ಸುಧಾರಾಣಿ ನಾಯ್ಕ ಕವಿತೆ-ಹಾರೈಸಬೇಕೊಮ್ಮೆ

ಕಾವ್ಯ ಸಂಗಾತಿ

ಹಾರೈಸಬೇಕೊಮ್ಮೆ

ಸುಧಾರಾಣಿ ನಾಯ್ಕ

ಹಾರೈಸಬೇಕೊಮ್ಮೆ
ನಗುವ ಕಸಿದುಕೊಂಡವಗೆ
ಹಾರೈಸಬೇಕೊಮ್ಮೆ

ಯಾರನ್ನ ನಂಬದಷ್ಟು
ಕಟುವ ಕಲಿಸದ್ದಕ್ಕೆ
ಜಗವ ವ್ಯವಹಾರಿಕವಾಗಿ
ನೋಡುವ ಶುಷ್ಕತೆ
ಕಲಿಸಿದ್ದಕ್ಕೆ
ನೆನಪು ಕಾಡುವಾಗಲೆಲ್ಲ
ಗಳಿಗೆ ಬದಲಿಸಿದಂತೆ
ಮನವ ಪಲ್ಲಟಗೊಳಿಸುವುದ
ಕಲಿಸಿದ್ದಕ್ಕೆ

ಕಣ್ಣಾಲಿಗಳು ತುಳುಕುವಾಗ
ರೋಧಿಸದೇ
ತತ್ತೆಂದು..ಎದ್ದು ಇನ್ನೆಲ್ಲೋ
ಮುಳುಗಲು ಕಲಿಸಿದ್ದಕ್ಕೆ
ಬದುಕ ಉತ್ಸಾಹ ಕಸಿದಿದ್ದಕ್ಕೆ
ಜಡವಾಗಿ ಬದುಕುವುದ
ರೂಢಿಸಿದ್ದಕ್ಕೆ
ಒಂಟಿತನವ ಆಲಂಗಿಸಿ
ಜೊಳ್ಳು ಬೆಳಕಿಗಿಂತ
ಕತ್ತಲನ್ನು ಪ್ರೀತಿಸುವುದ
ಕಲಿಸಿದ್ದಕ್ಕೆ

ಹಾರೈಸಬೇಕೊಮ್ಮೆ
ಅವನ ನಗುವಲ್ಲಿ
ಮತ್ತೇ ನಂಜು ಸೇರದಂತೆ
ಕಣ್ಣಲ್ಲಿ ಸಂಚು ಸೇರದಂತೆ
ಮನದಲ್ಲಿ ರಂಗ ಸೃಜಿಸಿಕೊಂಡು
ಮುಖಕ್ಕೆ ಅಂದದ
ಮುಖವಾಡ ಅಂಟದಂತೆ
ಹರಸಬೇಕೊಮ್ಮೆ

ಕನಸ ಬಿತ್ತಿ,ಪ್ರೀತಿ ಬೆಳಸಿ
ಬೇಡವೆನಿಸದಾಗ
ಕಲ್ಲಾಗುವ ಹೃದಯದಲ್ಲಿ
ಒಲವು ಜಿನುಗದಿದ್ದರೂ,
ಮನುಷತ್ವವಾದರೂ
ಬತ್ತದಂತೆ, ಸಾಯದಂತೆ
ಹಾರೈಸಬೇಕೊಮ್ಮೆ
ಹಾರೈಸಬೇಕೊಮ್ಮೆ


2 thoughts on “ಸುಧಾರಾಣಿ ನಾಯ್ಕ ಕವಿತೆ-ಹಾರೈಸಬೇಕೊಮ್ಮೆ

Leave a Reply

Back To Top