ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ತಾಳ್ಮೆಯ ಸೆಲೆ

Explosioncolored powder

ಜೀವನದಲ್ಲಿ ನಾವು ಬಯಸಿದ್ದನ್ನು ಪಡೆಯಲು ಸತತ ಪರಿಶ್ರಮ,ಇಚ್ಛಾಶಕ್ತಿ ಹಾಗೂ ತಾಳ್ಮೆ ಈ ಮೂರು ಗುಣಗಳು ಮುಖ್ಯವಾಗಿ ಬೇಕೇಬೇಕು.

ಮನೋವಿಜ್ಞಾನದ ಸಿದ್ಧಾಂತದ ಪ್ರಕಾರ ಇಚ್ಛಾಶಕ್ತಿ ಜಾಗೃತವಾಗಿ ಪದೇ ಪದೇ ಏನನ್ನಾದರೂ ಸಾಧಿಸಬಯಸಿದರೆ ಶೀಘ್ರದಲ್ಲಿಯೇ ಅದನ್ನು ಪಡೆಯುವವರೆಗೂ ನಿರಂತರ ಕ್ರಿಯಾಶೀಲವಾಗುತ್ತದೆ.ಒಮ್ಮೆ ಸೂಪ್ತ ಮನಸ್ಸಿನಲ್ಲಿ ಒಂದು ವಿಷಯ ಅಚ್ಚಾದರೆ ಎಂದು ಅಳಿಯುವದಿಲ್ಲ.ಒಂದು ವೇಳೆ ನಿರೀಕ್ಷೆಯಂತಾದೇ ಫಯಸಿದ ಪ್ರತಿಫಲ ದೊರೆಯದಾದಾಗ ಭ್ರಮ ನಿರಸನವಾದಂತಾಗಿ ಮನಕೆ ಬೇಸರವಾಗಿ ನನ್ನ ವೇಳೆಯಲ್ಲ ವ್ಯರ್ಥವಾಯಿತು ಎಂದು ಹಲುಬುತ್ತೇವೆ.ಕೊಂಚ ನಿರಾಳವಾಗಿ ಯೋಚಿಸಿ ಎಲ್ಲಿ ಇನ್ನು ಹೆಚ್ಚಿನ ಪ್ರಯತ್ನವಾಗಬೇಕಿದೆ?ಎಂದು ಸಿಂಹಾವಲೋಕನ ಮಾಡಿಕೊಳ್ಳದೇ ತಾಳ್ಮೆಯನ್ನು ಕಳೆದುಕೊಂಡು ಆಕಾಶವೇ ತಲೆ ಮೇಲೆ ಬಿದ್ದಂತೆ ವರ್ತಿಸುತ್ತೇವೆ.ನಿಜ ತಾಳ್ಮೆಯು ನಮ್ಮ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ. ‘ಮರಳಿ ಯತ್ನವ ಮಾಡು ‘ಎಂಬಂತೆ ನಿರಂತರ ಪ್ರಯತ್ನ ಮಾಡುತ್ತಲೇ ಇರಬೇಕು.
ತಾಳ್ಮೆಯು ಆಶಾವಾದವನ್ನು ಹುಟ್ಟು ಹಾಕುತ್ತದೆ.ಓದಿನಲ್ಲಿ ಸಾಧಾರಣವಾಗಿದ್ದ ರಾಜುವಿಗೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನ ತಂದೆ ಗಣಿತ ವಿಷಯದಲ್ಲಿ ಹಿಂದೆ ಇದ್ದ ಅವನನ್ನು 9ನೇ ತರಗತಿ ಮುಗಿದ ಮೇಲೆ ಕೋಚಿಂಗ ಕ್ಲಾಸಿಗೆ ಸೇರಿಸಿದರು. ಅದನ್ನು ಮುಗಿಸಿ ಬಂದ ನಂತರ 10ನೇ ತರಗತಿಗೆ ಪ್ರತಿದಿನ ಸಂಜೆ ಟ್ಯೂಷನ್ ಸಾಲದೆಂಬಂತೆ ಅವನ ತಾಯಿ ನಸುಕಿನಲ್ಲಿ ಎಬ್ಬಿಸಿ ಓದಲು ಕೂರಿಸುತ್ತಿದ್ದಳು.ಪರೀಕ್ಷೆಗೆ ಎರಡು ದಿನಗಳಿರುವಾಗ ರಾಜುವಿಗೆ ಜ್ವರ ಬಂತು.ಅವನ ತಂದೆತಾಯಿಗಳಿಗೆ ಮಗನ ಜೀವನ ಮುಗಿದೇ ಹೋಯಿತು ಇವನು ಹೇಗೆ ಪರೀಕ್ಷೆ ಬರೆಯುವ?ಎಂಬ ಗೊಂದಲ.ಆಸ್ಪತ್ರೆಗೆ ಕರೆದುಕೊಂಡು ಹೋದರು.
ಆದರೂ ಪರೀಕ್ಷೆ ಬರೆದ ಪಾಸಾದ.’ನಾನು ಎಷ್ಟೆಲ್ಲ ಖರ್ಚು ಮಾಡಿದ್ದೆ,ಕೇವಲ 55% ಮಾಡಿದ್ದಾನೆ ಎಲ್ಲ ನಮ್ಮ ಕರ್ಮ ‘ಎಂದು ಮಗನ ಕುರಿತು ಬೇಸರದ ನುಡಿಗಳನ್ನಾಡಿದರು ಮುಂದುವರೆದು ‘ನಮಗೆ ಇವನೊಬ್ಬನೇ ಮುಂದಿನ ಭವಿಷ್ಯ ಹೇಗೆ? ಕೊನೆ ಪಕ್ಷ ಚಿಕ್ಕ ಸರಕಾರಿ ನೌಕರಿ ಮಾಡಿದರೆ ಚನ್ನಾಗಿತ್ತು ಇವನು ಈಗಲೇ ಹೀಗೆ ಮಾಡಿದ ಮುಂದೆ ಏನು ಕಲಿಯುತ್ತಾನೋ ?’ಎಂದು ತಮ್ಮ ತಾಳ್ಮೆಯನ್ನು ಮಗನ ಮೇಲಿನ ನಂಬಿಕೆಯನ್ನು ಕಳೆದುಕೊಂಡು ಗೋಳಾಡುವ ಪೋಷಕರು ಅವನು ಅನುತ್ತೀರ್ಣನಾಗಲಿಲ್ಲವಲ್ಲ,ಮೇಲಾಗಿ ಅವನಿಗೆ ಪರೀಕ್ಷೆ ಮುನ್ನಾದಿನ ಹುಷಾರಿರಲಿಲ್ಲ ಎಂಬ ಧನಾತ್ಮಕ ವಿಚಾರವನ್ನು ಮಾಡಬೇಕು. ಮುಂದಿನ ಕಲಿಕೆಗೆ ತಾಳ್ಮೆಯಿಂದ ಮಕ್ಕಳಿಗೆ ಭವಿಷ್ಯದ ಗುರಿಯ ಕುರಿತು ಪ್ರೀತಿ ವಿಶ್ವಾಸದಿಂದ ತಿಳಿಹೇಳಬೇಕು.

Abstracts background


ನೆಟ್ಟ ಸಸಿಗೆ ಗೊಬ್ಬರವನ್ನು ಚೆನ್ನಾಗಿ ಹಾಕಿರಬಹುದು,ನೀರನ್ನೂ ಕಾಲಕಾಲದಲ್ಲಿ ಎರೆದು ಸುತ್ತ ಬೇಲಿ ಕಟ್ಟಿ ಚನ್ನಾಗಿ ರಕ್ಷಿಸಬಹುದು.ಆದರೆ ಬೇಗನೆ ಫಲ ಕೊಡುವಂತೆ ಸಸಿಯನ್ನು ಅವಸರಪಡಿಸಲು ಸಾಧ್ಯವಿಲ್ಲ.ಬೇಗನೆ ಫಲ ಕೊಡುವ ಸಸಿಯನ್ನು ನೆಟ್ಟಿದ್ದರೂ ಅದು ಗೊತ್ತಾದ ಸಮಯದಲ್ಲೇ ಫಲ ನೀಡುತ್ತದೆ.ಫಲ ಬರುವವರೆಗೆ ಶಾಂತ ಚಿತ್ತರಾಗಿರುವ ತಾಳ್ಮೆಯನ್ನು ಪೋಷಕರು ಮೈಗೂಡಿಸಿಕೊಳ್ಳಲೇಬೇಕು.
ಪಾವಲೊವ್ ಹೇಳುವಂತೆ’ಯಾವುದೇ ಕ್ಷೇತ್ರದಲ್ಲಿ ಯಾವುದೇ ವಿಷಯದಲ್ಲಿ ದಕ್ಷತೆ ಅಥವಾ ಉನ್ನತಮಟ್ಟದ ಸಿದ್ದಿ ಪಡೆಯಲು ಆ ವಿಷಯದಲ್ಲಿ ಪ್ರೀತಿ,ಸಾಧನೆಯಲ್ಲಿ ನಿಧಾನವೇ ಪ್ರಧಾನವೆನ್ನುವಂತೆ ಮುನ್ನಡೆಯಲು ತಾಳ್ಮೆ ಬೇಕು.
ಅಂತರಾಳದಲ್ಲಿ ಅದಮ್ಯ ಶಕ್ತಿ ಅಡಗಿದ್ದರೂ ಅಂಬೆಗಾಲಿಡುವುದನ್ನು ಕಲಿಯುವ ಮೊದಲು ಒಮ್ಮೆಲೆ ಹತ್ತು ಮೈಲುಗಳ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ,ನಾವು ನಿಂತ ಸ್ಥಾನದಿಂದ ಮುನ್ನಡೆಯಬೇಕು,ಮೇಲೇರಬೇಕು,ಸದ್ಯದ ಯೋಜನೆ ಯೋಚನೆಗಳೇನು?ಇದನ್ನು ಎಷ್ಟರಮಟ್ಟಿಗೆ ಹೇಗೆ ಹೆಚ್ಚಿಸಿಕೊಳ್ಳಬಹುದು?ಎಂಬುದನ್ನು ಅರಿಯದೇ ಇತರರಿಗೆ ಹೋಲಿಸಿಕೊಂಡು ಅನುಕರಿಸಹೊರಟರೆ,ದುಡುಕಿದರೆ,ಧೃತಿಗೆಟ್ಟು ಮುಗ್ಗರಿಸಿ ಬೀಳಬೇಕಾಗುತ್ತದೆ.ಹೀಗೆ ಬಿದ್ದವರು ಬೀಳುವುದಕ್ಕೆ ಕಾರಣ ತನ್ನಲ್ಲಿಲ್ಲ,ನೆಲವೇ ಅಂಕುಡೊಂಕಾಗಿದೆ ಎಂದು ಯೋಚಿಸದೆ ಯೋಜಿಸದೆ ತಪ್ಪು ದಾರಿಯಲ್ಲಿ ನಡೆದೂ ತನ್ನನ್ನು ತಾನು ಸಮರ್ಥಿಸಿಕೊಂಡು ತನ್ನ ಅಭ್ಯುದಯಕ್ಕೆ ತಾನೇ ಆಘಾತ ಮಾಡಿಕೊಳ್ಳುವದುಂಟು.ಮುನ್ನಡೆದವರ ಬಗೆಗೆ ಮತ್ಸರ ತಳೆಯುವದುಂಟು.ಇದಕ್ಕೆ ಕಾರಣ ತಾಳ್ಮೆಯ ಕೊರತೆ.ಪ್ರಗತಿಪಥದ ಪಯಣಿಗರಾದವರು ತಾಳ್ಮೆ ಎಂಬ ಮಹಾಗುಣವನ್ನು ದಿನದಿನವೂ ರೂಢಿಸಿಕೊಳ್ಳಲೇಬೇಕು.
ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ತೆರನಾದ ಕಷ್ಟವನ್ನು ಅನುಭವಿಸಲೇಬೇಕು.ಕಷ್ಟಬಂದಾಗ ದಿಕ್ಕೇ ತೋಚದೆ ಹತಾಶರಾಗಿ ನಿರುತ್ಸಾಹಿಗಳೂ,ನಿರಾಶಾವಾದಿಗಳೂ ಆಗಿರುತ್ತಾರೆ.ತಮ್ಮ ಈ ಸಂಕಟಕ್ಕೆ ಇತರರೇ ಕಾರಣರೆಂದು ಅವರನ್ನು ನಿಂದಿಸಿ ಸಂತಸ ಪಡುತ್ತಾರೆ.ಮತ್ತೆ ಕೆಲವರು ದುಃಖವನ್ನು ತಡೆಯಲಾಗದೇ ಆತ್ಮಹತ್ಯೆಯಂತ ಹೀನಕಾರ್ಯದಲ್ಲಿ ತೊಡಗುತ್ತಾರೆ.ಸುಖ ದುಃಖಗಳು ಜೀವನ ಎಂಬ ನಾಣ್ಯದ ಎರಡು ಮುಖಗಳು.ಇವೆರಡೂ ಬದುಕಿನಲ್ಲಿ ಸ್ಥಾಯಿಯಲ್ಲ.ದುಃಖ ಬಂದಾಗ ಹತಾಶರಾಗದೇ ಅದರ ಕಾರಣವನ್ನು ಕಂಡು ಹಿಡಿದು,ಅದನ್ನು ಎದುರಿಸಿ ದಾಟಲು ಧೈರ್ಯಗೆಡದೇ ತಾಳ್ಮೆಯಿಂದ ಇರಬೇಕು.

.


ತಾಳ್ಮೆಯನ್ನು ಬೆಳೆಸಿಕೊಳ್ಳಲು ಸದಾ ಜಾಗರೂಕರೂ ವಿನಮ್ರರೂ ಆಗಬೇಕು.ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬಾರದು.ಎಂಬಂತೆ ಉದ್ವೇಗದ ಹೊತ್ತಿನಲ್ಲಿ ಇತರರನ್ನು ನೋಯಿಸಬಾರದು.ಒಂದು ವೇಳೆ ನೋಯಿಸಿದರೂ ಅದರಿಂದ ಪರಿತಾಪ ಪ್ರಶ್ಚಾತ್ತಾಪದ ಅಭಿವ್ಯಕ್ತಿಗೆ ತಾಳ್ಮೆಯನ್ನು ಕಾಯ್ದುಕೊಳ್ಳಬೇಕು.
ಈ ತಾಳ್ಮೆಗುಣದ ಎಂಬ ಸಂಸ್ಕಾರವು ಕೂಡ ಕುಟುಂಬದಿಂದ ಬಂದಿರುತ್ತದೆ.ಮನೆಯಲಿರುವ ಮನಗಳ ತಾಳ್ಮೆ, ಶಾಂತಿಯ ನಡೆನುಡಿಯೆ ಮಕ್ಕಳಿಗೆ ದಾರಿದೀಪ!
ತಾಳ್ಮೆಯ ಸೆಲೆಯ ಬಲೆ
ಸಂತಸದ ಜೀವನಕೆ ಬೆಲೆ
ಇದು ಒಂದು ಬದುಕುವ ಕಲೆ

ಅರಿತು ನಡೆದರೆ ಭವಿಷ್ಯಕೊಂದು ನೆಲೆ


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

4 thoughts on “

  1. ವಂದನೆಗಳು ಟೀಚರ್
    ತುಂಬಾ ಚೆನ್ನಾಗಿ ಲೇಖನ ಮೂಡಿ ಬಂದಿದೆ

Leave a Reply

Back To Top