ಭಾರತಿ ಅಶೋಕ್ ಹೊಸ ಕವಿತೆ/ಹಚ್ಚಡದವ್ವ

ಕಾವ್ಯ ಸಂಗಾತಿ

ಹಚ್ಚಡದವ್ವ

ಭಾರತಿ ಅಶೋಕ್

ಓ ಹಚ್ಚಡದವ್ವ ನೀನು
ಅವ್ವನಿಗೂ ಅವ್ವ!

ನನ್ನ ಹಚ್ಚಡವ್ವ
ಹಾಸಿಗೆಯಲಿ ಮೈ ತಂಪು ತಬ್ಬಿ ಹಿತವಾಗಿ ಕಾವಿನಲ್ಲಿ ಸಂತೈಸುವಳು!

ಹಗಲು ಬೆಂದ ಅಪಮಾನಕೆ, ಜನರ ಅನುಮಾನಕೆ ಇರುಳಿನಗೂಡ ಸುರಿವ ಕಣ್ಣೀರು ಒರೆಸುವ ಅವ್ವ ನೀನು ನನ್ನ ಪ್ರೀತಿಯ ಹಚ್ಚಡವ್ವ!

ಗಂಡಿನ ಕ್ರೌರ್ಯಕೆ ಬೀದಿ ನಾಯಿಗಳ ಆಕ್ರಮಣಕೆ ತುತ್ತಾದವಳ ದೇಹ ಸಿರಿಗೆ ಹರಿದು ಚೆಲ್ಲಿದ ರಕ್ತದೋಕುಳಿಗೆ ಕಾರಿರುಳಿನಲಿ ಜೊತೆಯಾದ ಬೆಳಕಿನ ಅರಿವೆ…

ಕಾಸು ಕೊಟ್ಟನೋ ಬಲಾತ್ಕರಿಸಿದನೋ ಗಂಡಿನ ಕಬಂಧದಲಿ ನಲುಗಿ ದೇಹ ಕೆಟ್ಟರೂ ಮನದ ತಿಳಿಗೊಳದಲಿ ಅರಿವಿಲ್ಲದೇ ಹರಿವ ಬೆವರು ಹಿಂಗಿಸಲು ಮೈಯಪ್ಪಿದ ಅಮೃತಮತಿ ನೀನವ್ವ

ಅಂದು ದಾನವ್ವಗೂ ವರವಾದವಳು ಇಂದು ದುಃಸ್ವಪ್ನವಾಗಿ ಕಾಡುವ ಅವಿನೀತರ ಕಣ್ಣಿಂದ ಕಾಯುವವಳು‌ ನೀ ನನ್ನವ್ವ ಹಚ್ಚಡದವ್ವ!

ದೇಹಕ್ಕೆ ಹಿತವಾಗಿ ಮನಕೆ ಅವ್ವನ ಮಡಿಲಾಗಿ ನೀ ಸಂತೈಸದ ದಿನವಿಲ್ಲ…
ನಿನ್ನಾಲಿಂಗನದಲಿ ನೋವೆಲ್ಲಾ ಬಯಲು ಬೆಳಕು.
ನಿನ್ನಿರುವಿಕೆಯೇ ಕಾರಿರುಳಿಗೂ ಲಾಲಿ ಹಾಡು ನಿನ್ನಪ್ಪುಗೆಯಲಿ ನಖಶಿಖವೂ ಹಾಲುಜೇನಂತೆ
ಆಲಾಪವೇ ಸ್ವರ್ಗಸುಖದ
ಲಾಲಿಹಾಡು ಅವ್ವಾ ಹಚ್ಚಡವ್ವ.


ಭಾರತಿ ಅಶೋಕ್.

Leave a Reply

Back To Top