ಪ್ರೀತಿ
ಮುತ್ತುಗಳ ಅರಸುತ್ತಿದ್ದೆ ನಾನು,
ಭೋರ್ಗರೆವ ಅಲೆಗಳು ಕೂಡ
ನಿನಗಾಗಿ ಮುತ್ತಿನಮಾಲೆ
ತೊಡಿಸಲು ಸ್ವಾತಿ ಮಳೆ ಹನಿಗಳಿಗೆ
ಕಾತರಿಸಿ ಕಾಯುತ್ತಿದ್ದವು

ನನ್ನೆದೆಯ ಅವನಿಯಲಿ
ಪ್ರೇಮ ಪಾರಿಜಾತವು
ಅರಳಿ ನಗುತ್ತಿತ್ತು ನಿನಗಾಗಿ,
ಸೂಸುವ ಘಮಲುಗಳೆಲ್ಲ
ನಿನ್ನಿರವನೆ ಅರಸಿ ಅರಸಿ
ತಂಗಾಳಿಯಾಗಿ ಬೀಸುತ್ತಿತ್ತು

ಚುಕ್ಕಿಗಳ ನಡುವೆ ಇಣುಕುವ
ಶಶಿಯು ನಮ್ಮಿಬ್ಬರ ಪ್ರೇಮ
ಸಲ್ಲಾಪಕೆ ಸಾಕ್ಷಿ ಹೇಳಲು
ನಶೆಯೇರಿದ ನಿಶೆಯನಟ್ಟಿ
ಹಾಲ್ಬೆಳದಿಂಗಳ ಬುವಿಯಲ್ಲೆಲ್ಲಾ
ಚೆಲ್ಲಿ ಕಾದು ಕುಳಿತಿಹನು

ಚಿತ್ತದ ಅಂಗಳದಲ್ಲೆಲ್ಲಾ
ಚಳುವಳಿ ನಡೆಸುವ ಪ್ರೀತಿ
ವಿಹಗಗಳ ಕರೆಕರೆದು
ಒಲವ ಭಿಕ್ಷೆಯ ನೀಡುತ ನಿಂದ
ಆ ಅಮೂರ್ತ ರೂಪವೇ
ನೀನು… ಅದು ಬರೀ ನೀನಲ್ಲ
ನನ್ನೊಲವಿನ ಪ್ರೇಮ ಶಿಖರ…


Leave a Reply

Back To Top