ಕಾವ್ಯ ಸಂಗಾತಿ
ಗಜಲ್
ಶಂಕರಾನಂದ ಹೆಬ್ಬಾಳ
ನಿನ್ನೊಲವ ಬಯಸಿದ ಹೃದಯ ಇಂದೇಕೋ ಮೌನವಾಯಿತು
ಎದೆಯ ಪಟದಲ್ಲಿ ಕಲ್ಲೆಸೆದು ಹೊರಟಂತೆ ಭಾಸವಾಯಿತು
ಪ್ರೀತಿಯ ಪಾರಿವಾಳ ಒಸಗೆಯನು ಎಸೆದು ಹೋಯಿತೇಕೆ
ಒಡಲು ಪ್ರಕ್ಷುಬ್ದವಾಗಿ ಭಾವನೆಗಳ ಬುಗ್ಗೆ ಬರಿದಾಯಿತು
ಕಣ್ಣೆದುರು ಕಾಮನಬಿಲ್ಲಿನಂತೆ ಮೂಡಿ ಚಿತ್ತಾರ ಬರೆಸಿದ್ದೆ
ಕಾಡುವ ನೆನಪುಗಳಲ್ಲಿ ಬರಿಯ ಶೋಕವೆತುಂಬಿಹೋಯಿತು
ಬಿಟ್ಟರೂ ಬಿಡದಲ್ಲ ಈ ಮಾಯೆ ಚಮತ್ಕಾರ ತೋರುತಿದೆಯೇಕೆ
ಬಿಡದ ಬೆಸದ ಆವಿರ್ಭಾವ ಸಂಬಂಧಕೆಘಾಸಿಯಾಯಿತು
ಸಿಗದ ಪ್ರೇಮಕುದುರೆಯ ಬೆನ್ನೇರಿ ಬಂದಿಹನು ಅಭಿನವ ಕವಿ
ವೈಭವದ ದಿನಗಳು ಮರಿಚಿಕೆಯಾಗಿ ಸುಖವು ಕಾಣದಾಯಿತು