ಎ. ಹೇಮಗಂಗಾರವರ ಗಜಲ್

ಕಾವ್ಯ ಸಂಗಾತಿ

ಎ. ಹೇಮಗಂಗಾ

ಗಜಲ್

ನನ್ನ ಪೂರ್ಣವಾಗಿ ಮರೆಯಬೇಕೆನಿಸಿದರೆ ಮರೆತುಬಿಡು
ನನ್ನ ಶಾಶ್ವತವಾಗಿ ತೊರೆಯಬೇಕೆನಿಸಿದರೆ ತೊರೆದುಬಿಡು

ನೀ ತೋರಿದ ಪ್ರೀತಿ ತೋರಿಕೆಗೆ ಎಂಬುದು ತಿಳಿಯಲೇ ಇಲ್ಲ
ಕೊಟ್ಟ ವಚನವ ಮುರಿಯಬೇಕೆನಿಸಿದರೆ ಮುರಿದುಬಿಡು

ಒಡನಾಟದ ಸುಖ ಕೊನೆತನಕ ಎಂಬುದು ಭ್ರಮೆಯಾಯಿತೇ
ದುಃಖದ ಕಡಲಲ್ಲಿ ಮೀಯಿಸಬೇಕೆನಿಸಿದರೆ ಮೀಯಿಸಿಬಿಡು

ಮಧು ಹೀರಿದ ದುಂಬಿ ಬೇರೊಂದು ಹೂವಿಗೆ ಜೊತೆಯಾಗಿದೆ
ವಂಚನೆಯ ಕತ್ತಿಯಲಿ ಇರಿಯಬೇಕೆನಿಸಿದರೆ ಇರಿದುಬಿಡು

ಅಂತರಂಗದಿ ಅವಿತ ವಿಷ ಹೊರನೋಟಕ್ಕೆ ಕಾಣಲಾಗದು
ತಿರಸ್ಕರಿಸಿ ಬಲುದೂರ ಹೋಗಬೇಕೆನಿಸಿದರೆ ಹೋಗಿಬಿಡು

ನೆನಪುಗಳ ಮುಳ್ಳಿನ ಮಂಚದಲ್ಲಿ ಇನ್ನೆಷ್ಟು ಕಾಲ ನರಳಲಿ
ಈ ಕ್ಷಣ ಅಂತಿಮ ವಿದಾಯ ಹೇಳಬೇಕೆನಿಸಿದರೆ ಹೇಳಿಬಿಡು

ಭಗ್ನಪ್ರೇಮವೇ ಬಾಳ ಕೊರಳಿಗೆ ಉರುಳಾಯಿತಲ್ಲ ಹೇಮ
ಗುಂಡಿಗೆಗೆ ಗುಂಡಿಟ್ಟು ಕೊಲ್ಲಬೇಕೆನಿಸಿದರೆ ಕೊಂದುಬಿಡು


Leave a Reply

Back To Top