ಈಶ್ವರ ಜಿ ಸಂಪಗಾವಿ/ಗಜಲ್

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ.

ಗಜಲ್

ಜನನ ಮರಣಗಳೆಂಬ ಎರಡು ತುದಿಗಳ ಮೇಲಿದೆ ಬದುಕೆಂಬ ಕೋಲು
ನಡುವೆ ಕಂದಕದಿ ಜೋತಾಡಿ ನಂಬಿದ ಮನುಷ್ಯನ ಕನಸೆಂಬ ಸೋಲು

ಕೆಳಗೆ ಬಿದ್ದರೆ ಶವವೂ ಪತ್ತೆಯಾಗದು ಎಂಬ ವಾಸ್ತವಕೆ ಹೆದರಿದಂತಿದೆ
ಮೈಮರೆತಂತೆ ಮಾತ್ರ ಬಂಡಿಯಲಿ ನೇತಾಡಿದೆ ಜೀವಚ್ಛವದಂತೆ ಕಾಲು

ಅತ್ತ ದರಿ ಇತ್ತ ಪುಲಿಯಂತೆ ಸಾಯಲಾಗದೆ ಕೈಯಲಿ ಜೀವ ಹಿಡಿದವರು
ಸುತ್ತಲು ಕಂಡಿದೆ ಕಣ್ಣಾಡಿಸಲು ಹಚ್ಚಹಸುರಿನ ಆಶಾಸೌಧದಂತೆ ಡೌಲು

ಒಂದಿಷ್ಟು ಆಯತಪ್ಪಿದರೆ ಪ್ರಪಾತವೇ ಗತಿಯಾಗುವುದು ಶತಸಿದ್ಧವೇ
ಅನಿವಾರ್ಯದಲಿ ಜೀವವು ಕುಂಟುತಿದೆ ಕಾಲಿಗೆ ಕಟ್ಟಿರುವಂತೆ ನಾಲು

ನಿದ್ದೆ ಬಂದರೂ ಕಣ್ಣಮುಚ್ಚದೆ ಉಸಿರಾಟದಲಿ ಬಿದ್ದರೂ ಎಚ್ಚರಬೇಕು
ಹದ್ದುಮೀರಿ ಈಶನ ಧ್ಯಾನದಲಿ ಮುಖಬಾಗುತ ಹೊಡೆದಂತೆ ಜೋಲು


One thought on “ಈಶ್ವರ ಜಿ ಸಂಪಗಾವಿ/ಗಜಲ್

Leave a Reply

Back To Top