ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಬದುಕಲ್ಲಿ ಮಾನಸಿಕ ಸದೃಢತೆ ಬೇಕಿದೆ

“ಯಾಕೆ ಹೀಗೆ?” ಎಂಬ ಪ್ರಶ್ನೆ ನನ್ನನ್ನು ಹಲವಾರು ಭಾರಿ ಕಾಡುತ್ತದೆ. ಇದಕ್ಕೆ ಉತ್ತರ ಸಿಗದೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ. ಹೌದು, ದಿನನಿತ್ಯ ವಾರ್ತಾ ಪತ್ರಿಕೆಗಳ ಪುಟ ತಿರುವಿ ಹಾಕಿದರೆ ಒಂದೆರಡು ಪುಟಗಳನ್ನು ಸ್ಥಳೀಯ ಸುದ್ದಿಗಳಿಗೆ ಮೀಸಲಾಗಿ ಇರಿಸುತ್ತಾರೆ. ಅದರ ಸುತ್ತ ಕಣ್ಣಾಡಿಸುವಾಗ “ಆತ್ಮಹತ್ಯೆ “ಗಳ ದೊಡ್ಡ ಪಟ್ಟಿ ಒಂದು ಕಡೆಗೆ ಇರುತ್ತದೆ. ಇದು ಸಾಮಾನ್ಯ ವಾರ್ತೆ ಅಂತ ಓದಿ ಮರೆತು ಪೇಪರ್ ಆಚೆ ಬಿಸಾಕಿ ಬಿಡಬಹುದು ಆದರೆ ಆರೋಗ್ಯವಂತ ಸಮಾಜದ ಬಗ್ಗೆ ಯೋಚಿಸುವಾಗ ಇದರ ಬಗ್ಗೆ ತುಂಬಾ ಮನನ ಮಾಡಿ, ಇದಕ್ಕೆ ಏನು ಪರಿಹಾರ ಎಂಬ ಹುಳ ನಮ್ಮ ತಲೆಯೊಳಗೆ ಹರಿದಾಡುತ್ತದೆ.
ಒಂದೆರಡು ತಿಂಗಳ ಅಂತರದಲ್ಲಿ ಮೂರು ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕರು, ಮತ್ತು ಇತರರು ಆತ್ಮಹತ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವರದಿಯಾದ ಸುದ್ದಿ. ವಿದ್ಯಾರ್ಥಿಗಳ ಆತ್ಮಹತ್ಯೆ ಅನುಭವ ಇರದ ಬಾಲಿಶ ವೃತ್ತಿ. ಇದಕ್ಕೆ ಕಾರಣ ಹಿರಿಯರು ಮತ್ತು ಸಮಾಜ. ಹೇಗೆಂದರೆ ಮಕ್ಕಳಿಗೆ ಮೊಬೈಲ್ ಕೊಡಬೇಡಿ ಅಂದರೂ ತೆಗೆದು ಕೊಡುವವರು ಅವರ ಪೋಷಕರು. ಅದಕ್ಕೆ ಪ್ರತಿ ತಿಂಗಳು ಹಣ ಹಾಕಿ ಕೊಡುವವರೂ ಅವರೇ. ಅಲ್ಲಿ ಮಕ್ಕಳಿಗೆ ಬೇಕಾದ್ದು , ಬೇಡದ್ದು ಎಲ್ಲವನ್ನೂ ನೋಡಲು ಅವಕಾಶ ಮಾಡಿ ಕೊಟ್ಟದ್ದು ಸರಕಾರ, ಅದನ್ನು ಆ ಮೊಬೈಲ್ ನ ಒಳಗೆ ತುಂಬಿದ್ದು ಹಣಕ್ಕಾಗಿ ಏನು ಮಾಡಲೂ ತಯಾರಿ ಇರುವ ನಮ್ಮ ಪ್ರಜ್ಞಾವಂತ, ವಿದ್ಯಾವಂತ, ಅಕ್ಷರಸ್ಥ ಜನ!

ವಸ್ತುವೊಂದು ಎಲ್ಲರ ಕೈಗೂ ಸಿಗುವಾಗ ಅದರ ಉಪಯೋಗ ಹೇಗೆ ಮಾಡಬೇಕು ಎಂದು ಅರಿತ ಜನ, ಇದರಿಂದ ಸುಲಭವಾಗಿ ನಾನು ಯಾವ ಸಹಾಯ ಪಡೆದುಕೊಳ್ಳಬಹುದು ಎಂದು ಯೋಚಿಸುವ ಕಾಲ ಇದು. ಹಾಗಿರುವಾಗ ಬೇರೆಯವರ ಮಕ್ಕಳು ಹಾಳಾದರೆ ಆಗಲಿ ಎಂಬ ಮನಸ್ಥಿತಿಯನ್ನು ಹೊಂದಿ ಬೇಡದ ವಿಚಾರಗಳನ್ನು ಸಾಮಾಜಿಕ ವಿಚಾರಗಳನ್ನೆಲ್ಲಾ ತುಂಬಿ, ಬೆಳೆಯುವ ಮಕ್ಕಳು ಕುತೂಹಲದಿಂದ ಅಂತಹ ಎಲ್ಲಾ ವಿಡಿಯೋಗಳನ್ನು ನೋಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಜೊತೆಗೆ ಕಲಿಕೆಯಲ್ಲಿ ಹಿಂದೆ ಬೀಳುವುದರ ಜೊತೆಗೆ ಮಾನಸಿಕವಾಗಿ ಕುಗ್ಗಿ, ನೊಂದು, ಅದರಿಂದ ಹೊರ ಬರಲು ಆಗದೆ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ನಿತ್ಯ ಸತ್ಯ. ಇದು ಒಂದೆಡೆ ಆದರೆ, ಕಲಿತ, ಸಮಾಜವನ್ನು ತಿದ್ದಬೇಕಾದ, ವಿದ್ಯಾರ್ಥಿಗಳನ್ನು ತಿದ್ದುತ್ತಿರುವ, ಸರಿ ದಾರಿಯಲ್ಲಿ ನಡೆಸಬೇಕಾಗಿರುವ ಶಿಕ್ಷಕ ಸಮುದಾಯವೇ ಹೀಗೆ ಆತ್ಮಹತ್ಯೆ ಮಾಡಿಕೊಂಡರೆ! ಒಮ್ಮೆ ಯೋಚಿಸಬೇಕಾದ ವಿಚಾರ! ಅದೂ ಕೂಡ ಪ್ರಾಥಮಿಕ, ಪ್ರೌಢ ಎಂದಲ್ಲ! ಪಿಯು ಕಾಲೇಜಿನ ಉಪನ್ಯಾಸಕರು, ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಇವರೆಲ್ಲ ಜೀವನದಲ್ಲಿ ಕಷ್ಟಗಳು ಇವೆ ಎಂಬ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಇನ್ನು ಸಾಮಾನ್ಯರ ಪಾಡೇನು?
ಹೆಣ್ಣು ಮಕ್ಕಳು ಪ್ರತಿ ಕುಟುಂಬದಲ್ಲೂ ಕಷ್ಟ ಸಹಿಸುವುದು ಸರ್ವೇ ಸಾಮಾನ್ಯ. ಗಂಡ ಕುಡುಕ, ಬೇಡದ ಚಟ ಇರುವವ, ಸೋಮಾರಿ, ದುಡಿಯದೆ ಊರು ತಿರುಗುವವ, ಕೆಲಸ ಮಾಡದೆ ಮಡದಿ ದುಡಿದ ಹಣವನ್ನು ಖರ್ಚು ಮಾಡುವವ, ಕೆಟ್ಟ ಗೆಳೆಯರ ಜೊತೆ ಸೇರಿ ದುಷ್ಟ ಚಟಗಳ ಬೆಳೆಸಿಕೊಂಡವರು, ತಾಯಿ, ಅಕ್ಕ ತಂಗಿಯರ ಮಾತು ಕೇಳಿ ಬಂದ ಹೆಣ್ಣು ಮಗಳಿಗೆ ಕಷ್ಟ ಕೊಟ್ಟು ಅವಳನ್ನು ಕಣ್ಣೀರಲ್ಲಿ ಕೈ ತೊಳೆಸುವವರು, ಶಿಕ್ಷೆ ಕೊಡುವವರು, ಮಾತುಗಳಿಂದಲೇ ತೊಂದರೆ ಕೊಟ್ಟು ಚುಚ್ಚುವವರು, ದೈಹಿಕವಾಗಿ ಹಿಂಸಿಸುವವರು, ಸಾಯಿಸುವವರೇ ಇದ್ದಾರೆ ಬಿಡಿ! ಮದುವೆಗೆ ಮುಂಚೆ ಯಾವ ಸಾಧನೆ ಮಾಡಿದ್ದರೂ ಮದುವೆಯ ಬಳಿಕ ನೋವು ಎನ್ನುತ್ತಿರುವ ಜೀವಂತ ಉದಾಹರಣೆ ನಮ್ಮ ಮುಂದೆ ಇಂದು ಹಲವಾರು ಹೆಣ್ಣು ಮಕ್ಕಳೇ ಅಲ್ಲದೆ ರಾಖಿ ಸಾವಂತ್ ಎಂಬ ಹೆಣ್ಣು ಮಗಳದ್ದೆ ಇದೆ.
ಒಂದು ಕಾಲದಲ್ಲಿ ಟಿವಿ ಶೋ ಒಂದಕ್ಕೆ ತನಗಾಗಿ ಸ್ವಯಂವರ ಎಂದು ಗಂಡು ಹುಡುಕುವ ಕಾರ್ಯ ಮಾಡಿ ಹಲವಾರು ಗಂಡುಗಳನ್ನು ಸಂದರ್ಶನ ಮಾಡಿ, ಒಂದೊಂದು ಎಪಿಸೋಡ್ ನಲ್ಲಿ ಅವರನ್ನು ಎಲಿಮಿನೇಟ್ ಮಾಡಿ ಕೊನೆಯಲ್ಲಿ ಉಳಿದವರನ್ನು ಕೂಡಾ ಮದುವೆ ಆಗದೆ ತಾನು ತುಂಬಾ ಸುಂದರಿ, ಬುದ್ಧಿವಂತೆ ಆಗಿ ಮೆರೆದ ಚೆಲುವೆ ಇಂದು ಕಾನೂನಿನ ಮೊರೆ ಹೊಕ್ಕು ನಿತ್ಯ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾಳೆ. ಇದು ಇವಳ ಒಬ್ಬಳ ನೋವು ಮಾತ್ರ ಅಲ್ಲ. ಹಲವಾರು ಕುಟುಂಬಗಳಲ್ಲಿ ಮಹಿಳೆಯರು ಸಮಾಜಕ್ಕೆ ಹೆದರಿ, ಎರಡು ಕುಟುಂಬದ ಮರ್ಯಾದೆಗೆ ಅಂಜಿ ನೋವು ನುಂಗಿಕೊಂಡು ಬದುಕುತ್ತಿರುವ ಪರಿ! ಮತ್ತೊಂದು ಕಡೆ ಎದೆಗಾರಿಕೆ ಇರುವ ಹೆಣ್ಣು ಮಕ್ಕಳು ಅವರ ಪೋಷಕರ ಸಹಾಯದಿಂದ ಲಾಯರ್ ಮೂಲಕ ಡೈವೋರ್ಸ್ ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಇದು ಮಹಿಳೆಯರು ಮಾತ್ರ ಅಲ್ಲ, ಕೆಲವು ಪುರುಷರ ಜೀವನದಲ್ಲೂ ಅನ್ವಯ ಆಗುತ್ತದೆ.
ಆದರೆ ವಿದ್ಯಾರ್ಥಿಗಳನ್ನು ತಿದ್ದಬೇಕಾದ, ಅವರ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕ ವೃಂದ ತಾವೇ ತಮ್ಮ ಜೀವನದ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಆಗದೆ ಹೋದರೆ ಹೇಗೆ? ದೊಡ್ಡವರು ಅನ್ನಿಸಿಕೊಂಡವರು, ಕೊಟ್ಯಾಧೀಶರು ಹೀಗೆ ಸತ್ತಾಗ ಬದುಕಿಗೆ ಹಣ ಮಾತ್ರ ಅಲ್ಲ, ಬೇರೇನೋ ಪ್ರೀತಿ, ಧೈರ್ಯ, ತಾಳ್ಮೆ ಬೇಕಿದೆ ಅನ್ನಿಸುವುದಿಲ್ಲವೇ? ಇಂದಿನ ಮಕ್ಕಳಿಗೆ ಅಜ್ಜಿಯರ ಕಥೆಗಳಿಲ್ಲ, ಅಜ್ಜಂದಿರ ಜೊತೆ ಸುತ್ತಾಟವೂ ಇಲ್ಲ. ಅಪ್ಪ ಅಮ್ಮನ ಜೊತೆ ದಿನ ಕಳೆಯುವ ಭಾಗ್ಯವೂ ಇಲ್ಲ. ಕೆಲಸದವರ ಜೊತೆಗೋ, ಯಾವುದೋ ಮನೆಯಲ್ಲಿಯೋ, ಯಾವುದೋ ಪ್ಲೇ ಹೋಂಗಳಲ್ಲಿಯೋ ಅವರ ಬಾಲ್ಯದ ಬದುಕು ಕಳೆದರೆ ಉಳಿದ ದಿನಗಳೆಲ್ಲ ಶಾಲೆ, ಟ್ಯೂಷನ್, ಸಮ್ಮರ್ ಕ್ಯಾಂಪ್ ಗಳಲ್ಲಿ. ಅವರಿಗೆ ನಿಜ ಜೀವನದಲ್ಲಿ ಜನರೊಡನೆ ಬೆರೆಯುವ, ಅಗತ್ಯ ಇರುವವರಿಗೆ ಸಹಾಯ ಹಸ್ತ ಚಾಚುವ, ಪರರ ಕಷ್ಟಕ್ಕೆ ಮರುಗುವ, ತಮ್ಮ ಕಷ್ಟ ಪರರಿಗಿಂತ ಚಿಕ್ಕದು ಎಂಬ ಭಾವನೆ ಬರುವ ಸನ್ನಿವೇಶಗಳು ಸಿಗುವುದು ಕಡಿಮೆ. ಪೋಷಕರು ದುಡಿಯುವ ಕಾರಣ ‘ಬೇಕು ‘ ಎನ್ನುವುದೆಲ್ಲ ಮನೆಗೆ ಬರುತ್ತದೆ. ತಮ್ಮ ತಂದೆ ತಾಯಿಯರ ಕಷ್ಟ ಗಮನಕ್ಕೆ ಬರುವುದೇ ಇಲ್ಲ. ನಮ್ಮ ಮಕ್ಕಳಿಗೆ ಏನೂ ತೊಂದರೆ ಆಗದ ಹಾಗೆ ಬೆಳೆಸಬೇಕು ಎಂಬ ಸಂಕಲ್ಪ ಪೋಷಕರಿಗೂ ಇರುತ್ತದೆ. ಪ್ರತಿನಿತ್ಯ ಕಾರಿನಲ್ಲಿ ಓಡಾಡುವ ಮಗುವಿಗೆ ಒಂದು ದಿನ ಕಾರ್ ಕೆಟ್ಟು ನಿಂತರೆ ಶಾಲೆಗೆ ರಜೆ ಆಯಿತು ಎಂಬ ಖಿನ್ನತೆ! ಮತ್ತೆ ಎರಡೆರಡು ದಿನದ ನೋಟ್ಸ್, ಮನೆ ಕೆಲಸದ ಹೊರೆ! ಇಂತಹ ಬಂಧನದಲ್ಲಿ ಬೆಳೆದ ಮಗುವಿಗೆ ಹೊರಗಿನ ಪ್ರಪಂಚದ ಅರಿವಿರದೆ ಬೆಳೆದು, ದೊಡ್ಡವನಾದ ಬಳಿಕ ತಾನೇ ಹೊರಗೆ ಹೋಗಿ ದುಡಿಯುವಾಗ ಒಂಟಿತನ ಕಾಡಿಯೋ, ಸಂಬಂಧಗಳು ಹೊಂದಿಕೆ ಆಗದೆಯೋ, ಪರಿಹಾರ ಇಲ್ಲ ಎಂದೆನಿಸಿ ಸಾವಿಗೆ ಶರಣಾಗುತ್ತಾರೆ. ಅದಕ್ಕೇ ಅಕ್ಕ ಪಕ್ಕದ ಮನೆಯ ಮಕ್ಕಳು ಒಟ್ಟಾಗಿ ಕಲೆತು ಆಟ ಆಡಬೇಕು. ಒಬ್ಬೊಬ್ಬರ ಆಲೋಚನೆಗಳನ್ನು ಮತ್ತೊಬ್ಬರ ಬಳಿ ಹೇಳಿಕೊಂಡು ಅವರವರೇ ಸಾಂತ್ವನ ಹೇಳುವವರಾಗಬೇಕು. ನಮ್ಮ ಕಷ್ಟ ಸುಖಗಳು ಪರರ ಹಾಗೆಯೇ. ನಮ್ಮ ಕಷ್ಟಗಳು ಪರರಿಗಿಂತ ಬಹಳವೇ ಚಿಕ್ಕವು. ಅವುಗಳಿಗೆ ಪರಿಹಾರ ಇದೆ ಎಂಬ ಭಾವನೆ ಬೆಳೆಯಬೇಕು.
ನಾವು ಚಿಕ್ಕವರಿರುವಾಗ ಹೇಗೆ ಗೆಳೆಯರು ಬಿದ್ದು ಪೆಟ್ಟಾದರೆ ಕಮ್ಯೂನಿಸ್ಟ್ ಗಿಡದ ಎಲೆ ತಂದು, ಅದರ ರಸ ತೆಗೆದು ಗೆಳೆಯನ ಗಾಯಕ್ಕೆ ಹಚ್ಚಿ ಸರಿ ಮಾಡುತ್ತಿದ್ದೆವು! ಕಣ್ಣಿಗೆ ಕಸ ಬಿದ್ದರೆ ಊದಿ ತೆಗೆಯುತ್ತಿದ್ದೆವು! ಜ್ವರ ಬಂದರೆ ತುಳಸಿ ಎಳೆ ಜಗಿಯಲು ಹೇಳುತ್ತಿದ್ದೆವು! ಮಧ್ಯಾಹ್ನದ ಊಟವನ್ನು ಹಂಚಿ, ಬೇಡದಿದ್ದರೆ ಎಕ್ಸ್ಚೇಂಜ್ ಮಾಡಿಕೊಂಡು ತಿನ್ನುತ್ತಿದ್ದೆವು. ಅಲ್ಲಿ ಎಷ್ಟು ಸಹಕಾರ ಮನೋಭಾವ! ನೀರು ಬೇಕಾದರೆ ಕೊಡುತ್ತಿದ್ದವು. ಈಗ ಎಕ್ಸ್ಚೇಂಜ್ ಮಾಡುವ ಹಾಗಿಲ್ಲ! ಕೊರೋನ ಬಂದು ಹೋದ ಮೇಲಂತೂ ಮನುಷ್ಯ ಸ್ವಾರ್ಥಿ ಆಗಿ ಬಿಟ್ಟಿದ್ದಾನೆ! ನೋ ಶೇರಿಂಗ್, ನೋ ಕೇರಿಂಗ್! ತನ್ನಷ್ಟಕ್ಕೆ ತಾನು! ಯಾರು ಸತ್ತರೂ ಇನ್ನೊಬ್ಬರು ನೋಡಲೂ ಬಾರದಷ್ಟು ಆರೋಗ್ಯ ಕಾಳಜಿ ಹೆಚ್ಚಿದೆ ನಮ್ಮಲ್ಲಿ ಸ್ವಾರ್ಥಕ್ಕಾಗಿ!

ಎಲ್ಲಿಗೆ ಬೇಕಾದರೂ ತಮ್ಮದೇ ಕಾರಿನಲ್ಲಿ ನೆನೆಸಿದಾಗ ಹೋಗುವುದು. ಅಲ್ಲಿ ನ್ಯಾರೋ ಮೈಂಡ್ ಅಲ್ಲದೆ ಮನೋ ವಿಕಾಸ ಆಗಲು ಏನಿದೆ? ಅದೇ ಬಸ್ಸಿನಲ್ಲಿ ಆದರೆ, ಸಣ್ಣ ಮಕ್ಕಳನ್ನು ಹಿಡಿದಿರುವ ತಾಯಂದಿರು, ಗರ್ಭಿಣಿಯರು, ವಯಸ್ಸಾದವರು, ಶಿಕ್ಷಕರು, ಬಂಧುಗಳು ಬಂದರೆ ಅವರಿಗೆ ಸ್ಥಳ ಬಿಟ್ಟು ಕೊಡುವುದು, ಅವರೊಡನೆ ಹರಟೆ, ಲೋಕಾಭಿರಾಮದ ಮೂಲಕ ಮಾತೃ ಭಾಷೆಯ ಬಳಕೆ ಎಲ್ಲವೂ ಚೆನ್ನಾಗಿತ್ತು! ಈಗಂತೂ ಶಾಲೆಯಲ್ಲಿ ಇಂಗ್ಲಿಷ್, ಮನೆಯಲ್ಲಿ ಮಾತನಾಡಲು ಜನ ಇಲ್ಲ, ಇದ್ದವರಿಗೆ ಸಮಯ ಇಲ್ಲ, ಅಲ್ಲೂ ಆಂಗ್ಲ ಭಾಷೆ ಬೆರೆತ ಕಂಗ್ಲೀಷ್! ಮಕ್ಕಳಿಗೆಲ್ಲ ಎಲ್ಲಿ ಬರಬೇಕು ತಾಯ್ನುಡಿ? ಒಂದು ಭಾಷೆಯ ಸಮಾಧಿ ಅಲ್ಲಿಯೇ ಆಯಿತು! ಮತ್ತೆಲ್ಲಿ ಮಾತೃಭಾಷೆ! ಹಿರಿಯರೂ ಮಕ್ಕಳಿಗೆ ತಮ್ಮ ಭಾಷೆ ಬಾರದೆ ಇರುವ ಕಾರಣ ಯಾವ ಮಾತನ್ನೂ ತಮ್ಮ ಮೊಮ್ಮಕ್ಕಳ ಬಳಿ ಆಡಲು ಆಗದು! ಇನ್ನು ಅಜ್ಜಿ ಕತೆ ಹೇಳೋದೆಂತು! ಕೇಳಿ ಅರ್ಥೈಸಿ ಕೊಳ್ಳೋದು ಹೇಗೆ! ನೀತಿ ಕಲಿಯೋದು ಹೇಗೆ? ಮಾನಸಿಕವಾಗಿ ಸದೃಢರಾಗುವುದು ಹೇಗೆ? ಹಾಗಾಗಿಯೇ ಸಣ್ಣ ಸಣ್ಣ ಕಷ್ಟಗಳಿಗೆ ಕೂಡಾ ಹೋಗಿ ಸಾಯುವುದು ಒಂದೇ ದಾರಿ ಎಂದು ಅವರ ಅನಿಸಿಕೆ ಆಗಿರುತ್ತದೆ.
ತಮ್ಮ ಕಷ್ಟಗಳನ್ನು ಗೆಳೆಯರಲ್ಲಿ ಹೇಳಿಕೊಂಡರೆ ಅವರ ಇಮೇಜ್ ಗೆ ಧಕ್ಕೆ ಬರುತ್ತದೆ ಅಂದುಕೊಂಡು ಯಾರಿಗೂ ಹೇಳದೆ ತನ್ನೊಳಗೆ ತಾನು ಕೊರಗುತ್ತ ಇರುತ್ತಾರೆ! ಕೊನೆಗೆ ಒಂದು ದಿನ ಸತ್ತಾಗಲೆ ಎಲ್ಲರಿಗೂ ಅನ್ನಿಸುವುದು, ಇದು ತೀರಾ ಕ್ಷುಲ್ಲಕ ವಿಚಾರ ಅಂತ! ಬದುಕಿಗೆ ಊಟ , ತಿಂಡಿ, ಗಾಳಿ, ನೀರಿನ ಹಾಗೆ ಪೋಷಕರ ಪ್ರೀತಿ, ಕೇರ್, ಗಮನ ಕೂಡಾ ಬೇಕು. ಪ್ರತಿ ಹೆಜ್ಜೆಯಲ್ಲೂ ಅವರನ್ನು ಗಮನಿಸಿ ಪ್ರೀತಿಯಿಂದ ತಿದ್ದಿ ತೀಡಲು ತಾಳ್ಮೆ ಇರುವ ಹಿರಿಯ ಮನಗಳು ಪ್ರತಿ ಕುಟುಂಬದಲ್ಲಿ ಬೇಕಾಗಿವೆ. ಮಕ್ಕಳ ವಯಸ್ಸಿನಲ್ಲೇ ಮನಸ್ಸನ್ನು ಗಟ್ಟಿಗೊಳಿಸುವ ಪೋಷಕರೂ ಬೇಕು, ತಮ್ಮ ಕಷ್ಟಗಳನ್ನು ಮಕ್ಕಳ ಮುಂದೆ ಸ್ವಲ್ಪ ಮಟ್ಟಿಗಾದರೂ ತೋರ್ಪಡಿಸಿ ಜೀವನ ಕಷ್ಟವಿದೆ, ಸುಲಭವಿಲ್ಲ, ಆದರೂ ಅದನ್ನು ನಿಭಾಯಿಸಬೇಕು ಎನ್ನುವ ಪಾಠ ಪ್ರತಿ ಪೋಷಕರು ಬೆಳೆಯುತ್ತಿರುವ ಮಕ್ಕಳಿಗೆ ಕಲಿಸಿ ಕೊಡಬೇಕಿದೆ. ಆ ದಿಸೆಯಲ್ಲಿ ಮಕ್ಕಳ ಮನಸನ್ನು ಎಳವೆಯಿಂದಲೇ ಬದುಕಿಗೆ ಸಿದ್ಧಗೊಳಿಸಬೇಕಿದೆ. ಆಗ ಮಾತ್ರ ವಯಸ್ಸಾದಾಗ ಎಲ್ಲಾ ಕಷ್ಟಗಳ ನಡುವೆ, ಅದನ್ನು ಮೆಟ್ಟಿ ನಿಂತು ಜನ ಬದುಕಲು ಕಲಿಯಲು ಸಾಧ್ಯ ಅಲ್ಲವೇ? ನೀವೇನಂತೀರಿ?
———————————————
ಹನಿಬಿಂದು

ಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154