“ನನ್ನೊಳಗಿನ ನಾನು ಕವನಸಂಕಲನದಲ್ಲಿ ನಾನು ಮಿಂದಾಗ”

ಪುಸ್ತಕ ಸಂಗಾತಿ

ನನ್ನೊಳಗಿನ ನಾನು

ಕವನಸಂಕಲನದಲ್ಲಿ ನಾನು ಮಿಂದಾಗ

“ನನ್ನೊಳಗಿನ ನಾನು ಕವನಸಂಕಲನದಲ್ಲಿ
ನಾನು ಮಿಂದಾಗ”

ಕವಯತ್ರಿ:—ಪಾರ್ವತಿ ಎಸ್ ಬೂದೂರು.

ವಿಮರ್ಶಕರು:—ಅಭಿಜ್ಞಾ ಪಿ.ಎಮ್.ಗೌಡ

ಕವಿತೆಯೆಂದರೆ
ಮುಂಜಾನೆಯ ತುಷಾರನ
ಪರ್ಣದೊಳಗಿನ ಮಿಲನ
ಉದಯಿಸೊ ಇನನೊಳಗಿನ
ನಿಷ್ಟುರತೆ ,ಕಾರ್ಯತತ್ಪರತೆಯ ಪ್ರಗಾಥೆ
ಪ್ರೀತಿಯೊಳಗಣದ
ನಿಷ್ಕಲ್ಮಶ ನಿಸ್ವಾರ್ಥ ರೀತಿ
ಸದ್ವಿಕಾಶ ಸಂಚಾರದ ದ್ಯುತಿ
ಸಂಸ್ಕಾರದ ಸತ್ಕೃತಿಯ ಪ್ರಣತೆ….!
ಅಭಿಜ್ಞಾಗೌಡ

               ಈ ಒಂದು ಆಶಯದಲ್ಲಿ ಕವಯತ್ರಿ ಪಾರ್ವತಿ ಎಸ್.ಬೂದೂರುರವರ ಪ್ರತಿ ಕವಿತೆಗಳು ಸಹ ಓದುಗರ ಅಂತಃಪಟಲವನ್ನು ಮುಟ್ಟುವುದಂತು ನಿಶ್ಚಿತ.ಅಷ್ಟು ಮನಸೂರೆಗೊಳ್ಳುವಂತಹ ಕವನಗಳ ರಾಶಿ  "ನನ್ನೊಳಗಿನ ನಾನು ಕವನಸಂಕಲನ".ಹೀಗೆ ಪ್ರತಿ ಪುಟದಲ್ಲಿರುವ ಒಂದೊಂದು ಕವನಗಳು ಸಹ ಒಂದೊಂದು ಭಾವವನ್ನು ಬಿತ್ತರಿಸುತ ಓದುಗರೆದೆಯನು ತಲುಪಲು ಸಿದ್ಧವಾಗಿ ನಿಂತಿವೆ.

ಹಾಗಾಗಿ ‘ನನ್ನೊಳಗಿನ ನಾನು ಕವನಸಂಕಲನ’ವೆಂಬ ತೋಟದೊಳಗೆ ಭೇಟಿನೀಡಿ ಅವುಗಳೊಂದಿಗೆ ಮಾತಿಗಿಳಿದಾಗ ಗೋಚರಿಸಿದ ಕೆಲವು ವಿಚಾರಗಳೊಂದಿಗೆ ನಿಮ್ಮ ಮುಂದೆ….”ಕಾವ್ಯ ಎನ್ನುವುದು ಎಲ್ಲಾ ಜ್ಞಾನಗಳ ಆದಿ ಮತ್ತು ಅಂತ್ಯ”.ವೆಂದೆ ಹೇಳಬಹುದು.

ಮಾನವನ ಹೃದಯ ಎಷ್ಟು ಶುದ್ಧ, ಸ್ಪಷ್ಟವೋ.. ಕಾವ್ಯವೂ ಅಷ್ಟೇ ಸ್ಪಷ್ಟ ಹಾಗು ಅರ್ಥಪೂರ್ಣವೂ ಆಗಿದ್ದು ಓದುಗರ ಮನಸ್ಸಿಗೆ ರಸದೌತಣವನ್ನು ನೀಡುವುದು. ಇಲ್ಲಿ ಕವಿ ಮತ್ತು ವಿಜ್ಞಾನಿ ಇಬ್ಬರ ಜ್ಞಾನವೂ ಅದ್ವಿತೀಯ, ಅಮೋಘ,ಅದ್ಭುತ, ಅನನ್ಯವಾಗಿರುವುದು.ವಿಜ್ಞಾನಿ ಪ್ರತಿಯೊಂದನ್ನು
ಸಂಶೋಧನೆಯ ಮೂಲಕ ಸತ್ಯಾಸತ್ಯತೆಯನ್ನು ಹುಡುಕಲೊರಟವನು ಆದರೆ ಕವಿ ಒಂದು ಕವನ ಬರೆದರೆ ಸಾಕು ಅದರೊಳಗೆ ಇಡೀ ವಿಶ್ವದ ವಿಷಯಗಳು ಭಾಗಿಯಾಗುವಂತೆ ತೋರಿಸುವನು.ಕವಿಯು ಸಾಮಾನ್ಯ ವ್ಯಕ್ತಿಗಿಂತ ಯಾವುದೇ ಪ್ರಚೋದನೆ ಇಲ್ಲದೇ ಚಿಂತಿಸಬಲ್ಲ, ಆಲೋಚಿಸಬಲ್ಲ. ತನ್ನ ಭಾವನೆಗಳನ್ನು ಆಡುವ ಹಾಗೆಯೆ ಬರೆದು ಅಭಿವ್ಯಕ್ತಿಸುವ ಕಲೆ
ಹೊಂದಿರುತ್ತಾನೆ. ಈ ಚಿಂತನೆ-ಮಂಥನದ ಭಾವನೆ ಜನಸಾಮಾನ್ಯರದ್ದೇ ಆದರೂ ಕವಿಯು ಅದನ್ನು ವಿಶೇಷವಾಗಿ ,ವಿಶಿಷ್ಟ್ಯವಾಗಿ
ಅಭಿವ್ಯಕ್ತಿಸುತ್ತಾನೆ.

 ಈ ಮಾತುಗಳಿಗೆ ಸಾಕ್ಷಿಯಾಗಿ ಕವಯತ್ರಿಯು ಕೂಡ ತಮ್ಮ ಕವನಗಳಲ್ಲಿ ಅದ್ಭುತವಾದ ಭಾವಾಭಿವ್ಯಕ್ತಿಯನ್ನು ತೋರಿರುವರು.ಪ್ರತಿ  ಕವನಗಳಿಗೆ ಭಾವ ತುಂಬಿ ಬರೆದಿರುವುದನ್ನು ಗಮನಿಸಿದರೆ ಮತ್ತೊಮ್ಮೆ ಓದಬೇಕೆನಿಸಿದಂತು ಅಕ್ಷರಶಃ ಸತ್ಯ...
ಇಲ್ಲಿ ಕವಯತ್ರಿ ತಾವು ಬಳಸಿರುವ ತಮ್ಮ ಪದಪುಂಜಗಳ ಭಾವನಾತ್ಮಕ ಗುಣಗಳು,

ಅವುಗಳ ಬಂಧುರ ,ಅದರ ಹಿನ್ನೆಲೆ, ಸಂಗೀತದ ಮೌಲ್ಯ,ಹಾಗು ಸಂದೇಶ ಹೊತ್ತಂತಹ ಸಾಲುಗಳು, ಪ್ರತಿ ಪುಟದಲ್ಲಿನ ಅವುಗಳ ಪ್ರಾದೇಶಿಕ ಹಾಗೂ ನೈಜ ಸಂಬಂಧವನ್ನು ಪರಿಗಣಿಸಿಕೊಂಡು ಬರೆದಿರುವುದನ್ನು ಕಾಣಬಹುದಾಗಿದೆ.ಹಾಗೆಯೆ ಕವಯತ್ರಿಯು ಪದಪುಂಜಗಳ ಆಯ್ಕೆ ಮತ್ತು ರೂಪ ಎರಡರಲ್ಲೂ ಹೊಸತನದ ನವಿರಾದ ತಂಬೆಲರು ಸೋಕಿಸುವುದರ ಮೂಲಕ ತಮ್ಮ ಕವಿತೆಗಳಲ್ಲಿನ ಮಹತ್ವ ಸಾರಿರುವುದು ಇಲ್ಲಿ ಸ್ಪಷ್ಟವಾಗಿ ಅರಿವಾಗುವುದು.

                     ಕವಿತೆ ಸ್ಫುರಿಸುತ್ತವೆ ಹಾಗೂ ಸ್ಫೂರ್ತಿದಾಯಕವಾಗಿರುತ್ತವೆ ಎಂಬುದಕ್ಕೆ ಕವಯತ್ರಿಯ ಈ ಕವನ ಸಂಕಲನವೆ ಉತ್ತಮ ನಿದರ್ಶನವಾಗಿದೆ.ಇಲ್ಲಿಯ ಕವನಗಳು ನಿಜಕ್ಕೂ ವಿಶೇಷವಾಗಿದೆ.ಇಂತಹ ಬರಹಗಳು ವಿಶಿಷ್ಟವಾಗಿ ಓದುಗರಲ್ಲಿ ತೀವ್ರವಾದ ಭಾವನೆಯನ್ನು ಕೆರಳಿಸುತ್ತವೆ ಎಂದರೆ ತಪ್ಪಾಗಲಾರದು.ಇವರ ಕವನಗಳಲ್ಲಿನ ಭಾವನಾತ್ಮಕ ಅಂಶಗಳಾದ ಸಂತೋಷ, ದುಃಖ, ಕೋಪ, ಮತ್ಸರ, ಪ್ರೀತಿ, ಮೇಲು ,ಕೀಳು ,ಬಡವ, ಬಲ್ಲಿದ ,ನಗು ,ಅಳು, ಭಯ ,ನಿರ್ಭಯ ,ನಲಿವು, ಒಲವುಗಳ ದೊಡ್ಡ ಸಾಲುಗಳನ್ನು  ನೋಡಬಹುದಾಗಿದೆ.ಈ ಕವನಗಳನ್ನು  ಓದುಗರು ಓದಿದರೆ ನಿಜಕ್ಕೂ ಉತ್ತಮವಾಗಿ ಉದ್ಗರಿಸುವರು ಹಾಗೆಯೆ ಅಚ್ಚರಿಗೊಳಿಸುವಂತಹ ಸಾಮರ್ಥ್ಯವನ್ನು ಹೊಂದುವರು. ಅನುಭವ ಮತ್ತು ಅನುಭಾವಗಳ ಬಹಿರಂಗಪಡಿಸುವಿಕೆ, ಒಳನೋಟ ಹಾಗೂ ಸತ್ಯಾಸತ್ಯತೆಗಳ ತಿಳುವಳಿಕೆಯ ಬಗ್ಗೆ  ಇಲ್ಲಿ ಮಹತ್ವದ ಸಾಲುಗಳನ್ನು ಬಿತ್ತರಿಸಲಾಗಿದೆ.

  ನನ್ನೊಳಗಿನ ನಾನು ಕವನಸಂಕಲನದೊಳಗೆ ಪೂರ್ಣವಾಗಿ ಹೊಕ್ಕಿದಾಗ ನನ್ನ ಗಮನಕ್ಕೆ ಬಂದತಹ ಕೆಲವು ವಿಚಾರಗಳು ಸುಂದರವಾದ ಸೊಗಸಾದ ರಚನೆಗಳು ಮತ್ತು ಮುಖ್ಯವಾಗಿ ಓದುಗರ ಭಾವನೆಗಳನ್ನು ಸ್ಪರ್ಶಿಸಲು, ಕವಿಗಳು ತಮ್ಮ ಕಾವ್ಯದ ರೂಪುರೇಷೆಯನ್ನು ಅದ್ಭುತವಾಗಿ ಚಿತ್ರಿಸಬೇಕಾಗುತ್ತ ಆ ಕೆಲಸವನ್ನು ಕವಯತ್ರಿ ಸರಾಗವಾಗಿ ಬಳಸಿಕೊಂಡಿದ್ದಾರೆ ಹೇಗೆಂದರೆ ತಮ್ಮ ಕವನಗಳು ಪ್ರಭಾವಶಾಲಿ ಮತ್ತು ಆಸಕ್ತಿದಾಯಕವಾಗಿಸಲು ಕಾವ್ಯಾತ್ಮಕ ತಂತ್ರಗಳಾದ ಪ್ರಾಸಗಳು, ಲಯ ,ತಾಳ, ಬಳಸಿರುವ ಭಾಷೆಯ ಮೇಲಿನ ಹಿಡಿತ ಅದ್ಭುತವಾಗಿದೆ ಹಾಗೆಯೆ ಕವಿತೆಯಲ್ಲಿ ಕಲ್ಪನೆ, ಸಂದೇಶ,  ಸಂಬಂಧವನ್ನು ತಿಳಿಸಲು ಉಪಮಾನ ಉಪಮೇಯಗಳನ್ನು ಬಳಸಿರುವುದು ಸೂಕ್ತವಾಗಿವೆ. ಹೀಗೆ ಎಲ್ಲಾ ಕವಿತೆಗಳು ಒಂದೇ ರೀತಿಯ ತಂತ್ರ ಅಥವ ಧಾಟಿಯನ್ನು ಹೊಂದಿರದೆ ತಮ್ಮದೆ ಆದ ಸೊಗಡನ್ನು ಹೊಂದಿರುವುದು ನಿಜಕ್ಕೂ ಶ್ಲಾಘನೀಯವೆನಿಸಿದೆ. 

ಪಾರ್ವತಿ ಎಸ್ ಬೂದೂರುರವರ ಹೆಚ್ಚು ಕಡಿಮೆ ಎಲ್ಲಾ ಕವನಗಳನ್ನು ಓದಿದಾಗ ಓದುಗರಿಗಷ್ಟೆಯಲ್ಲ ಎಲ್ಲರಿಗೂ ಕೂಡ ಉತ್ತಮ ಸಂದೇಶ ನೀಡುವ ಕವನಗಳಾಗಿವೆ.ಪ್ರತಿಯೊಂದು ಬರಹಗಳು ಸಹ ಅತ್ಯಂತ ಸಾರಯುಕ್ತ ಹಾಗು ಅರ್ಥಪೂರ್ಣ ಪದಲಾಲಿತ್ಯಗಳಿಂದ ಶೋಭಿಸಿವೆ.

ಕವಯತ್ರಿಯ ಕೆಲವು ಕವನಗಳು…..

“ಗುರುಭಕ್ತಿ”…

ಗುರು ಎನ್ನುವ ಪದದಿ ಅಡಗಿದೆ
ಬೆಳಕ ಹರಡೊ ಆರತಿ
ಎದೆಯ ಕತ್ತಲೆಗೆ ಅಕ್ಷರ ದೀಪ
ಸದ್ಗುರು ಹೊತ್ತಿಸಿದ ಜ್ಯೋತಿ..

ಗುರುಬ್ರಹ್ಮ ಗುರುವಿಷ್ಣು ಗುರುದೇವನನ್ನು
ಅವನ ಮಹತ್ವದ ಅರಿವನ್ನು ಅದ್ಭುತವಾಗಿ ತಮ್ಮ ಸಾಲುಗಳಲ್ಲಿ ಬಿಂಬಿಸಿರುವರು.
ಗುಣಾಗುಣಗಳ ಹೊತ್ತುನಿಂತಿಹ ಗುರುವಿನ

ಗುಣಾಜ್ಞಾಗಳು ಹಾಗೆ ಕತ್ತಲೆಂಬ ತಮವನ್ನು ಹೋಗಲಾಡಿಸಿ ಸುಜ್ಞಾನದ ದೀವಿಗೆಯನ್ನು ಬೆಳಗಿ ಮನ ಮನೆಗಳನ್ನು ಪ್ರಜ್ವಲಿಸುವ ಪರಿ ಸೊಗಸಾಗಿ ಮೂಡಿಬಂದಿದೆ..ಗುರುವೆಂಬ ಪದದೊಳಗೆ ಅಡಗಿರುವ ಬೆಳಕೆಂಬ ಜ್ಞಾನದ ಆರತಿಯ ಕೀರ್ತಿಯನ್ನು ಕೊಂಡಾಡಿದ್ದಾರೆ.ಇಲ್ಲಿ ಕವಯತ್ರಿಯ ಗುರುಭಕ್ತಿ ಹಾಗು ಅಂತಚಕ್ಷುವಿನ ಅರಿವು ಎದ್ದು ಕಾಣುತಿದೆ..

ಮತ್ತೊಂದು ಕವಿತೆ…..

“ಅನ್ನದಾತ”
ಸಾಲಶೂಲವ ಮಾಡಿ
ಕೊಳವೆ ಬಾವಿಯ ತೋಡಿ
ನೀರಾಯಿಸಿ ನಿಟ್ಟುಸಿರು ಬಿಡುವ
ಮುನ್ನವೆ ಸುರಿದೀತೊ ಬಿರುಮಳೆ…

ಅನ್ನದಾತನ ಬಗ್ಗೆ ಬರೆದಿರುವ ಸಾಲುಗಳು ನಿಜಕ್ಕೂ ಮನಕಲಕುವ ಸಾಲುಗಳಿವು.ಮೊದಲೆ ಹೇಳುವರು “ಭಾರತದ ಬೇಸಾಯ ಮಳೆಯೊಂದಿಗಿನ ಜೂಜಾಟವಿದ್ದಂತೆ” ಕಾರಣ
“ಕಾಲಾಯಾ ತಸ್ಮೈ ನಮಃ” ಬದಲಾವಣೆ ಜಗದ ನಿಯಮ.. ಕಾಲಕ್ಕೆ ತಕ್ಕಂತೆ ಯಾವುದು ಸರಿಯಾಗಿ ಆಗುತ್ತಿಲ್ಲ ಮಳೆ, ಬೆಳೆ ಎಲ್ಲವೂ ಅದಲು ,ಬದಲು.ಪಾಪ.! ರೈತ ಮಳೆಯನ್ನೆ ನಂಬಿ ವ್ಯವಸಾಯ ಮಾಡುವವನು.ಮಳೆಗಾಲದಲ್ಲಿ ಮಳೆಯಿಲ್ಲ, ಬೆಳೆಬಂದಾಗ ಮಳೆಯಿಲ್ಲ.ಇದು ಮಳೆಯ ಕಾಯಕವಾಗಿದೆ.ಬೆಳೆಗೆ ಸರಿಯಾಗಿ ಮಳೆಯಿಲ್ಲದೆ ರೈತ ಕಂಗಾಲಾಗಿ ಭೂತಾಯಿಯ ಹಸನು ಮಾಡಿ ,ಕೊಳವೆ ಬಾವಿ ತೆಗೆಸಿ ಬೆಳೆಯಲು ಹೊರಟರೆ ಸುಖಾ ಸುಮ್ಮನೆ ಮಳೆ ಬಂದು ಹಾಳು ಮಾಡುವುದು.ಮಗದೊಮ್ಮೆ ಬೆಳೆದ ಬೆಳೆಗಳಿಗೆ ಸರಿಯಾಗಿ ಮಳೆಯಿಲ್ಲದೆ ಬಿಸಿಲಿಗೆ ಎಲ್ಲವೂ ಒಣಗಿ ನಾಶವಾಗುವವು.ಹೀಗಾದರೆ ರೈತ ಸಾಲ ಮಾಡದೆ ಬೇರೆ ದಾರಿಯೆ ಇಲ್ಲ.ಈ ಕಡೆ ಸಾಲ ಮಾಡಿ ವ್ಯವಸಾಯ ಮಾಡಲು ಆಗದೆ ಮತ್ತೊಂದೆಡೆ ಮಳೆಯಿಲ್ಲದೆ ಮಾಡಿದ ಸಾಲ ತೀರಿಸಲಾಗದೆ ಪ್ರಾಣತ್ಯಾಗ ಮಾಡುತಿರುವ ರೈತರ ಬೇಗುದಿಗಳು ,ನೋವು ,ದುಗುಡ .ಅಬ್ಬಬ್ಬಾ.! ಅವನ ಕಷ್ಟ ಹೇಳತೀರಲಾಗದು.’ರೈತ ದೇಶದ ಬೆನ್ನೆಲುಬು’. ‘ಜಗದ ಹಸಿವ ನೀಗಿಸುವವನು.’
ಆದರೂ ಅವನ ಗೋಳು ಕೇಳುವವರಿಲ್ಲದೆ ಪ್ರಾಣಬಿಡುತ್ತಿರುವನು ಎಂಬುದನ್ನ ತುಂಬಾ ಚನ್ನಾಗಿ ತಮ್ಮ ಸಾಲುಗಳಲ್ಲಿ ಬಿಂಬಿಸಿದ್ದಾರೆ.

“ಬೆಳೆವ ಸಿರಿ”…..

        "ಮೊದಲ ಶಾಲೆ ಮನೆಯಲ್ಲವೆ
        ಜನನಿಯಾದಳು ಆದಿಗುರುವೆ
        ತಿದ್ದಿತೀಡಿ ಮರಳಿ ಬರೆದ ಅಕ್ಷರ
        ಸ್ಮೃತಿ ಪಟಲದಿ ಅಜರಾಮರ"

“ಮನೆಯೆ ಮೊದಲ ಪಾಠಶಾಲೆ ತಾಯಿ ಮೊದಲ ಗುರು” ಅಕ್ಷರಶಃ ಸತ್ಯ.ಮೊದಲ ತೊದಲು ನುಡಿಗಳ ಕಲಿಕೆಯ ಶಾಲೆಯೆ ಮನೆ.ಅಮ್ಮ ಅಪ್ಪ ಅಕ್ಕ ಅಣ್ಣ ಹೀಗೆ ಮಾತುಕಲಿಸಿದ ಶಾಲೆ ಮನೆ ಹಾಗೆಯೆ ಮೌಲ್ಯಗಳನ್ನು ಧಾರೆ ಎರೆದು ಬೆಳೆಸೊ ತಾಯಿ ಮೊದಲ ಗುರುವು.ಈ ಪದ್ಯದಲ್ಲಿ ಮೂಡಿ ಬಂದಿರುವ ಎಲ್ಲಾ ಸಾಲುಗಳು ಅದ್ಭುತವಾಗಿ ಮೂಡಿಬಂದಿವೆ.ಹೆಣ್ಣು ಮೊದಲು ಮನೆಯ ಮಗಳಾಗಿ ಸ್ನೇಹಿತೆಯಾಗಿ ಅಕ್ಕನಾಗಿ ತಂಗಿಯಾಗಿ ಮಡದಿಯಾಗಿ ತಾಯಿಯಾಗಿ ಅಜ್ಜಿಯಾಗಿ ಎಲ್ಲಾ ಹಂತಗಳಲ್ಲೂ ಸಹ ಅವಳೊಬ್ಬ ಸದ್ಗುರುವೆ,
ಪ್ರತಿಹಂತದಲ್ಲೂ ಮಕ್ಕಳನ್ನು ತಿದ್ದಿ ತೀಡಿ ಬೆಳೆಸುವ ಪರಿಯುಳ್ಳವಳು ಇಂತಹ ಗುರುವಾದ ತಾಯಿಯ ಅರಿವಿನ ಬಗ್ಗೆ ಅರುಹಿದ ಕವಯತ್ರಿಯ ನಿಪುಣತೆ ಚಂದವಿದೆ.

“ನೀರವತೆ”….
“ನಿನ್ನ ಮೌನಕೆ ಕದಡಿದೆ
ಎದೆ ಬಗೆದು ನೀರವತೆ
ಹಂಚಿಕೊ ಬೇಗನೆ
ಹುದುಗಿರುವ ಭಾವನೆ”

ನಮ್ಮ ಮನಸ್ಸೇನಾದರು ಕೊಂಚ ಹಾದಿ ತಪ್ಪಿದರು ಕೂಡ ನೀರವತೆಯ ರಣರಂಗ ಸದಾ ಬೆನ್ನತ್ತಿ ಕೂತು ನಮ್ಮ ನರನಾಡಿಯಲ್ಲಿ ಕಂಪಿಸುವುದು.
ಹೀಗೆ ನೀರವತೆಯೆಂಬ ಮೌನ ಆವರಿಸಿದಾಗ ಮನದಲ್ಲಾಗುವ ಭಾವನೆಯನ್ನು ತಮ್ಮ ಸಾಲುಗಳಲ್ಲಿ ಸೊಗಸಾಗಿ ಬಿಂಬಿಸಿದ್ದಾರೆ.
ಆಂತರ್ಯದ ದುಃಖ ದುಮ್ಮಾನಗಳನ್ನು ಹಂಚಿಕೊಂಡು ಮನವನ್ನು ನಿರಾಳವಾಗಿಸಿಕೊಳ್ಳಬೇಕು.ಎಂಬುದರ ಅರ್ಥವನ್ನು ನೀಡುತಿರುವ ಈ ಸಾಲುಗಳು ಚಂದವಾಗಿವೆ. ನೀರವತೆ ಆವರಿಸಿದಾಗ ಮನದೊಡಲು ನಿಶ್ಯಬ್ಧತೆಯಿಂದ ಕೂಡಿರುವ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

“ತಿರುವು”…..

 "ಪರೋಪಕಾರವೊಂದೆ ಚಿರವಾಗಿದೆ
  ನಾವು ಅಳಿದರು ಧರೆಯಲಿ
  ನಿಸ್ವಾರ್ಥದ ಮುದವಿರಿಸಿದೆ
  ನೀ ತೋರಿದ ದಾರಿ ಅಂತಿಮ ವಿದಾಯದಲಿ"

ಬಾಳೊಂದು ಸುಂದರ ಯಾನ ಇದರೊಳಗೆ ಸಾಗುತ್ತಿರುವ ನಾವೆಲ್ಲರೂ ಕೂಡ ಹಲವಾರು ತಿರುವುಗಳ ಮೂಲಕ ಸಾಗಬೇಕು.ಪ್ರತಿಯೊಂದು ಹಂತವು ಕೂಡ ಅನುಭವ ,ಅನುಭಾವಗಳ ಪಡೆದುಕೊಂಡು ಹಾಗು ರೂಢಿಸಿಕೊಂಡು ಸಾಗಬೇಕಾಗುವುದು.ಇಂತಹ ಒಂದು ಯಾನದಲ್ಲಿ ನಮ್ಮ ಬದುಕು ನಿಸ್ವಾರ್ಥತೆಯಿಂದ ಕೂಡಿರಬೇಕು ಆಗಿದ್ದಾಗ ಮಾತ್ರ ನಾವು ನಮ್ಮ ಬದುಕಿನ ಸಾರ್ಥಕತೆಯನ್ನು ಕಾಣಲು ಸಾಧ್ಯ.ಬದುಕಿದ್ದಷ್ಟು ದಿನ ನಮ್ಮ ಕೈಲಾದಷ್ಟು ಮಟ್ಟಿಗೆ ಪರೋಪಕಾರವನ್ನು ಮಾಡುತ್ತ ನಮ್ಮ ಬದುಕಿಗೊಂದು ಅರ್ಥ ಬರುವಂತೆ ಬಾಳಬೇಕು.ಹಾಗೆಯೆ ನಾವು ಅಳಿದರು ಕೂಡ ನಮ್ಮ ನಡೆ ,ನುಡಿ ,ಕೃತ್ಯಗಳು ,ಆದರ್ಶಗಳು ಜೀವಂತವಾಗಿರಬೇಕು.ಹೀಗೆಯೆ ಬದುಕುಬೇಕೆಂದು ಹೇಳಿರುವ ಕವಯತ್ರಿಯ ಈ ಸಾಲುಗಳು ತುಂಬಾ ಸೊಗಸಾಗಿ ಮೂಡಿಬಂದಿವೆ.

ಹೀಗೆ ಕವಯತ್ರಿಯು ಇಲ್ಲಿ ಒಟ್ಟು ೮೨ ಕವನಗಳಲ್ಲು ಹಲವಾರು ಅಂಶಗಳು, ಘಟನೆಗಳು ಹಾಗು ಪ್ರಸ್ತುತ ವಿಚಾರಧಾರೆಗಳಿಗೆ ತಮ್ಮ ಕವನಗಳಲ್ಲಿ ಕೈಚಳಕವನ್ನು ತೋರಿರುವುದು ಶ್ಲಾಘನೀಯವಾಗಿದೆ. ಕವಯತ್ರಿಯು ವಿಚಾರಪರತೆಯ ಅಡಿಯಲ್ಲಿ ಮಹಿಳೆಯೆಂಬ ಸಾದ್ವಿಯೊಂದಿಗೆ ಆರಂಭಿಸಿ, ಹೆತ್ತೊಡಲು, ಹೆಣ್ಣಿನೊಡಲ ಸಂಕಟಗಳ ಪರಿ ,ವೀಣೆಯ ನಾದವನು ಉಣಬಡಿಸಿ ,
ಬೆಳದಿಂಗಳ ಬಾಲೆ ಹೆಣ್ಣನ್ನು ವರ್ಣಿಸುತ, ನಮ್ಮ ಸಂಸ್ಕೃತಿ ,ಸಂಸ್ಕಾರ ಒಲವು, ಚೆಲುವುಗಳ ಒರತೆ, ನಲ್ಲ ,ನಲ್ಲೆಯ ಸಂಭಾಷಣೆ ,ಸಂಪ್ರೀತಿಯ ಸಂವೇದನೆ ,ಸಾಂಗತ್ಯದ ಸಿಂಚನ, ನಂಬಿಕೆ ,
ವಿಶ್ವಾಸಗಳ ಮೆಟ್ಟಿಲತ್ತಿ ಕಾರ್ಯತತ್ಪರತೆಯೊಳಗೆ ಸತ್ಯದ ಪರಾಕಾಷ್ಟೆಯನ್ನು ವಿಜೃಂಭಿಸಿರುವ ರೀತಿ ಸೊಗಸಾಗಿದೆ .ಸಮಯ, ಯೋಗಗಳ ಬಗ್ಗೆ
ಬಿಂಬಿಸುತ.ಪ್ರಾಮಾಣಿಕತೆಗೆ ಮೆರಗು ತಂದು ಸರಳತೆ ,ಗುರುಭಕ್ತಿ ,ಸ್ನೇಹ, ಸಹವಾಸ, ಪುರಸ್ಕಾರಗಳನ್ನು ಮೆರೆಸಿದ್ದಾರೆ.ಮೌಲ್ಯಗಳು,
ಸಹನೆ ,ಆದರ್ಶ ,ಸತ್ಯ, ನಿಷ್ಟೆ, ಭಕ್ತಿಭಾವದೊಂದಿಗೆ ತಮ್ಮ ಬರಹದ ಛಾಪನ್ನು ಮೂಡಿಸಿದ್ದಾರೆ. ಮಾನವೀಯತೆಯ ಸೂರಿನಡಿ ಸ್ನೇಹ ,ಪ್ರೀತಿ ,
ವಿಶ್ವಾಸ,ಕಾಳಜಿಯ ಬಂಧಗಳನ್ನು ಮೇಳೈಸುತ್ತ,ಸಾಮಾಜಿಕ ವಿಷಯಗಳಾದ ಬಾಲ್ಯವಿವಾಹದ ಬಗ್ಗೆ ಕಿವಿಮಾತೇಳಿ ಕಾರ್ಮಿಕರ ನೋವು, ದುಃಖ ,ದುಮ್ಮಾನಗಳ ತೋರುತ್ತ, ಮುನ್ನುಡಿಯನು ಬರೆದು ,ತೊಟ್ಟಿಲ ಕಂದನ ತೂಗಿ, ಯಶಸ್ಸಿನ ಹಾದಿಯೊಳಗೆ ಭಕ್ತಿ ಸಿಂಚನವನ್ನು ಹಾಯಿಸಿ ಮೌನ ರೋಧನ ವಿಸ್ಮಯದೊಂದಿಗೆ ಮಂದಹಾಸ ಬೀರಿ ಮಾಯ ಕನ್ನಡಿಯೊಂದಿಗೆ ಮುಕ್ತಾಯವಾಗಿದೆ. ಹೀಗೆ ಇಲ್ಲಿ ಕವಯತ್ರಿಯ ಜಾಣ್ಮೆ, ಸಹನೆ, ಪದಪುಂಜಗಳ ಬಳಕೆ ಭಾಷೆಯ ಮೇಲಿನ ಹಿಡಿತ ಎಲ್ಲವೂ ತುಂಬಾ ಚನ್ನಾಗಿ ಲಾಲಿತ್ಯಪೂರ್ಣವಾಗಿ ಮೂಡಿಬಂದಿವೆ.ಹಾಗು ಇಲ್ಲಿರುವ ಹೆಚ್ಚು ಕಡಿಮೆ ಕವನಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ.
ಹಲವಾರು ವಿಭಿನ್ನ ಕವನಗಳನ್ನೂ ಹೊತ್ತು ತಂದಿರುವ ನನ್ನೊಳಗಿನ ನಾನು ಕವನಸಂಕಲನ ನಿಜಕ್ಕೂ ಸೊಗಸಾಗಿದೆ.ಕವಯತ್ರಿಯ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಯಲ್ಲಿ ಮತ್ತಷ್ಟು ಹೊಸತನ ಹೊತ್ತು ತರಲೆಂದು ಆಶಿಸುವೆ…

             ಈ ಒಂದು ಕೃತಿಗೆ ಅಮೋಘವಾಗಿ ಮುನ್ನುಡಿಯನ್ನು ಬರೆದಿರುವಂತಹ ಮಹಿಪಾಲರೆಡ್ಡಿ ಮುನ್ನೂರ್ ಸರ್ .ಹಾಗೆ ಬೆನ್ನುಡಿಯನ್ನು ವೀರಣ್ಣ ಕಲಕೇರಿ ಸರ್ ಬರೆದಿದ್ದು

ಮತ್ತು ಷ.ಬ್ರ ಶ್ರೀಗುರು ಮಡಿವಾಳೇಶ್ವ ಶಿವಾಚಾರ್ಯರ ಶುಭಾಶಿರ್ವಾದಗಳು.
ಡಾ.ಯಂಕನಗೌಡ.ಎಸ್.ಪಾಟೀಲ್ ಮಾಲಹಳ್ಳಿ ಶುಭನುಡಿ ಹಾಗು ಸಿದ್ಧಪ್ಪ ಹೊಟ್ಟಿಯವರ ಸದಾಶಯ ಈ ಕೃತಿಗೆ ಶೋಭೆತರುತಿವೆ..

   ಕವಯತ್ರಿರವರ ಪ್ರತಿಭೆ ,ಸೃಜನಶೀಲತೆ ಈ ಕೃತಿಯಲ್ಲಿ ತುಂಬ ಸೊಗಸಾಗಿ ಪ್ರತಿಬಿಂಬವಾಗಿ ಮೂಡಿ ಬಂದಿದೆ. ಇವರ ಕವನ ರಚನಾ ಕೌಶಲ್ಯ ಮತ್ತಷ್ಟು ಹೆಚ್ಚಲಿ. ಸೃಜನಶೀಲ ಗುಣ ಬೆಳೆಯುತ್ತಲೇ ಸಾಗಲಿ ಎಂದು ಹಾರೈಸುತ್ತಾ. ಸಾಹಿತ್ಯ ಪ್ರಿಯರು ಈ ಸಂಕಲನವನ್ನು ಪ್ರೀತಿಯಿಂದ ಓದುತ್ತಾರೆಂಬ ಭರವಸೆಯೊಂದಿಗೆ...ಶುಭಹಾರೈಸುವೆ...
---------------------------------

ಅಭಿಜ್ಞಾ .ಪಿ.ಎಮ್.ಗೌಡ

Leave a Reply

Back To Top