ಸಿನೆಸಾಹಿತ್ಯವನ್ನು ಶ್ರೀಮಂತಗೊಳಿಸಿದ ಚಿ. ಉದಯಶಂಕರ

ನೆನಪಿನ ಸಂಗಾತಿ

ಸಿನೆಸಾಹಿತ್ಯವನ್ನು ಶ್ರೀಮಂತಗೊಳಿಸಿದ

ಚಿ. ಉದಯಶಂಕರ

ಜನ್ಮದಿನದ ನೆನಪಿಗೆ

” ಆಡಿಸಿ ನೋಡು, ಬೀಳಿಸಿ ನೋಡು….”
” ನಾವಾಡುವ ನುಡಿಯೆ ಕನ್ನಡ ನುಡಿ….”
“ಮಾಮರವೆಲ್ಲೊ ಕೋಗಿಲೆಯೆಲ್ಲೋ….”
“ಆಕಾಶವೆ ಬೀಳಲಿ ಮೇಲೆ……”
“ಬಾನಲ್ಲು ನೀನೆ, ಬುವಿಯಲ್ಲು ನೀನೇ…”
“ಶಿಲೆಗಳು ಸಂಗೀತವಾ ಹಾಡಿವೆ…”


ಆಹಾ! ಒಂದೊಂದು ಹಾಡೂ ಮಧುರ, ಅತಿಮಧುರ. ಇಂತಹ ಮೂರುಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದು ಮೂರು ದಶಕಗಳ ಕಾಲ ಕನ್ನಡಿಗರ ಹೃದಯ ಸೂರೆಗೊಂಡ ಚಿತ್ರಗೀತ ರಚಯಿತ ಚಿ. ಉದಯಶಂಕರ್ ಅವರ ಹೆಸರು ಕೇಳದವರಾರು?
ಚಿತ್ತನಹಳ್ಳಿ ಉದಯಶಂಕರ ಅವರ ತಂದೆ ಚಿ. ಸದಾಶಿವಯ್ಯನವರೂ ಚಿತ್ರ ಸಾಹಿತಿಯೇ. ೧೯೩೪ ರ ಫೆ. ೧೮ ರಂದು ಜನಿಸಿದ ಉದಯಶಂಕರ ತಂದೆಯ ಪ್ರಭಾವದಿಂದ ತಾವೂ ಚಿತ್ರಸಾಹಿತ್ಯ ರಚನೆಗೆ ತೊಡಗಿದರು. ಅವರು ಚಿತ್ರಗೀತೆ ರಚಿಸಿದ ಮೊದಲ ಚಿತ್ರ ಸಂತ ತುಕಾರಾಮ. (೧೯೬೩). ನಂತರ ಕೇವಲ ಡಾ. ರಾಜಕುಮಾರ ಅವರ ೯೨ ಸಿನೆಮಾಗಳಿಗೇ ಹಾಡು ಸಂಭಾಷಣೆ ಬರೆದರು. ಸತಿ ಸಾವಿತ್ರಿ, ನಟಸಾರ್ವಭೌಮ, ಬಂಗಾರದ ಹೂವು, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ, ಎರಡು ಕನಸು, ಚೂರಿ ಚಿಕ್ಕಣ್ಣ, ಗಂಧದ ಗುಡಿ, ಸಂಪತ್ತಿಗೆ ಸವಾಲ್, ಸನಾದಿ ಅಪ್ಪಣ್ಣ, ಹೊಸ ಬೆಳಕು, ಕುಲಗೌರವ, ಮಯೂರ, ಮೇಯರ್ ಮುತ್ತಣ್ಣ, ಒಂದೇ ಎರಡೇ….
ರಾಜ್ ಪುತ್ರ ಶಿವರಾಜಕುಮಾರ ಅವರ ಮೊದಲ ಚಿತ್ರ ಆನಂದ ಕ್ಕೂ ಚಿ. ಉದಯಶಂಕರ್ ಅವರೇ ಹಾಡು ಬರೆದರು. ವಿಷ್ಣುವರ್ಧನ, ಮತ್ತಿತರ ನಾಯಕರ ಹಲವು ಚಿತ್ರಗಳಿಗೂ ಸಾಹಿತ್ಯ ರಚಿಸಿದರು. ಸ್ವತ: ಮಂಕುದಿಣ್ಣೆ ಎಂಬ ಚಿತ್ರ ನಿರ್ದೇಶಿಸಿದರು. ಹಾಲುಜೇನು, ನೀ ನನ್ನ ಗೆಲ್ಲಲಾರೆ, ಹಳ್ಳಿರಂಭೆ, ಆನಂದ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಉತ್ತಮ ಸಂಭಾಷಣೆಗಾಗಿ ನಾಲ್ಕು ಸಲ, ಉತ್ತಮ ಗೀತರಚನೆಗೆ ಎರಡು ಸಲ ರಾಜ್ಯ ಪ್ರಶಸ್ತಿಗಳು ದೊರಕಿದವು. ಅಭಿಮಾನಿಗಳಿಂದ ಸಾಹಿತ್ಯರತ್ನ ಬಿರುದು ದೊರಕಿತು. ಪತ್ನಿ ಶಾರದಮ್ಮ. ಮಗ ಗುರುದತ್ತ ನಟ ನಿರ್ದೇಶಕ. ಒಂದು ಹಂತದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ಚಿ. ಉದಯಶಂಕರ ಅನಿವಾರ್ಯ ಎನಿಸುವಷ್ಟು ಖ್ಯಾತಿ ಜನಪ್ರಿಯತೆ ಗಳಿಸಿದರು. ಎಂದೆಂದೂ ನೆನಪುಳಿಯುವಂತಹ ಹಾಡುಗಳನ್ನು ರಚಿಸಿದ ಉದಯಸಂಕರ ೧೯೯೩ ಜುಲೈ ೨ ರಂದು ೫೯ ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು.

——————————


ಎಲ್. ಎಸ್. ಶಾಸ್ತ್ರಿ

Leave a Reply

Back To Top