ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಬದುಕಿನ ಬಂಡಿಯ ಜೊತೆಗೆ

ಸಾಮಾಜಿಕ ಮೌಲ್ಯಗಳ ಬಿತ್ತುವ

ಕಾಯಕ ಜೀವಿಗಳು..

ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ಈ ನಂಬರಿಗೆ ಸಂಪರ್ಕಿಸಿ..”

ಮುತ್ತು ಕೊಡುವವಳು ಬಂದಾಗ : ತುತ್ತು ಕೊಟ್ಟವಳ ಮರೆಯಬ್ಯಾಡ..”

ಇಂತಹ ಅಮೂಲ್ಯವಾದ ಮಾನವೀಯತೆಯ ಮೌಲ್ಯವನ್ನು ಸಾರುವ ನುಡಿ ಮುತ್ತುಗಳನ್ನು ತಮ್ಮ ತಮ್ಮ ಆಟೋಗಳಿಗೆ ಬರೆಯಿಸಿಕೊಂಡು ಚಾಲನೆ ಮಾಡುವುದಲ್ಲದೆ, ಮಾನವೀಯತೆಯ ಕಾರ್ಯಗಳಿಗೆ ಸದಾ ಉತ್ತೇಜನ ನೀಡುವ ಅಟೋ ನೆಡೆಸುವ ಅನೇಕ ಸಹೋದರರು ಇಂದು ನಮಗೆಲ್ಲ ಮಾದರಿ..!!

ಹೌದು…

ಕೋಟಿ ಕೋಟಿ ಗಳಿಸಿ ಶ್ರೀಮಂತರಾದ ವರ್ಗವು ನಿಸ್ವಾರ್ಥ ಸಮಾಜ ಸೇವೆ ಮಾಡಲು ಹಿಂದೆ ಮುಂದೆ ನೋಡುವ ಜನರ ನಡುವೆ ಇಂತಹವರ ಸೇವೆ ಸಾರ್ಥಕ ಎನಿಸುತ್ತದೆ.

ತಡ ರಾತ್ರಿ ಪಯಣ ಬೆಳಸಿ, ಊರು ತಲುಪಿದವರನ್ನು ಮನೆ ಮುಟ್ಟಿಸಲು, ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು, ವೃದ್ಧರು, ಮಕ್ಕಳು, ಮಹಿಳೆಯರು, ಅಬಲರು ಅಷ್ಟೇ ಯಾಕೇ ಸ್ಥಳೀಯ ಸಾರಿಗೆಯ ಅಗತ್ಯವಿರುವ ಎಲ್ಲರಿಗೂ ಅಟೋಗಳ ಅವಶ್ಯಕತೆಯನ್ನು ಪೂರೈಸುವ ಇವರು ಬದುಕಿನ ಒಲವಿನಾಚೆಯೂ ಮನುಷ್ಯತ್ವ ಸದಾ ಜಾಗೃತವಾಗಿರುವುದು. ಇಂತಹವರಿಗೆ ಇಂದಿನ ನಾಗರೀಕ ಸಮಾಜ ಅವರನ್ನು ಗೌರವದಿಂದ ಕಾಣಬೇಕಾಗಿದೆ.

ತಮ್ಮ ನೆಚ್ಚಿನ ಸಿನಿಮಾ ನಟರ ಹೆಸರಿನಲ್ಲಿಯೋ, ಸಮಾಜಮುಖಿ ಮುಖಂಡರ ಹೆಸರಿನಲ್ಲಿಯೋ.. ಸಮಾಜದ ಕಲ್ಯಾಣ ಬಯಸುವ ಮುತ್ಸದ್ಧಿ ನಾಯಕರ ಹೆಸರಿನಲ್ಲಿಯೋ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಕ್ಯಾಂಪಗಳು, ಕನ್ನಡ ರಾಜ್ಯೋತ್ಸವ ಆಚರಣೆ, ನಾಡು – ನುಡಿಯ ಸೇವೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ನಾಡಿಗೆ ಕಾಣಿಕೆ ಸಲ್ಲಿಸುವಲ್ಲಿ ಆಟೋ ನೆಡಸುವ ಸಹೋದರರು ಹಿಂದೆ ಬಿದ್ದಿಲ್ಲ.

ಹೊಟ್ಟೆಯ ಕಿಚ್ಚಿಗಾಗಿ ಬಾಳಿನ ಬಂಡಿಯನ್ನು ಎಳೆಯಲು ಸ್ವಯಂ ಉದ್ಯೋಗದಲ್ಲಿ ಮುಂದುವರೆಯಲು ಕೆಲವರು ಆಟೋ ಚಾಲನ ಕಾಯಕಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರೂ ತಮ್ಮ ಸಮಾಜಮುಖಿ ಕಾರ್ಯಗಳನ್ನು ಮರೆಯದೆ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.

ಮಡದಿ – ಮಕ್ಕಳು, ಗಂಡ -ಹೆಂಡತಿ, ತಂದೆ – ತಾಯಿಯರ ಆರೈಕೆ ಎಂದುಕೊಂಡು ಸಂಸಾರದಲ್ಲಿ ಮುಳುಗಿ ಹೋಗಿರುವ ನಮ್ಮಂತಹವರಿಗೆ ಇವರು ಪ್ರೇರಣಾತ್ಮಕವಾಗಿ ಉದಾಹರಣೆಯಾಗಬಲ್ಲರು. ಯಾರಿಗೂ ಕೈ ಚಾಚದೆ ಮಾನವೀಯತೆಯ ಕಳಕಳಿಯನ್ನು ತಮ್ಮ ಹೃದಯದ ಒಲವಿನೊಳಗೆ ಕಾಪಿಡುತ್ತಲ್ಲೇ ಬದುಕಿನ ಬಂಡಿಯ ಜೊತೆಗೆ ಮನುಷ್ಯ ಪ್ರೀತಿಯನ್ನು ಹಂಚಬಲ್ಲರು..

ಆದಾಗ್ಯೂ…!!

ಎಲ್ಲೋ ಒಂದೆರಡು ಪ್ರಕರಣಗಳು ಮನುಷ್ಯ ವಿರೋಧಿಯನ್ನು ಪ್ರತಿಬಿಂಬಿಸಿದರೂ ಅದು ಕೇವಲ ವ್ಯಕ್ತಿಗತ ನೆಲೆಯಲ್ಲಿ ಆದ ತಪ್ಪುಗಳು ಜರುಗಿರುವುದು ಕಂಡು ಬಂದಿರುತ್ತವೆ.

ಸರ್ಕಾರದ ಕಾನೂನಿನ ಪ್ರಕಾರವೇ ಮೀಟರ್ ಅಳತೆಯಲ್ಲೋ…, ಕಿ ಲೋ ಮೀಟರ್ ಗೆ ಇಂತಿಷ್ಟು ಮೊತ್ತದ ಹಣವನ್ನು ಪಡೆದು, ಸೇವೆ ಮಾಡುವುದು ಸರ್ವೆ ಸಾಮಾನ್ಯ.

ಸಾಮಾನ್ಯವಾಗಿ ಅಟೋಗಳನ್ನು ನೆಚ್ಚಿಕೊಂಡವರು ಬಹುತೇಕ ಮಧ್ಯಮ ವರ್ಗದ ಜನರು ಹಾಗೂ ಜನಸಾಮಾನ್ಯರು.. ಅಂತಹವರ ನೋವುಗಳನ್ನು ಕಂಡವರು ಅಟೋ ಚಾಲಕರು. ಹಾಗಾಗಿ ಯಾವತ್ತೂ ಅತಿಯಾದ ಹಣವನ್ನು ಕೇಳದೆ ಸೇವೆಗೆ ತಕ್ಕಂತೆ ಮೌಲ್ಯಯುತವಾಗಿ ಪಾವತಿಸಿಕೊಳ್ಳುವವರು ಇರುವುದು ವಾಡಿಕೆ.

ಶ್ರೀಮಂತ ವ್ಯಕ್ತಿಗಳ ಕಾರುಗಳ ಅಹಮಿಕೆಯ ನಡುವೆ ಸ್ವಾಭಿಮಾನದ ಆಟೋಗಳು ನಮಗೆ ಮಾದರಿಗಳು..!!

ಹಗಲು ರಾತ್ರಿಯೂ ಸರದಿ ಪ್ರಕಾರವಾಗಿ ಅಟೋಗಳು ಬಾಡಿಗೆಗೆ ಬರುವುದು ಕಂಡಾಗ ನನಗೆ ನಿಜವಾದ ಸಮಾಜವಾದವು ನೆನಪಾಗುತ್ತದೆ.
“ಇರುವುದರಲ್ಲಿಯೇ ನಾವೆಲ್ಲರೂ ಹಂಚಿಕೊಂಡು ಉಣ್ಣೋಣ..”ಎನ್ನುವ ಅವರ ಉದ್ದಾತವಾದ ಆಲೋಚನೆಯು ನಮ್ಮನ್ನು ಕಣ್ಣು ತೆರಸುತ್ತದೆ. ಮನುಷ್ಯ ಪ್ರೀತಿಯ ಸಂಬಂಧಗಳು ಸಡಿಲವಾಗಿರುವ ಈ ಕಾಲಘಟ್ಟದಲ್ಲಿ ಇಂತಹ ನಿದರ್ಶನಗಳು ನಮಗೆ ಹೊಸ ಪಾಠವನ್ನು ಹೇಳಿಕೊಡುತ್ತವೆ.
ಸಹೋದರ ಸಹೋದರಿಯರನ್ನು, ತಂದೆ ತಾಯಿಯರನ್ನು, ಬಂಧುಗಳನ್ನು ಸರಿಯಾಗಿ ಮಾತನಾಡಿಸದ ಜನರು ಇವತ್ತು ಆಟೋ ಚಾಲಕರ ಒಲವು ನಮಗೆ ಒಂದು ಪಾಠವಾಗಬಲ್ಲದು.

ಸಮಾಜದ ಪ್ರತಿಯೊಂದು ಅಭಿವೃದ್ಧಿಯ ಪಥದಲ್ಲಿ ಇವರ ಒಲವಿನ ಪಾತ್ರ ಮಹತ್ವವಾಗಿದೆ. ಇವರ ಬಾಳಿನ ಒಲವಧಾರೆಗೆ ನಮದೊಂದು ನೆನಪಿನ ಕೃತಜ್ಞತೆ ಸಲ್ಲಿಸೋಣ..ಆಟೋ ಚಾಲಕ ಸಹೋದರರಿಗೆ ಒಳಿತಾಗಲಿ…


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

Leave a Reply

Back To Top