ಡಾ. ಪುಷ್ಪಾ ಶಲವಡಿಮಠ-ನನ್ನ ನಿನ್ನ ಕವಿತೆ

ಕಾವ್ಯ ಸಂಗಾತಿ

ನನ್ನ ನಿನ್ನ ಕವಿತೆ

ಡಾ. ಪುಷ್ಪಾ ಶಲವಡಿಮಠ

ಈಗೀಗ ನಮ್ಮಿಬ್ಬರ ನಡುವೆ
ಮಾತು ಕಡಿಮೆ ಆಗಿದೆ.

ನನ್ನ ಕಣ್ಣಲ್ಲಿ ನಿನ್ನ ಕವಿತೆ
ನಿನ್ನ ಕಣ್ಣಲ್ಲಿ ನನ್ನ ಕವಿತೆ
ಮಾತನಾಡಿಕೊಳ್ಳುತ್ತಿವೆ.

ಎಂದಿಗೂ ಮಾಯವಾಗದ
ಎದೆಯ ಗಾಯಗಳಿಗೆ
ನನ್ನ ನಿನ್ನ ಕವಿತೆಗಳು
ಮುಲಾಮು ಹಚ್ಚುತ್ತಿವೆ.

ನಿನ್ನಧರದ ಕಹಿಯನ್ನೆಲ್ಲಾ
ನನ್ನ ಕವಿತೆ ಹೀರಿಕೊಳ್ಳುತ್ತಿದೆ
ನನ್ನ ಕಣ್ಣೆವೆಯಲ್ಲಿ ಇಣುಕುವ
ನಿನ್ನ ಕವಿತೆ ನನ್ನೆದೆಯ ತುಂಬಾ
ರಂಗಿನ ರಂಗೋಲಿ ಬಿಡಿಸಿದೆ.

ನನ್ನ ನಿನ್ನ ಕವಿತೆಗಳು
ಪರಸ್ಪರ ಹೊಂದಿಕೊಂಡಿವೆ
ಜಗದಗಲ ಮುಖ ಚಾಚಿಕೊಂಡಿವೆ
ಬದುಕಿನ ಬವಣೆಗಳಿಗೆ ಉತ್ತರ ಹುಡುಕುತ್ತಿವೆ
ಕವಿತೆಗಳು ಮಾತಾಡಿಕೊಳ್ಳುತ್ತಿವೆ
ಹೀಗಾಗಿ ಈಗೀಗ ನಮ್ಮಿಬ್ಬರ ನಡುವೆ
ಮಾತು ಕಡಿಮೆಯಾಗಿವೆ.

ನನ್ನ ಹಿತ್ತಲಿನಲ್ಲಿ ನಿನ್ನ ಚಂದಿರ ನಗುತ್ತಾನೆ
ನಿನ್ನ ಗುಡಿಸಿಲಿನಲ್ಲಿ ನನ್ನ ನವಿಲು ನರ್ತಿಸುತ್ತದೆ
ನಿನ್ನ ಚಂದಿರನಿಗೆ ನಗುವಿಗೆ ಬರವಿಲ್ಲ
ನನ್ನ ನವಿಲಿಗೆ ಕುಣಿಯಲು ಯಾವ ಹಂಗಿಲ್ಲ
ನನ್ನ ನಿನ್ನ ಕವಿತೆಗಳು ಹಾಡಲು
ಗಡಿರೇಖೆಗಳ ಮಿತಿಯಿಲ್ಲ.

ನಿನ್ನೆದೆಗೆ ಒರಗಿದ ನನ್ನ ಕವಿತೆಗೆ
ಎಂದೂ ವಿಷಾದ ಕಾಡಲಿಲ್ಲ
ನನ್ನ ಮಡಲಿಗೆ ಬಂದ ನಿನ್ನ ಕವಿತೆ
ಎಂದೂ ಅನಾಥವಾಗುವುದಿಲ್ಲ.

ನೋಡು
ನಿನ್ನ ಕವಿತೆ ಬಡವನ ಗುಡಿಸಲ ಸುತ್ತ
ಕೊಳಲ ಗಾನವಾಗಿ ನಲಿಯುತಿದೆ
ನನ್ನ ಕವಿತೆ ಆ ಗಾನಕೆ ಉಸಿರಾಗಿದೆ
ನಮ್ಮ ಕವಿತೆಗಳಿಗೀಗ
ಹಸಿರುಕ್ಕಿಸುವುದರಲ್ಲೇ ಖುಷಿ
ಎಲ್ಲೆಲ್ಲೂ ಈಗ ನಮ್ಮ ಕವಿತೆಗಳದೇ ಮಾತು……

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ
ನನ್ನ ನಿನ್ನ ಕವಿತೆ
ಹಾಡಿಕೊಳ್ಳುತ್ತಿವೆ
ಮಾತನಾಡಿಕೊಳ್ಳುತ್ತಿವೆ
ಹೀಗಾಗಿ ಈಗೀಗ
ನಮ್ಮಿಬ್ಬರ ನಡುವೆ
ಮಾತು ಕಡಿಮೆ ಆಗಿವೆ.


3 thoughts on “ಡಾ. ಪುಷ್ಪಾ ಶಲವಡಿಮಠ-ನನ್ನ ನಿನ್ನ ಕವಿತೆ

  1. ಓದಿ ಅಭಿಪ್ರಾಯ ಹೇಳಿದ ಇಬ್ಬರು ಮಹನೀಯರಿಗೂ ಧನ್ಯವಾದಗಳು

Leave a Reply

Back To Top