ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಬಂದಿದೆ ಶುಭ ವಸಂತ : ಕಾದಂಬರಿ

ಬುಧವಾರ
೨೨.೦೨.೨೦೨೩

ಬಂದಿದೆ ಶುಭ ವಸಂತ : ಕಾದಂಬರಿ
ಲೇಖಕರು : ಅನುಬೆಳ್ಳೆ ರಾಘವೇಂದ್ರರಾವ್ ಪ್ರಕಾಶಕರು :ಸಾಹಿತ್ಯ ಸುಗ್ಗಿ ಬೆಂಗಳೂರು ಮೊದಲ ಮುದ್ರಣ :೨೦೧೨

ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾದ ರಾಘವೇಂದ್ರರಾವ್ ಅವರು ಬರೆಯುವುದು ಅನುಬೆಳ್ಳೆ ಎಂಬ ಹೆಸರಿನಿಂದ. ಧಾರವಾಡ
ವಿಶ್ವವಿದ್ಯಾನಿಲಯದ ಎಂಕಾಂ ಮತ್ತು ಕುವೆಂಪು ವಿಶ್ವವಿದ್ಯಾನಿಲಯದ ಎಂಎ ಸ್ನಾತಕೋತ್ತರ ಪದವೀಧರರು. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಸಣ್ಣ ಕಥೆಗಳು ಪ್ರಕಟವಾಗಿವೆ, ಕಾದಂಬರಿಗಳು ಧಾರಾವಾಹಿಯಾಗಿ ಬಂದಿವೆ ಇದುವರೆಗೂ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ . ಭೂತದ ಕೋಳಿ, ಬಿಳಿಕಾಗೆ ಹಿಡಿದಾಗ, ಕಾಯಕಥೆ ಇದೆಲ್ಲಾ ಕಥಾಸಂಕಲನಗಳು. ನಿಲುವು, ಜಾಡು, ಕುಗ್ಗಲು ಭೂತ, ರಾಗದೀಪ, ಮರಳುದಿಣ್ಣೆ, ರಣರಂಗ, ಚಕ್ರವ್ಯೂಹ ಮೊದಲಾದುವು ಕಾದಂಬರಿಗಳು. ಕನ್ನಡದ ಬೇಟೆ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಅವರ ವ್ಯಕ್ತಿಚಿತ್ರಣ, ದೃಶ್ಯ ಮಾಧ್ಯಮದಲ್ಲಿ ಸಂಭಾಷಣಕಾರರಾಗಿಯೂ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಪ್ರಸ್ತುತ ಕಾರ್ಕಳ ತಾಲ್ಲೂಕಿನ ಕ್ರಿಯೇಟಿವ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಭಾಮಿನಿ ಕಥಾ ಪ್ರಶಸ್ತಿ, ಲೇಖಿಕಾ ಶ್ರೀ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಬಂದಿವೆ.

ನಾನು ಓದಿದ ಅನು ಬೆಳ್ಳೆಯವರ ಬಹುತೇಕ ಕಾದಂಬರಿಗಳಲ್ಲಿ ಪತ್ತೇದಾರಿಕೆಯ ನಿಗೂಢತೆಯ ಅಂಶಗಳಿದ್ದುದೇ ಹೆಚ್ಚು .ಪೂರ್ಣ ಪ್ರಮಾಣದ ಸಾಮಾಜಿಕ ಕಾದಂಬರಿ ಇದೇ ಮೊದಲು ಓದಿದ್ದು. “ಬಂದಿದೆ ಶುಭ ವಸಂತ” ವಿಜಯವಾಣಿ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟಗೊಂಡಿದೆ .ಸಿಂಚನ ಎಂಬ ವೈದ್ಯೆಯ ಸುತ್ತ ಚಿತ್ರಿಸಲಾದ ಕತೆ ಅವಳ ಬದುಕಿನ ತಿರುವುಗಳನ್ನು ತುಮುಲಗಳನ್ನು ಕಟ್ಟಿಕೊಡುತ್ತದೆ .

ಮೂರ್ತಿ ಮತ್ತು ವಾಸಂತಿ ದಂಪತಿಗಳ ಏಕೈಕ ಪುತ್ರಿ ಸಿಂಚನ .ನಿವೃತ್ತಿಯ ಬಳಿಕ ಮಡಿಕೇರಿಯ ಬಳಿ ರಜತನಂದನ ಎಂಬ ಎಸ್ಟೇಟ್ ಮಾಡಿದ ಅವರಿಗೆ ಮಗಳು ವೈದ್ಯೆಯಾಗಿ ಬಂದು ಇಲ್ಲಿ ನೆಲೆಸಲಿ ಎಂಬ ಆಸೆ .ಪ್ರತಿಭಾನ್ವಿತೆ ಸಿಂಚನ ತನ್ನ ಧ್ಯೇಯ ಗುರಿ ಸಾಧಿಸಲು ಓದಿನಲ್ಲೇ ಮುಳುಗಿ 1ಬಾರಿಯೂ ತಂದೆ ತಾಯಿಯರನ್ನು ನೋಡಲು ಬರುವುದಿಲ್ಲ. ಹೌಸ್ ಸರ್ಜನ್ ನಂತರವೂ ಪ್ರಾಕ್ಟೀಸ್ ಮಾಡಿ ಬರುತ್ತೇನೆ ಎನ್ನುತ್ತಾಳೆ
ಈ ಮಧ್ಯೆ ನವನೀತ್ ಎಂಬುವವನೊಡನೆ ಪ್ರೇಮವಾಗಿ ಅವನೊಂದಿಗೆ ಎಸ್ಟೇಟ್ಗೆ ಬರುವೆ ಎಂದು ಮೇಲ್ ಕಳಿಸುತ್ತಾಳೆ .ಅಷ್ಟೊಂದು ಭರವಸೆ ಇಟ್ಟಿದ್ದ ಮಗಳಿಂದ ಭ್ರಮನಿರಸನವಾಗುತ್ತದೆ ಈ ದಂಪತಿಗಳಿಗೆ. ಅಲ್ಲದೆ ಮುಂಚಿನ ಪರಿಚಿತ ಮೆಡಿಕಲ್ ರೆಪ್ರೆಸೆಂಟಿಟಿವ್ ರಾಜಶೇಖರನ ಮಾತುಗಳಿಂದ ಅವರ ಕಲ್ಪನೆಯೇ ಬೇರೆಯಾಗಿರುತ್ತದೆ. ಪರಿಸ್ಥಿತಿಯ ಒತ್ತಡದಿಂದ ನವನೀತ್ ನೂಪುರ ಳನ್ನು ಮದುವೆಯಾಗಿ ಮುಂಬೈಯಲ್ಲಿ ನೆಲೆಸಿದರೂ ಸಿಂಚನಾಳನ್ನು ಮರೆಯಲಾಗದೆ ನೂಪುರಳನ್ನು ಹೊಂದಿ ಬಾಳಲಾಗುವುದಿಲ್ಲ. ನೂಪುರ ಅವನನ್ನು ತ್ಯಜಿಸಿ ತನ್ನ ನೃತ್ಯಕಲೆಯನ್ನು ಬೆಂಬತ್ತಿ ಹೋಗುತ್ತಾಳೆ. ನವನೀತನಿಗೆ ನೃತ್ಯದ ಬಗ್ಗೆ ತುಚ್ಛ ಭಾವನೆ ಇದ್ದುದೂ ಒಂದು ಕಾರಣ. ನವನೀತ್ ಮುಂಬಯಿಯಿಂದ ಮರಳಿ ಮತ್ತೆ ಸಿಂಚನಾಳ ಸ್ನೇಹ ಬಯಸುತ್ತಾನೆ . ಆದರೆ ಸಿಂಚನ ಅವನ ಭಾವನೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಏತನ್ಮಧ್ಯೆ ನವನೀತನಿಗೆ ಕ್ಯಾನ್ಸರ್ ಬಂದು ಸಿಂಚನಾಳು ಅವನನ್ನು ಮಾಜಿ ಪ್ರೇಮಿ ಅಂತಲ್ಲದೆ ಒಬ್ಬ ರೋಗಿಯಂತೆ ಉಪಚರಿಸಿ ನೂಪುರಳ ತಂದೆ ತಾಯಿ ಬಳಿ ಮಾತನಾಡುತ್ತಾಳೆ. ಮುಂದೇನಾಗುತ್ತದೆ ನೂಪುರ ವಾಪಸ್ಸು ಬರುತ್ತಾಳೆಯೇ? ಸಿಂಚನಳ ಮುಂದಿನ ನಡೆಯೇನು ತಿಳಿಯಲು ಕಾದಂಬರಿ ಓದಿ.

ಇಲ್ಲಿ ಒಂದು ಸರಳ ವಿಷಯವನ್ನು ಮುಕ್ತವಾಗಿ ಚರ್ಚಿಸದೆ ಎಲ್ಲವನ್ನು ಮುಚ್ಚಿಟ್ಟುಕೊಳ್ಳುವ ಸಿಂಚನಾಳ ಸ್ವಭಾವದ ಸಂಕೀರ್ಣತೆಯನ್ನು ತುಂಬಾ ಆಳವಾಗಿ ಚಿತ್ರಿಸಿದ್ದಾರೆ. ಪ್ರೀತಿಸಿದ ವ್ಯಕ್ತಿಯ ಬಗ್ಗೆ ಅಥವಾ ಪ್ರೇಮ ವೈಫಲ್ಯವನ್ನು ತಂದೆ ತಾಯಿಯ ಬಳಿ ಚರ್ಚಿಸದಿರುವುದು ವೃಥಾ ಮನೆ ಕ್ಷೋಭೆಯನ್ನು ಉಂಟುಮಾಡುತ್ತದೆ. ಸಿಂಚನಾಳ ತಾಯಿ ವಾಸಂತಿಗೆ ಎಲ್ಲವನ್ನೂ ಅರಿಯುವ ಕಾತುರ ಆದರೆ ಮಗಳು ಹೇಳುವವರೆಗೆ ಕೇಳುವುದು ಬೇಡ ಎಂಬ ಪತಿಯ ತಾಕೀತಿನಿಂದ ಸುಮ್ಮನಾಗುತ್ತಾರೆ. ಸಿಂಚನಾಳ ಬಾಲ್ಯದ ನೆರೆಹೊರೆಯಾಗಿದ್ದ ರಾಜಶೇಖರ ಸಿಂಚನಾಳನ್ನು ಪ್ರೀತಿಸುತ್ತಿದ್ದರೂ ಅವಳಿಗೆ ಆ ಭಾವನೆ ಇರುವುದಿಲ್ಲ .ಇಲ್ಲಸಲ್ಲದ ನಿಜವಲ್ಲದ ವಿಷಯಗಳನ್ನು ಕೇಳಿ ಮೂರ್ತಿ ದಂಪತಿಗಳ ದುಗುಡ ಹೆಚ್ಚಿಸುವ ಸ್ವಾರ್ಥಿಯಾಗಿ ಅವನ ಸ್ವಭಾವ .ಕೊನೆಗೂ ಅವನ ಆಷಾಢಭೂತಿತನ ಕಳಚಿಬೀಳುತ್ತದೆ. ಉದಯೋನ್ಮುಖ ನೃತ್ಯಗಾತಿಯಾಗಿ ಮುಂಬಯಿಯ ವಿಲಾಸಿ ವಾತಾವರಣದಲ್ಲಿ ಸಿನಿಮಾಗೆ ಆಹ್ವಾನ ಬಂದರೂ ಹೋಗದ ಸರಳಜೀವಿ ನೂಪುರ. ಪ್ರಿಯತಮೆಯನ್ನು ಮದುವೆಯಾಗಲಾಗದ ಪತಿಯ ಅಸಹನೆಯ ದಳ್ಳುರಿ ಅವಳನ್ನು ಸುಡುತ್ತದೆ .ಹಗ್ಗ ಜಗ್ಗುವವರೆಗೂ ತಡೆದವಳು ನಂತರ ಬೇರೆಯಾಗುತ್ತಾಳೆ .ಮತ್ತೆ ನೃತ್ಯದಲ್ಲಿ ತೊಡಗಿ ಸಾಧನೆಯ ಹಾದಿಯಲ್ಲಿರುವಾಗ ನವನೀತನ ಅನಾರೋಗ್ಯದ ವಿಷಯ ತಿಳಿಯುತ್ತದೆ. ಜತೆಯಲ್ಲಿನ ಸಹಪಾಠಿ ಮುರಳಿಮೋಹನನ ಪ್ರೋತ್ಸಾಹ ಅವಳಿಗೆ ಬೆಂಬಲ .ಅವನ ಪ್ರೀತಿಗೆ ಸ್ಪಂದಿಸದೆ ಸ್ನೇಹ ಮಾತ್ರ ಮುಂದುವರಿಸುವ ಅಪ್ಪಟ ಭಾರತೀಯ ನಾರಿಯಾಗಿ ಅವಳು ಹೊರಹೊಮ್ಮುತ್ತಾಳೆ. ಇಲ್ಲಿ ದೃಢಮನವಿರದ ನವನೀತನ ವ್ಯಕ್ತಿತ್ವ ತುಂಬಾ ದುರ್ಬಲವಾಗಿದೆ. ಧೈರ್ಯವಾಗಿ ಪ್ರೀತಿಸಿದವಳನ್ನು ಮದುವೆಯಾಗಲಾರದೆ ಮದುವೆಯಾದವಳ ಜತೆ ಸಮರಸ ದಾಂಪತ್ಯ ನಡೆಸಲಾಗದ ವಿಕ್ಷಿಪ್ತತೆ ಅವನ ಗುಣ ವಿಶೇಷ .ಕಡೆಗೆ ಕ್ಯಾನ್ಸರ್ ರೋಗಿ ಎಂದು ತಿಳಿದಾಗ ಸಿಂಚನಳಿಗೆ ಮಾಡಿದ ಮೋಸಕ್ಕೆ ತಕ್ಕ ಶಿಕ್ಷೆಯಾಯಿತು ಎನ್ನುತ್ತಾನೆ . ಕಥೆಗೆ ಪೂರಕವಾಗಿ ಎಸ್ಟೇಟ್ ನ ಮ್ಯಾನೇಜರ್ ವೆಂಕಪ್ಪಣ್ಣಯ್ಯ ಪ್ರೇಮದಲ್ಲಿ ಬಿದ್ದು ಮೋಸ ಹೋದ ಅವರ ಮಗಳ ಕಥೆ ಸಿಂಚನಾಳಿಗೆ ತನ್ನ ತಂದೆ ತಾಯಿಯ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ.

ಏನೇನೊ ನಡೆದಿಹವು ಮಾನುಷ್ಯ ಸಿದ್ಧಿಯಲಿ
ಯಾನಗಳು ಯಂತ್ರಗಳು ರಸ ನಿರ್ಮಿತಿಗಳು ಭಾನುಗೋಲಕ್ಕೇಣಿ ಕಟ್ಟಲೆಳಸುವ ನರನು
ತಾನಿಳಿಯುತನಿಹನೇಕೋ_ ಮರುಳ ಮುನಿಯ

ಸೂರ್ಯಮಂಡಲಕ್ಕೆ ಏಣಿ ಹಾಕಲು ಬಯಸುವ ಮನುಷ್ಯನು ತಾನು ಮಾತ್ರ ತನ್ನ ವಿಚಾರ ಬಾಂಧವ್ಯಗಳಲ್ಲಿ ಏಕೆ ಕೆಳಗಿಳಿಯುತ್ತಿದ್ದಾನೆ ಅರ್ಥವಾಗುತ್ತಿಲ್ಲ ಎಂಬ ಸಾಲುಗಳನ್ನು ನೆನಪಿಗೆ ತಂದದ್ದಂತೂ ನಿಜ. ಆದರೆ ಇಂಥ ಪರಿಸ್ಥಿತಿಗಳ ಪ್ರತಿಕೂಲತೆಯನ್ನು ಜನರಿಗೆ ತಲುಪಿಸುವ ಸಾಮರ್ಥ್ಯ ಲೇಖಕರಿಗಿದೆ . ತಂದೆ ತಾಯಿ ಮಗಳ ನಡುವಿನ ಬಾಂಧವ್ಯವನ್ನು ಕ್ಲಿಷ್ಟಗೊಳಿಸುವ ನಡೆಗಳು ದ್ವಂದ್ವಗಳು ಇನ್ನಿತರ ದೂರದ ಸಂಬಂಧಗಳಲ್ಲಿ ಉಂಟುಮಾಡುವ ಅಂತರ ಊಹಿಸಲಸದಳ .ಹಾಗಾಗಬಾರದೆಂಬ ಸದಾಶಯದ ಸಂದೇಶವನ್ನೊಳಗೊಂಡ ಈ ಸರಳ ಸುಂದರ ಕಾದಂಬರಿ ಅದಕ್ಕೆ ಇಷ್ಟವಾಯಿತು. ಮನಸ್ಸಿಗೆ ಆವರಿಸುವ ದುಗುಡಗಳನ್ನು ಕವಿಯುವ ಮಂಜಿಗೆ ಹೋಲಿಸಿ ಅದನ್ನು ಚದುರಿಸುವ ಹೂ ಬಿಸಿಲಿನ ಭರವಸೆಗೆ ಕಾಯುವ ಭಾವವಿದೆಯಲ್ಲಾ ಅದೇ ಕಾದಂಬರಿಯ ಜೀವಾಳ . ವ್ಯಾಕುಲ ಮನದ ಭಾರವನ್ನು ಹೂ ಗಿಡಗಳ ಆರೈಕೆಯಲ್ಲಿ ಮರೆಯುವ ವಾಸಂತಿಯವರು ತೋಟದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂರ್ತಿಯವರು ಮನಸ್ಸಿನಲ್ಲಿ ಉಳಿಯುವ ಪಾತ್ರಗಳು. ಚಿಕ್ಕ ಚೊಕ್ಕ ಸರಳ ನಿರೂಪಣೆಯ ಸಮರ್ಥ ಕಾದಂಬರಿ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

Leave a Reply

Back To Top