ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಟು-ಲೆಟ್ (ಮನೆ ಬಾಡಿಗೆಗೆ ಇದೆ )

ಟು-ಲೆಟ್

ತಾರಾಗಣ –  ಸಂತೋಷ್ ಶ್ರೀ ರಾಮ್, ಶೀಲ ರಾಜಕುಮಾರ್ , ಧರುಣ್, ಅಧೀರ ಪಾಂಡಿ ಲಕ್ಷ್ಮಿ

ನಿರ್ದೇಶನ-Chezian ಚೆಝಿಯನ್

ಸೌಂಡ್ ಡಿಸೈನ್ -ತಪಸ್ ನಾಯಕ್

ಇಳಂಗೋ( ಸಂತೋಷ್ ಶ್ರೀ ರಾಮ್) ಪ್ರವರ್ಧಮಾನಕ್ಕೆ ಬರುತ್ತಿರುವ ಒಬ್ಬ ಸಿನಿಮಾ ಸಹ ನಿರ್ದೇಶಕ ಮತ್ತು ಚಿತ್ರ ಸಾಹಿತಿ, ಅವನದು ಕೆಳ ಮಧ್ಯಮ ವರ್ಗದ ಕುಟುಂಬ .ಚೆನ್ನೈನ ಒಂದು ವಸತಿ ಸಮುದಾಯದಲ್ಲಿ ಅವನದು ಒಂದು ಪುಟ್ಟ ಬಾಡಿಗೆ ಮನೆ, ಅವನ ಹೆಂಡತಿ ಅಮುದ (ಶೀಲರಾಜ್ ಕುಮಾರ್ )ಹಾಗೂ ಐದು ವರ್ಷದ ಮಗ ಸಿದ್ದಾರ್ಥ್ (ಧರುಣ್ )ಇದಿಷ್ಟೇ ಅವರ ಸಂಸಾರ . ಬಣ್ಣ ಮಾಸಿದ ,ಸರಿಯಾಗಿ ನೀರು ಬರದ ,ವಿದ್ಯುತ್ ಸಂಪರ್ಕ ಸರಿ ಇಲ್ಲದ, ಟಾಯ್ಲೆಟ್ ಕಟ್ಟಿಕೊಂಡ ಆ ಮನೆಯಲ್ಲಿ ಹೊಂದಿಕೊಂಡು ಬಾಳುತ್ತಿದ್ದ ಅವರಿಗೆ ,ತುರ್ತಾಗಿ ಮನೆ ಖಾಲಿ ಮಾಡಬೇಕೆಂದು ಮನೆ ಒಡತಿಯ ತಾಕೀತಾಗಿದೆ…!!

           ಕೇವಲ ಒಂದು ತಿಂಗಳ ಅವಧಿಯಲ್ಲಿ ಹೊಸ ಮನೆಯನ್ನು ಹುಡುಕಬೇಕಾದ ತುರ್ತು ಅಗತ್ಯ ಈ ದಂಪತಿಗೆ ಇದೆ ,ತಮ್ಮ ಆದಾಯಕ್ಕೆ  ಎಟುಕುವ ಮನೆ ಹುಡುಕುವ ಅವರ ಸಾಹಸಯಾತ್ರೆಯೇ ಈ ಸಿನಿಮಾ “ಟು- ಲೆಟ್.”.  (To-let)

            ಸಿನಿಮಾದ ಕಾಲಘಟ್ಟ 2007 ರ ಇಸವಿ ಅಂದರೆ ಆಗಷ್ಟೇ ಚೆನ್ನೈನಲ್ಲಿ ಐಟಿ ಉದ್ಯಮ ತಳವೂರುತ್ತಿರುವ ಕಾಲ ,ಐಟಿ ಉದ್ಯಮಿಗಳ ಐಷಾರಾಮಿ ಜೀವನದ ಫಲವಾಗಿ ಸಾಮಾಜಿಕ ಸ್ತರಗಳ ಮೇಲೆ ದುಷ್ಪರಿಣಾಮ ಉಂಟಾದ ಕಾಲವದು.   ಎಲ್ಲಾ ಬೆಲೆಗಳ ಏರಿಕೆಯಾಗಿ ಕೆಳಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಲಭ್ಯವಿಲ್ಲ ಹಾಗಾಗಿಯೇ ಚಿತ್ರದ ನಾಯಕ ಇಳಂಗೋ ಮನೆ ಹುಡುಕುವ ಹರಸಾಹಸ ಮಾಡುತ್ತಾನೆ.

             ನಾಯಕ ಇಳಂಗೊನಿಗೆ ಒಂದು ನಿಯಮಿತ ಆದಾಯವಿಲ್ಲ, ಅವನು ನೆಚ್ಚಿಕೊಂಡಿರುವುದು ಸಿನಿಮಾರಂಗ ಅಲ್ಲಿ ಅವನು ಸ್ಕ್ರಿಪ್ಟ್ ಬರೆಯುತ್ತಾನೆ, ಅವನ ಸಂಪಾದನೆಯಲ್ಲಿ ಅವರ ಮೂರು ಜನರ ಸಂಸಾರ ತೂಗುವುದು ಬಹಳ ಕಷ್ಟ .ಹಾಗಾಗಿ ಅವನು ಸಿನಿಮಾ ತಂಡದಲ್ಲಿ ಬೇರೆ ಬೇರೆ ಕೆಲಸವನ್ನು ಮಾಡುತ್ತಾನೆ ,ತನ್ನ ಇರುವ ಒಬ್ಬನೇ ಮಗನನ್ನು ಒಳ್ಳೆಯ ಶಾಲೆಯಲ್ಲಿ ಓದಿಸುತ್ತಿರುತ್ತಾನೆ. ಬರುವ ಸ್ವಲ್ಪ ಸಂಪಾದನೆಯಲ್ಲಿ ಜೀವನ ತೂಗಿಸುವ ಒದ್ದಾಟ ಅವನಿಗೆ ಈಗ ಧಿಡೀರ್ ಎಂದು ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ…

                ಇಡೀ ಚಿತ್ರ ಸಾಗುವುದು ಅವರ ಪುಟ್ಟ ಮನೆಯಲ್ಲಿ ಹಾಗೂ ಅವರ ಮನೆ ಭೇಟಿಗಳ ಚಿತ್ರಣದಲ್ಲಿ.

ಸದಾ ಬಾಗಿಲು ಮುಚ್ಚಿದ ಅವರ ಮನೆಯ ಒಳಗೆ ಅವರ ಸಂಸಾರದ ಸುಖ -ದುಃಖ ಸರಸ -ವಿರಸ ,ಸಲ್ಲಾಪ ಮಗನೊಂದಿಗೆ ಆಟ ಎಲ್ಲವನ್ನು  ಇಲ್ಲಿ ಬಹಳ ಸಹಜವಾಗಿ ತೋರಿಸಲಾಗಿದೆ .ಚಿತ್ರದಲ್ಲಿ ಯಾವುದೇ ಫ್ಲಾಶ್ ಬ್ಯಾಕ್ ಇಲ್ಲ, ಅವರ ಸಂಭಾಷಣೆಗಳಲ್ಲಿ ನಮಗೆ ತಿಳಿಯುವುದೇನೆಂದರೆ ಇಳಂಗೋ ಒಬ್ಬ ಹಿಂದುಳಿದ ಜಾತಿಗೆ ಸೇರಿದ ಯುವಕ, ಅಮುಧ ದಲಿತ ಕ್ರಿಶ್ಚಿಯನ್.

ಅವರಿಬ್ಬರದು ಪ್ರೇಮ ವಿವಾಹ ಅವರಿಗೆ ಯಾರ ಸಹಾಯ ಸಹಕಾರವೂ ಇಲ್ಲ.

               ಅವರು ಮನೆ ಹುಡುಕಲು ಹೋದಾಗ ಮನೆಯ ಮಾಲೀಕರು ಕೇಳುವ ಪ್ರಶ್ನೆಗಳು ಹೀಗೆ ..ಏನು ಕೆಲಸ?? ಸಸ್ಯ ಹಾರಿಯೋ? ಮಾಂಸಾಹಾರಿಯೋ? ಅವರ ಸಿನಿಮಾವೃತ್ತಿಯಿಂದಾಗಿ ಅವರಿಗೆ ಮನೆ ದೊರೆಯುವುದು ಕಷ್ಟ .”ಸಿನಿಮಾದವರಿಗೆ ರಾಜ್ಯವನ್ನಾಳುವ ಕೆಲಸ ಕೊಡುತ್ತಾರೆ ಆದರೆ ಮನೆ’ ವಾಸಕ್ಕೆ ಕೊಡುವುದಿಲ್ಲ ಅಲ್ಲಿರುವ ನಂಬಿಕೆ ಇಲ್ಲಿಲ್ಲ ” ಇದು ಪಾತ್ರ ಒಂದರ ಮಾತು.

           ಇಲ್ಲಿ ಆಹಾರವೂ ಕೂಡ ಅವರಿಗೆ ಮನೆ ಬಾಡಿಗೆ ಪಡೆಯಲು ಒಂದು ಮಾನದಂಡವಾಗಿ ಕಾಡುತ್ತಿದೆ .ಸಂಪ್ರದಾಯಸ್ಥ ಮನೆ ಮಾಲೀಕರುಗಳು ಇವರು ಮಾಂಸಾಹಾರಿಗಳಾದ್ದರಿಂದ ಮನೆ ಇವರಿಗೆ ನೀಡಲು ನಿರಾಕರಿಸುತ್ತಾರೆ…!!

          ಹೀಗೆ ದಿನ ದಿನವೂ ಅವರು ಮನೆ ಹುಡುಕುವ ಪ್ರಯತ್ನ ಮುಂದುವರಿಸುತ್ತಾರೆ ಆದರೆ ಅವರ ಯತ್ನಗಳು ವಿಫಲವಾಗುತ್ತಾ ಸಾಗುತ್ತವೆ. ಮನೆ ಖಾಲಿ ಮಾಡಲು ನೀಡಿದ ನಿಗಧಿತ ಸಮಯ ಹತ್ತಿರವಾದಂತೆ ಅವರ ಆತಂಕ ಹೆಚ್ಚುತ್ತದೆ ಈ ನಡುವೆ ಆಶಾದಾಯಕವಾಗಿ ಹೊಸದೊಂದು ಅಪಾರ್ಟ್ಮೆಂಟ್ ನಲ್ಲಿ ಹೊಸದೊಂದು ಫ್ಲಾಟ್ ಅವರಿಗೆ ಬಾಡಿಗೆ ಸಿಗುತ್ತದೆ .

          ಅಚ್ಚುಕಟ್ಟಾದ ಹೊಸದಾದ ಆ ಮನೆಗೆ ಮುಂಗಡ ಹಣ ನೀಡಲು ಹಣ ಹೊಂದಿಸಲು ಬಹಳ ಶ್ರಮಪಡುತ್ತಾರೆ. ತಾನು ಬರೆದ ಸಿನಿಮಾ ಕಥೆಯನ್ನು ಮಾರಿಕೊಳ್ಳಲು ಇಳಂಗೋ ಸಿಧ್ಧನಾಗುತ್ತಾನೆ ಆದರೆ ಅವನ ಹೆಂಡತಿ ತನ್ನದೊಂದು ಚಿನ್ನದ ಒಡವೆಯನ್ನು ನೀಡಿ ಅದನ್ನು ಮಾರಿ ಹಣ ಹೊಂದಿಸಲು ಹೇಳುತ್ತಾಳೆ.

       ತಮ್ಮ ಕನಸಿನ ಆ ಮನೆಗೆ ಹೋಗಲು ಅವರಿಗೆ ಸಾಧ್ಯವಾಯಿತೇ ?ಇಲ್ಲವೇ ?! ಎಂಬುದು ಚಿತ್ರದ ಸ್ವಾರಸ್ಯ..

          ಈ ನಡುವೆ ಅವರು ವಾಸವಿರುವ ಮನೆಯ ಮಾಲೀಕಳ ದಬ್ಬಾಳಿಕೆಯ ಕಿರಿಕಿರಿಯನ್ನು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ ಅಮುದಾಳ ಮೇಲೆ ನಿರಂತರವಾಗಿ ಮನೆಯ ಮಾಲೀಕಳು ದರ್ಪ ಪ್ರದರ್ಶನ ಮಾಡುತ್ತಾಳೆ. ಮಾಲೀಕಳ ಮೇಲೆ ಅಮುದಾಳಿಗೆ ಭರಿಸಲಾರದ ಸಿಟ್ಟು ಆದರೆ ಅದನ್ನು ಅವಳು ವ್ಯಕ್ತಪಡಿಸಲಾರದ ಅಸಹಾಯಕಳು..!

            ಚಿತ್ರದೊಂದು ದೃಶ್ಯದಲ್ಲಿ ಇವರು ಮನೆಯಲ್ಲಿ ಊಟ ಮಾಡುವ ಸಮಯದಲ್ಲಿ ಬಾಡಿಗೆಗೆ ಮನೆ ನೋಡಲು ಬೇರೆಯವರು ಬರುತ್ತಾರೆ . ಅವರು ಊಟ ಅರ್ಧಕ್ಕೆ ನಿಲ್ಲಿಸುತ್ತಾರೆ..ಇಲ್ಲಿ ಅವರ ಖಾಸಗಿ ತನಕ್ಕೆ ಧಕ್ಕೆಯಾಗುತ್ತದೆ, ಹಾಗೂ ಮನೆ ನೋಡಲು ಬಂದ ವ್ಯಕ್ತಿ ವಾರ್ಡ್ರೋಬ್ ತೆಗೆದಾಗ ಅಮುಧಳ  ಒಳವಸ್ತ್ರಗಳು ಸ್ಯಾನಿಟರಿ ಪ್ಯಾಡ್ ಗಳು ಕೆಳಗೆ ಬೀಳುತ್ತವೆ .. ಇದರಿಂದ ಅವರು ಮುಜುಗರ ಅನುಭವಿಸುತ್ತಾರೆ ಹೀಗೆ ಹಲವು ಸೂಕ್ಷ್ಮಗಳು ಸಣ್ಣ ಸಣ್ಣ ವಿಚಾರಗಳು ಚಿತ್ರದಲ್ಲಿ ಅಭಿವ್ಯಕ್ತಿಗೊಂಡಿದೆ.

           ಮತ್ತೊಂದು ದೃಶ್ಯದಲ್ಲಿ ಪುಟ್ಟ ಬಾಲಕ ಅವರ ಅಪ್ಪನನ್ನು ಕಥೆ ಹೇಳಲು ಕೇಳುತ್ತಾನೆ ಅಪ್ಪ ಸಿಂಹ ಇಲಿಯನ್ನು ಬೇಟೆಯಾಡಿದ ಕಥೆಯನ್ನು ಹೇಳುತ್ತಿರುತ್ತಾನೆ. ಅತ್ತ ಮಹಡಿಯ ಮೇಲೆ ಮನೆಯ ಮಾಲೀಕಳು ಅಮುದಳನ್ನು ಜೋರಾಗಿ ತರಾಟೆಗೆ ತೆಗೆದುಕೊಂಡಿರುತ್ತಾಳೆ.

           ಪುಟ್ಟ ಬಾಲಕ ಸಿದ್ದಾರ್ಥ್ ಗೋಡೆಯ ಮೇಲೆಲ್ಲ ಚಿತ್ರಗಳನ್ನು ಬರೆದಿರುತ್ತಾನೆ ತನ್ನ ಕನಸಿನ ಮನೆ ಕಾರು ಇವನ್ನೆಲ್ಲಾ ಚಿತ್ತಾರವಾಗಿಸಿದ್ದಾನೆ ಕ್ಯಾಮರಾ ಕಣ್ಣಿನಲ್ಲಿ ಇವೆಲ್ಲವೂ ಸೆರೆಯಾಗಿದೆ.

         ಚಿತ್ರದ ಕೊನೆಯ ದೃಶ್ಯದಲ್ಲಿ ಅಪ್ಪ ಇಸ್ತ್ರಿ ಮಾಡುವ ಸಮಯದಲ್ಲಿ ಮಗ ತಾನು ಬರೆದ ಮನೆಯ ಮಾಲಿಕಳು ಮುದುಡಿದಚಿತ್ರದ ಹಾಳೆಯನ್ನು ಇಸ್ತ್ರಿ ಮಾಡಲು ನೀಡುತ್ತಾನೆ ..!ಅಪ್ಪಾ ಅದನ್ನು  ಇಸ್ತ್ರಿ ಮಾಡುತ್ತಾನೆ ಅಲ್ಲಿ ಹೊಸದೊಂದು ಭರವಸೆ ಮೂಡುತ್ತದೆ .ಈ ದೃಶ್ಯ ಚಿತ್ರದ ನಿರ್ದೇಶಕರ ಸೂಕ್ಷ್ಮತೆಗೆ ಹಿಡಿದ ಕನ್ನಡಿ ಯಂತಿದೆ.

      ಚಿತ್ರದಲ್ಲಿ ಆಗಾಗ ಅವರ ಮನೆಯಲ್ಲಿ ಗೂಡು ಕಟ್ಟಿದ ಗುಬ್ಬಿಗೂಡನ್ನು  ತೋರಿಸುತ್ತಾರೆ .ಆ ಹಕ್ಕಿಯಂತೆ ಆ ಮನೆಯಲ್ಲಿ ಅವರು ಬಂಧಿ ಗಳೇನೋ ಎಂಬಂತೆ ಭಾಸವಾಗುವಲ್ಲಿ ಚಿತ್ರದಲ್ಲಿ ನಿರ್ದೇಶಕರ ಜಾಣ್ಮೆ ಗುರುತಿಸಬಹುದು.

           ಇಡೀ ಚಿತ್ರ ಜಾಗತೀಕರಣದ ಪ್ರಭಾವ ಮಧ್ಯಮ ವರ್ಗದ ಮೇಲೆ ಅದರ ಪರಿಣಾಮ ಜಾತಿ ವರ್ಗಗಳು ಸಮಾಜದ ಮೇಲೆ ಮಾಡಿರುವ ಪ್ರಭಾವಗಳನ್ನೆಲ್ಲ ಬಹಳ ಸೂಚ್ಯವಾಗಿ ತೋರಿಸಿದೆ.

       ಇಂತಹದೊಂದು ವಿಭಿನ್ನ ಕಥಾ ವಸ್ತುವನ್ನು ಇಟ್ಟುಕೊಂಡು ಬಹಳ ಸರಳವಾಗಿ ನೇರವಾಗಿ ಅದನ್ನು ನಿರೂಪಿಸುವಲ್ಲಿ ನಿರ್ದೇಶಕ ಚೆಝಿಯನ್ ಅವರ ಕೈಚಳಕ ಮೆಚ್ಚುವಂಥದ್ದು .ಅದಕ್ಕಾಗಿಯೇ ಈ ಚಿತ್ರಕ್ಕೆ ಉತ್ತಮ ಚಿತ್ರವೆಂಬ ಪ್ರಶಸ್ತಿಯು ಲಭ್ಯವಾಗಿದೆ.

         ಬಹುತೇಕ ಸಿನಿಮಾ ಮನೆಯ ಒಳಗೆ ನಡೆದರೂ ನೆರಳು ಬೆಳಕಿನ ಸಂಯೋಜನೆ ಸಿನಿಮಾ ಟೋ ಗ್ರಾಫಿ ಪರಿಣಾಮಕಾರಿಯಾಗಿ ಮೂಡಿದೆ .ಇದಕ್ಕೆ ಪೂರಕವಾದ ಹಿನ್ನೆಲೆ ಸಂಗೀತವು ಸೇರಿಕೊಂಡಿದೆ .ಒಟ್ಟಾರೆಯಾಗಿ ಚಿತ್ರ ಯಾವುದೇ ಕೃತಕತೆ ಇಲ್ಲದೆ ನಮ್ಮ ಕಣ್ಣುಮುಂದೆ ನಡೆದಂತೆ ಭಾಸವಾಗುತ್ತದೆ

           ಅಭಿನಯದಲ್ಲಿ ಚಿತ್ರದ ನಾಯಕ ಇಳಂಗೋ  ಪಾತ್ರವನ್ನು ಸಂತೋಷ್ ಶ್ರೀರಾಮ್ ನಾಯಕಿ ಯಾಗಿ ಶೀಲ ರಾಜಕುಮಾರ್ ಮನೆಮುಟ್ಟುವಂತೆ ಅಭಿನಯಿಸಿದ್ದಾರೆ ,ಬಾಲ ಪ್ರತಿಭೆ  ಧರುಣ್ ಸಿದ್ಧಾರ್ಥ ಪಾತ್ರದಲ್ಲಿಅತ್ಯುತ್ತಮ ಅಭಿನಯ ನೀಡಿದ್ದಾನೆ.

          ಬೆಚ್ಚನೆಯ ಮನೆಯನ್ನು ಹೊಂದಬೇಕೆಂಬುದು ಎಲ್ಲರ ಕನಸೇ ಆಗಿದೆ ಅಂತಹ ಮನೆಯ ಹುಡುಕಾಟದಲ್ಲಿ ಪಡುವ ಪ್ರಾಯಾಸ ಎಷ್ಟು ?ಏನು ?ಎಂದು ತಿಳಿಯಲು ಈ ಸಿನಿಮಾ ನೋಡಬೇಕು.

       2018ರಲ್ಲಿ ಬಿಡುಗಡೆಯಾಗಿ ಉತ್ತಮ ಚಿತ್ರ ಎಂಬ ಪ್ರಶಸ್ತಿಗೆ ಭಾಜನ ವಾದ ಈ ಸಿನಿಮಾದ ಕಾಲಾವಧಿ ಒಂದು ಗಂಟೆ 35 ನಿಮಿಷ  ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ.

ತಾರಾಗಣ –  ಸಂತೋಷ್ ಶ್ರೀ ರಾಮ್, ಶೀಲ ರಾಜಕುಮಾರ್ , ಧರುಣ್, ಅಧೀರ ಪಾಂಡಿ ಲಕ್ಷ್ಮಿ

ನಿರ್ದೇಶನ-Chezian ಚೆಝಿಯನ್

ಸೌಂಡ್ ಡಿಸೈನ್ -ತಪಸ್ ನಾಯಕ್


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top