ಕಾವ್ಯ ಸಂಗಾತಿ
ಗಜಲ್
ಅರುಣಾ ನರೇಂದ್ರ
ಇವ ಹೆಜ್ಜೆ ಇಟ್ಟಲ್ಲೆಲ್ಲ ನಗೆ ನವಿಲು ಕೇಕೆ ಹಾಕುತ್ತದೆ ಸಖಿ
ಮೌನ ಮುರಿದು ಗಿಳಿ ಮೃದು ಮಧುರ ಮಾತಾಡುತ್ತದೆ ಸಖಿ
ತಂಗಾಳಿಯ ಮೈತುಂಬ ಸಿರಿ ಗಂಧ ಸವರುವ ಚತುರ
ಇವನ ದನಿ ಕೇಳಿ ಚೈತ್ರವಿರದೆ ಕೋಗಿಲೆ ಹಾಡುತ್ತದೆ ಸಖಿ
ಲೋಕದ ನೋವಿಗೆ ಕಿವಿಯಾಗಿ ಕರಗುತ್ತಾನಿವನು
ನಾಕವೇ ಇವನ ಬಳಿ ಬರಲು ಹಂಬಲಿಸಿ ಕಾಯುತ್ತದೆ ಸಖಿ
ಹಾದಿ ಬೀದಿಯ ತುಂಬ ನಳನಳಿಸುವ ಹಸಿರು ಹಂದರ
ಇವನಿರುವ ಕಡೆ ಬಾಂಧವ್ಯದ ಬಳ್ಳಿ ಹಬ್ಬುತ್ತದೆ ಸಖಿ
ದಿನವಿಡಿ ದಣಿವಿಲ್ಲದೆ ದುಡಿವ ಸೂರ್ಯನ ಸಖನಿವನು ಕೇಳೇ
ಅರುಣಾಳ ಮೇಲಿನ ಇವನೊಲವು ನಿತ್ಯ ಪದವಾಗುತ್ತದೆ ಸಖಿ