ಕಾವ್ಯ ಸಂಗಾತಿ
ಎಲ್ಲ ಮರೆತು
ಸುಜಾತ ಹೆಬ್ಬಾಳದ(ಸುಗ್ಗಿ)
ನಿನ್ನ ತೊರೆದು ಹೊರಟೆ
ಮರೆಯಲು ನಿನ್ನೆಲ್ಲ ನೆನಪುಗಳ ಬುಡಸಮೇತ
ಹುಡುಕುತ ಜಾಗ ಅಜ್ಞಾತ ಅಪರಿಚಿತ
ಮರೆವ ವಿಧಾನವೆಂತು ಈ ಬೇರುಬಿಟ್ಟ ನೆನಪು , ಪಿಸುಮಾತು, ಹುಸಿಮುನಿಸು ,
ನಗುವಿನ ಅಲೆ , ಆ ನಿನ್ನ ನಟಿಸುವ ಕಲೆ
ತುಸು ಮೌನ, ನಿನ್ನದೇ ಧ್ಯಾನ
ಆ ಪ್ರೀತಿಯ ಆಲಿಂಗನ
ನೀ ರೆಕ್ಕೆಕಟ್ಟಿ ಹಾರಿಸಿದ ಕನಸುಗಳ ಗಾಳಿಪಟ
ನಮ್ಮಿಬ್ಬರ ಒಂದಾಗಿಸಿದ ಆ ಒಲವಿನ ಪುಟ
ನೀ ಕೊಟ್ಟ ನಿಶಾನೆ , ಸೂಚನೆ ಪಲ್ಗುಟ್ಟಿ ಬಾನಲಿ ಆಡಿದ ತಮಾಷೆಯಾಟ
ಮುಖದಿ ಮಾಸದ ನಿನ್ನ ನಗುವಿನ ಸಿಂಚನ
ಹೀಗೇಕೆ ನನ್ನ ತುಟಿಯ ಬಳಿಯೇ ಕೂತು
ಕಾಡಿದೆ ಮನಸನ್ನ
ನೀ ಕೊಟ್ಟು ಮರೆತ ಸವಿಮುತ್ತಿನ ಮಾಲೆ
ರಂಗೇರಿಸುತ್ತಿದೆ ಕೆನ್ನೆ ಮೇಲೆ
ಗಲ್ಲದ ಮೇಲೆ ನೀನೇ ಇಟ್ಟಂತಿರುವ ದೃಷ್ಟಿಬೊಟ್ಟು
ಹಠ ಹಿಡಿದು ಕೂತಿದೆ
ನಮ್ಮ ಜಗಳಕೆ ಟೂ ಬಿಟ್ಟು
ಕಣ್ಣು ಕೂಡ ಕಪ್ಪು ಧರಿಸಿ
ಧರಣಿ ಮಾಡುತ್ತಿರುವ ರೀತಿ ಕಸಿವಿಸಿ
ಬಾಚಿದ ಮುಂಗುರುಳು ಜೀಕೆ ಜೋಕಾಲಿ
ಪದೇ ಪದೇ ತರುತಿದೆ ನಿನ್ನದೇ ಖಯಾಲಿ
ಈ ಬೆರಳುಗಳ ಹೇಗೆ ತಡೆಯಲಿ ಗೆಳೆಯಾ
ಬರುವ ಸಂದೇಶಗಳಲ್ಲಿ ಬರೀ ನಿನ್ನನೇ ಹುಡುಕುವ ಪರಿಯ
ಸಾಕಾಗಿದೆ ಈ ಮೌನದ ಯುದ್ಧದ ಘೋಷಣೆ
ಕವಿತೆಯಾಗಿ ಹರಿದುಬಿಡು ನನ್ನೊಳಗೆ
ಎಲ್ಲ ಮರೆಯುತ ಒಂದಾಗುವೆ ನಿನ್ನಾಣೆ