ಭಾರತಿ ಅಶೋಕ್ ಕವಿತೆ-ಗಿಳಿಯ ಸ್ವಗತ

ಕಾವ್ಯಸಂಗಾತಿ

ಭಾರತಿ ಅಶೋಕ್

ಗಿಳಿಯ ಸ್ವಗತ

ಬಣ್ಣದ ಗಿಳಿ ಹಣ್ಣು ಕುಕ್ಕಿ ಅರ್ಧಂಬರ್ಧ
ತಿಂದು
ಹಾರುವುದ ನೀವು ಕಂಡಿದ್ದೀರಿ,
ಅಂತಹ ಗಿಳಿ ನಾನಲ್ಲ.

ನಾನೊಂದು ಬಂಗಾರ ಪಂಜರದ ಗಿಳಿ
ನನ್ನದೇನಿದ್ದರೂ ಪಂಜರವಾಸ.
ನನ್ನೊಡೆಯನ ಮುದ್ದಿನ ಗಿಳಿ ನಾನು.
ಪ್ರೀತಿ(?)ಯಿಂದ ಸಾಕಿಹನು ಬಂಗಾರ
ಪಂಜರದೊಳಗೆ!

ಜಗದಗಲಕೂ ಹಾರುತ ನೂರಾರು
ಹಣ್ಣುಗಳ ಸವಿಯುವ ಗೋಜು ನನಗಿಲ್ಲ.
ನಾನೂ ತಿನ್ನುವೆ ಪಂಜರದಲೇ ತುಂಡರಿಸಿ
ಹಾಕಿದ ಹಣ್ಣು.

ಗಿಳಿಯು ಕಚ್ವಿದ ಹಣ್ಣು ಬಲು ರುಚಿ
ಇರಬಹುದು ನಿಮಗೆ
ನನ್ನೊಡೆಯನ ಪಾಲಿಗೆ
ನಾನೇ ಗಿಳಿಕಚ್ಚಿದ ಹಣ್ಣು ನನಗದೇ ಭಾಗ್ಯ(?)

ಪಂಜರದಲೆ ಒಡೆಯನ
ರಮಿಸುವಿಕೆಯಲಿ
ಮೈಮರೆತು ಅವನ ತೊಳ್ತೆಕ್ಕೆಯಲಿ ನಲುಗಿ
ದಣಿದಿಹೆ ಒಡಲು
ಅದರ ಫಲ ಮರಿಗೆ ಮರಿ
ಹಾಕುವ ಪರಿಗೆ
ತನು ಹೇಸಿದೆ.

ನಾನು ಸ್ವಚ್ಚಂದ ಅಗಸದಲಿ
ರೆಕ್ಕೆ ಬಿಚ್ಚಿ ಹಾರುವ ಗಿಳಿಯಲ್ಲ.
ಒಡೆಯನ ಇಂಗಿತಕೆ ನನ್ನ ಬದುಕ ಪರಿ.

ಓ ಮಾಮರದ ಗಿಳಿಯೇ ನಿನ್ನೊಡನೆ ನಾನು
ಬಾನಿಗೆ
ಹಾರುತ ಜೀವ ಪ್ರೀತಿಯ ಸ್ವೇಚ್ಚೆಯಾಗಿ
ಸವಿಯಲು ಕಾತರದಿ ಕಾದಿಹೆನು

ಗತದ ಪಾಪಕೂಪದ ಬದುಕ
ದಿಕ್ಕರಿಸಿ
ನಿನ್ನೊಟ್ಟಿಗೆ ಹಾರುವ ಕಲಾವಂತಿಕೆ
ನನಗೂ ಕಲಿಸಿ ಕೊಡು ಮಾತಿನರಗಿಳಿ.


Leave a Reply

Back To Top