ಕಾವ್ಯ ಸಂಗಾತಿ
ಡಾ. ಪುಷ್ಪಾ ಶಲವಡಿಮಠ
ಒಲವು — ಚೆಲುವು
ನಾನು ಪ್ರಕೃತಿ
ನೀನು ಪುರುಷ
ನನಗೆ ನೀನು
ನಿನಗೆ ನಾನು
ಬದುಕೆಲ್ಲಾ
ಹಾಲು-ಜೇನು
ನಮ್ಮಿ ಬೆಸುಗೆಯೇ
ವಸುಂಧರೆಯೆದೆಗೆ
ಅರುಣರಾಗವು.
ನನ್ನ ಅಂದಕೆ
ನೀನು ಬೇಕು
ನಿನ್ನ ಶುಭ್ರಕೆ
ಜಗವೇ ಬೆಳಕು
ಬೆಳಕಿನೊಳಗಿನ
ಅರಿವು
ಪಯಣದ ಹಾದಿಗೆ
ಬುತ್ತಿಯು.
ನಿನಗಾಗಿ ನಾನು
ಅರಳಿನಿಂತೆ
ಮಧುವಿಗಾಗಿ ಹಂಬಲಿಸಿ
ನೀನು ಬಳಿ ಬಂದೆ
ನಿನ್ನ ಒಲವಿಗೆ
ನಾ ಬಿರಿದು ಒಲಿದೆ
ನಿನ್ನೆದೆ ಗೂಡಿನ ಹೂವಾದೆ
ಅನುರಾಗದ ಹಾಡಾದೆ.
ಒಲವೇ!
ನಿನ್ನೊಲವೇ ನನಗೆ ಬೇಕು
ನನಗದೇ ಗೆಲುವು
ನಿನ್ನಿಂದಲೇ ಬಾಳ ಬೆಳಕು
ಬದುಕಿಗದೇ ಚೆಲುವು
ಜಗವ ಬೆಳಗಿದೆ
ನಮ್ಮಿಬ್ಬರ ಒಲವು.
ನನ್ನ ಮನದಲಿ
ನಿನ್ನ ಹೆಸರಿದೆ
ನಿನ್ನ ಹೆಸರಲಿ
ನನ್ನ ಉಸಿರಿದೆ
ಉಸಿರು ಉಸಿರಿನ
ಕಂಪಿನಲಿ
ಸೃಷ್ಟಿಯ ಚೇತನವಿದೆ.
ನಾನು ಪ್ರಕೃತಿ
ನೀನು ಪುರುಷ
ನನಗೆ ನೀನು
ನಿನಗೆ ನಾನು
ಬದುಕೆಲ್ಲಾ
ಹಾಲು-ಜೇನು
ನಮ್ಮಿ ಬೆಸುಗೆಯೇ
ವಸುಂಧರೆಯೆದೆಗೆ
ಅರುಣರಾಗವು…….
ನಿಸರ್ಗ ತಾಯಿಯ ನೆನಪು
ಉತ್ತಮ ಕವನ
ಧನ್ಯವಾದಗಳು ಓದಿನ ಪ್ರೀತಿಗೆ