ಸುಕನಸುರವರ ಗಜಲ್

ಕಾವ್ಯ ಸಂಗಾತಿ

ಗಜಲ್

ಸುಕನಸು

ಜೊತೆಯಲ್ಲಿರಲು ಬಯಸುವೆ ಒಪ್ಪುವೆಯಾ ನಲ್ಲ
ಕನಸಿನ ಲೋಕ ಸುತ್ತಾಡುವಾಸೆ ಬರುವೆಯಾ ನಲ್ಲ

ಚಂದಿರ ತಾರೆಂದು ಹಟವ ನಾನೆಂದೂ ಮಾಡಲಾರೆ
ಬೆಳದಿಂಗಳಲ್ಲಿ ಒಟ್ಟಿಗೆ ನಡೆವ ಇಚ್ಛೆ ಸಿಗುವೆಯಾ ನಲ್ಲ

ಅಷ್ಟೈಶ್ವರ್ಯ ಸ್ವಪ್ನದಲೂ ನಾ ಕೋರಾಲಾರೆ ಪ್ರಿಯ
ನಿನ್ನೊಲವ ಸವಿಯ ಆಶಿಸಿರುವೆ ಕೊಡುವೆಯಾ ನಲ್ಲ

ನಶ್ವರ ವಸ್ತುಗಳಿಗೆ ಜಗಳವಾಡಿ ಪೀಡಿಸಲಾರೆ ಗೆಳೆಯ
ನಿನ್ನ ಮಡಿಲಲ್ಲಿ ಸಗ್ಗ ಕಲ್ಪಿಸಿರುವೆ ತೋರುವೆಯಾ ನಲ್ಲ

ಪ್ರೇಮಸುಮದ ಪರಿಮಳ ಪಸರಿಸಿದೆ ಮನದ ತುಂಬಾ
ಆನಂದದ ನಶೆಯ ಹಂಬಲಿಸಿರುವೆ ತರುವೆಯಾ ನಲ್ಲ


Leave a Reply

Back To Top